ಶಿವಮೊಗ್ಗ:ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಒಳಾಂಗಣದಲ್ಲಿ ಜುಲೈ 12ರಿಂದ 14ರವರೆಗೆ ರಾಜ್ಯಮಟ್ಟದ ಹಿರಿಯ ಪುರುಷ ಹಾಗೂ ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ.
ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ಹಾಗೂ ಭದ್ರಾವತಿ ಶುಗರ್ ಟೌನ್ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಈ ಸ್ಪರ್ಧೆ ನಡೆಯಲಿವೆ ಎಂದು ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ವಿವರ ನೀಡಿದರು.
ರಾಜ್ಯದ 300ಕ್ಕೂ ಹೆಚ್ಚು ಕ್ರೀಡಾಪಟಗಳು, 20ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಟುಗಳು, 40 ತೀರ್ಪುಗಾರರು, ಅಧಿಕಾರಿಗಳು ಭಾಗವಹಿಸುವರು. ಪವರ್ ಲಿಫ್ಟಿಂಗ್ ಈಚಿನ ದಿನಗಳಲ್ಲಿ ತುಂಬಾ ಜನಪ್ರಿಯವಾಗುತ್ತಿದೆ. ಸುಮಾರು 108 ರಾಷ್ಟ್ರಗಳಲ್ಲಿ ಇದು ವಿಸ್ತರಿಸಿದೆ. ರಾಜ್ಯದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ಎಂದರು.
12ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್ ಪಂದ್ಯ ಉದ್ಘಾಟಿಸುವರು. 14ರಂದು ಸಮಾರೋಪ. ಪವರ್ ಲಿಫ್ಟಿಂಗ್‌ನಲ್ಲಿ ಅಂತರರಾಷ್ಟ್ರೀಯ ಸಾಧನೆ ಮಾಡಿದ ಕೆ.ಪ್ರಕಾಶ್ ಕಾರಂತ್, ಸುಜಯ್ ಜನಾರ್ದನ್, ರಜನಿ ಅವರನ್ನು ಸನ್ಮಾನಿಸಲಾಗುತ್ತದೆ.ಮಹಿಳೆಯರ 7 ವಿಭಾಗದಲ್ಲಿ, ಪುರುಷರ 8 ವಿಭಾಗದಲ್ಲಿ ಸ್ಪರ್ಧೆ ನಡೆಯಲಿವೆ. ರಾಷ್ಟ್ರಮಟ್ಟದ ಸರ್ಧೆಗೆ ಆಯ್ಕೆ ನಡೆಯಲಿದೆ ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪವರ್ ಲಿಫ್ಟಿಂಗ್ ಸಂಸ್ಥೆಯ ಅಧ್ಯಕ್ಷ ಕೆ.ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಕೆ.ಪ್ರಶಾಂತ್ ಕಾರಂತ್, ಪದಾಧಿಕಾರಿಗಳಾದ ಆರ್.ಹರ್ಷ, ರಮೇಶ್, ದೇವರಾಜ್, ದೊರೈ ಚಿನ್ನಪ್ಪ ಉಪಸ್ಥಿತರಿದ್ದರು.