ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಭದ್ರಾ ಜಲಾಶಯದ ಸುರಕ್ಷೆ: ಕೇಂದ್ರಕ್ಕೆ ಮೊರೆ

₹100 ಕೋಟಿ ವೆಚ್ಚದ ಯೋಜನಾ ವರದಿ ಸಿದ್ಧಪಡಿಸಿದ ಕೆಎನ್‌ಎನ್
Published 11 ಜುಲೈ 2024, 0:12 IST
Last Updated 11 ಜುಲೈ 2024, 0:12 IST
ಅಕ್ಷರ ಗಾತ್ರ

ಶಿವಮೊಗ್ಗ: ಸಮೀಪದ ಲಕ್ಕವಳ್ಳಿ ಬಳಿ ಭದ್ರಾ ಜಲಾಶಯ ನಿರ್ಮಾಣಗೊಂಡು 61 ವರ್ಷ ಪೂರ್ಣಗೊಂಡಿದ್ದು, ಜಲಾಶಯವನ್ನು ಇನ್ನಷ್ಟು ಸುಭದ್ರಗೊಳಿಸುವುದಕ್ಕೆ ನೆರವು ಕೋರಿ ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್)ವು ಕೇಂದ್ರದ ಮೊರೆ ಹೋಗಿದೆ.

ದೇಶದ ಜಲಾಶಯಗಳ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಕೇಂದ್ರೀಯ ಜಲ ಆಯೋಗದ (ಸಿಡಬ್ಲ್ಯುಸಿ) ಅಧೀನದ ಜಲಾಶಯಗಳ ಪುನರುತ್ಥಾನ ಹಾಗೂ ಅಭಿವೃದ್ಧಿ ಯೋಜನೆ (Dam Rehabilitation and Improvement Project– DRIP) ಅಡಿ ಭದ್ರಾ ಜಲಾಶಯದ ಸುರಕ್ಷೆಗೆ ತಾಂತ್ರಿಕ ಹಾಗೂ ಆರ್ಥಿಕ ನೆರವು ಕೋರಲಾಗಿದ್ದು, ಇದಕ್ಕಾಗಿ ₹100 ಕೋಟಿ ಮೊತ್ತದ ಯೋಜನಾ ವರದಿ ಸಿದ್ಧಪಡಿಸಿದೆ.

1962ರಲ್ಲಿ ಗಾರೆ, ಸುಣ್ಣ ಹಾಗೂ ಕಲ್ಲು ಬಳಸಿ ಭದ್ರಾ ಜಲಾಶಯ ನಿರ್ಮಿಸಲಾಗಿದೆ. ಸಹಜವಾಗಿಯೇ ಜಲಾಶಯದ ತಳದಲ್ಲಿ ಒಂದಷ್ಟು ಸೋರಿಕೆಯೂ ಆಗುತ್ತಿದೆ. ಅದನ್ನು ತಡೆಯುವ ಜೊತೆಗೆ ಹಳೆಯದಾಗಿರುವ ಜಲಾಶಯದ ಗೇಟ್‌ಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ಉದ್ದೇಶಿಸಲಾಗಿದೆ. ಜರ್ಮನಿ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಜಲಾಶಯದ ನಿರ್ವಹಣೆಯ ಕ್ರೇನ್‌ಗಳನ್ನು ರೀ ಕಂಡೀಷನ್ ಮಾಡಬೇಕಿದೆ. ಸೇತುವೆ ಬಳಿ ಆಗಾಗ ಕುಸಿದು ಬೀಳುವ ತಡೆಗೋಡೆ ಸರಿಪಡಿಸಬೇಕಿದೆ. ಇದರೊಂದಿಗೆ ಜಲಾಶಯದ ಸುತ್ತಲೂ ಬೇಲಿ ನಿರ್ಮಿಸಿ ಭದ್ರಗೊಳಿಸುವ ಪ್ರಸ್ತಾವವೂ ಈ ಯೋಜನಾ ವರದಿಯಲ್ಲಿದೆ.

ಜಲಾಶಯದಲ್ಲಿನ (100 ಅಡಿಯಷ್ಟು ನೀರು ಸಂಗ್ರಹವಾಗುವ ಸ್ಥಳದಲ್ಲಿನ ಮೇಲಿನ ಭಾಗದಲ್ಲಿ) ಸಣ್ಣಪುಟ್ಟ ಸೋರಿಕೆಯನ್ನು ನೀರಾವರಿ ನಿಗಮವೇ ಪತ್ತೆ ಮಾಡಿ ಬೇಸಿಗೆಯಲ್ಲಿ ದುರಸ್ತಿ ಕೈಗೊಳ್ಳುತ್ತಿದೆ. ಭವಿಷ್ಯದಲ್ಲಿ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಈಗ ತಳಭಾಗದಲ್ಲಿನ ಸೋರಿಕೆ ಪತ್ತೆ ಮಾಡಿ ದುರಸ್ತಿ ಮಾಡಬೇಕಿದೆ. ಇದಕ್ಕಾಗಿ ಕಾರ್ಯ ಪ್ರವೃತ್ತವಾಗಬೇಕಿದ್ದು, ನೆರವು ಕೋರಲಾಗಿದೆ.

ಈ ಹಿಂದೆ ಸಿಮೆಂಟ್‌ ಬಳಸದೇ ಕಲ್ಲು–ಗಾರೆಗೆ ಚುರುಕಿ ಹಾಕಿರುವ ಜಲಾಶಯದ ಸುರಕ್ಷಾ ಗೋಡೆಗಳನ್ನು ಪುನಶ್ಚೇತನ ಯೋಜನೆಯಡಿ ಈಗ ನೀರಿನ ಒಳಗೂ ಹಾಕಬಹುದಾದ ಸಿಮೆಂಟ್ ಮೂಲಕ ಭದ್ರಗೊಳಿಸಲಾಗುತ್ತದೆ. ಕಲ್ಲಿನ ಜೋಡಣೆಗೆ (ಜಾಯಿಂಟ್ಸ್‌) ಸಿಮೆಂಟ್‌ ಕೋಟಿಂಗ್ ಮಾಡಲಾಗುತ್ತದೆ. ಈ ದುರಸ್ತಿ ಕಾರ್ಯ ಸುಮಾರು 130 ಅಡಿ ಆಳ ನೀರಿನಲ್ಲಿ ಮುಳುಗಿ ಮಾಡಬೇಕಿದೆ. ಇದಕ್ಕೆ ನುರಿತ ತಜ್ಞರ ನೆರವು ಪಡೆಯಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.

ಭದ್ರಾ ಜಲಾಶಯ ಸುಭದ್ರಗೊಳಿಸಲು ಕಾಮಗಾರಿ ಹಾಗೂ ಯೋಜನಾ ವೆಚ್ಚದ ವರದಿ ಸಲ್ಲಿಸಿದ್ದೇವೆ. ಅದು 10 ದಿನಗಳಲ್ಲಿ ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ. ಅನುದಾನ ದೊರೆತ ಕೂಡಲೇ ಕೆಲಸ ಆರಂಭವಾಗಲಿದೆ
ಎನ್‌.ರವಿಕುಮಾರ್ ಕಾರ್ಯನಿರ್ವಾಹಕ ಎಂಜಿನಿಯರ್ ಭದ್ರಾ ಜಲಾಶಯ ಯೋಜನೆ

ನೀರಿನಾಳದಲ್ಲಿ ವಿಡಿಯೊ ಚಿತ್ರೀಕರಣ

ಜಲಾಶಯದ ಸುರಕ್ಷತೆ ಖಾತರಿಪಡಿಸಿಕೊಂಡು ದುರಸ್ತಿ ಕಾರ್ಯಕ್ಕೆ ನೆರವಾಗಲು ಕೇಂದ್ರದ ತಜ್ಞರ ತಂಡ ಲಕ್ಕವಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಆಳ ಜಲಾಶಯದಲ್ಲಿನ ಸೋರಿಕೆಯ ಪ್ರಮಾಣ ಹಾಗೂ ಎಲ್ಲೆಲ್ಲಿ ಸೋರಿಕೆ ಆಗುತ್ತಿದೆ ಎಂಬುದನ್ನು ನಿಖರವಾಗಿ ಖಚಿತಪಡಿಸಿಕೊಳ್ಳಲು ನೀರಿನೊಳಗೆ ವಿಡಿಯೊ ಚಿತ್ರೀಕರಣ ಮಾಡಿ ಸಲ್ಲಿಸುವಂತೆ ಈ ತಂಡ ಕರ್ನಾಟಕ ನೀರಾವರಿ ನಿಗಮಕ್ಕೆ ಸೂಚಿಸಿತ್ತು. ಅದರಂತೆ ಕಳೆದ ಮಾರ್ಚ್‌ನಲ್ಲಿ ಕೇರಳದ ಕೊಚ್ಚಿಯಿಂದ ಬಂದಿದ್ದ 6 ಮಂದಿಯ ತಂಡ ಆಳ ಜಲಾಶಯದಲ್ಲಿ ನೀರಿನಲ್ಲಿ ಮುಳುಗಿ ಚಿತ್ರೀಕರಣ ಮಾಡಿದೆ. ಆ ವಿಡಿಯೋ ದೃಶ್ಯಾವಳಿಗಳನ್ನು DRIPನ ತಜ್ಞರಿಗೆ ಯೋಜನಾ ವರದಿಯ ಜೊತೆಗೆ ಕಳುಹಿಸಿಕೊಡಲಾಗಿದೆ ಎಂದು ಭದ್ರಾ ಜಲಾಶಯ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT