ಬುಧವಾರ, ಮೇ 18, 2022
28 °C

ರೈತ ವಿರೋಧಿ ನೀತಿ ವಿರೋಧಿಸಿ ಫೆ. 6ಕ್ಕೆ ಹೆದ್ದಾರಿ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಪಂಜಾಬ್ ಹಾಗೂ ಹರಿಯಾಣದ ರೈತರು ನಡೆಸುತ್ತಿರುವ ಚಳವಳಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಅನುಸರಿಸುತ್ತಿರುವ ದಮನಕಾರಿ ನೀತಿಯನ್ನು ಖಂಡಿಸಿ ಫೆ. 6ರಂದು ವಿವಿಧ ರೈತ ಸಂಘಟನೆಗಳ ವತಿಯಿಂದ ಹೆದ್ದಾರಿ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರೈತ, ದಲಿತ, ಕಾರ್ಮಿಕ, ಐಕ್ಯ ಹೋರಾಟ ಸಂಘಟನೆಯ ಪ್ರಮುಖರಾದ ಶಿವಾನಂದ ಕುಗ್ವೆ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಆಹಾರ ಧಾನ್ಯ, ಖಾದ್ಯ ತೈಲ, ಆಲೂಗಡ್ಡೆ, ಈರುಳ್ಳಿ, ಎಣ್ಣೆ ಬೀಜ ಸಂಗ್ರಹಕ್ಕಿದ್ದ ನಿಷೇಧ ತೆರವುಗೊಂಡಿದೆ. ಇದರಿಂದ ದೊಡ್ಡ ದೊಡ್ಡ ಕಂಪನಿಗಳು ಆಹಾರ ಮತ್ತು ತೈಲ ಪದಾರ್ಥಗಳನ್ನು ದೊಡ್ಡ ಸಂಖ್ಯೆಯಲ್ಲಿ ಸಂಗ್ರಹಿಸಿ ಇಟ್ಟುಕೊಂಡಿವೆ. ಕಾಳಸಂತೆಯಲ್ಲಿ ಮಾರಾಟ ಮಾಡಲು, ಬೆಲೆ ಏರಿಕೆಗೆ ಸರ್ಕಾರವೇ ಅವಕಾಶ ಕಲ್ಪಿಸಿದಂತಾಗಿದೆ’ ಎಂದು ಟೀಕಿಸಿದರು.

ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ಮುಕ್ತಗೊಳಿಸಿರುವುದರಿಂದ ಚಿಲ್ಲರೆ ವ್ಯಾಪಾರವನ್ನೇ ನಂಬಿರುವ 8 ಕೋಟಿಗೂ ಹೆಚ್ಚು ಕುಟುಂಬ ಬೀದಿಗೆ ಬರಲಿದೆ. ಕೃಷಿ ಉತ್ಪನ್ನಗಳ ಖರೀದಿ, ಮಾರಾಟದ ಮೇಲಿನ ನಿರ್ಬಂಧ ತೆರವುಗೊಳಿಸಿರುವುದರಿಂದ ಸಹಕಾರ ಸಂಘಗಳು ಮುಚ್ಚುವ ಅಪಾಯವಿದೆ ಎಂದು ದೂರಿದರು.

ರೈತ ಮುಖಂಡ ಕನ್ನಪ್ಪ, ರೈತ ಮುಖಂಡರಾದ ಗುರುಮೂರ್ತಿ ಕೌತಿ, ಎನ್.ಡಿ.ವಸಂತಕುಮಾರ್, ಅರುಣ್ ಕುಮಾರ್ ಕಸವೆ, ದಿನೇಶ್ ಶಿರವಾಳ, ಹೊಯ್ಸಳ ಗಣಪತಿಯಪ್ಪ, ಗಾಮಪ್ಪ, ರಮೇಶ್ ಐಗಿನಬೈಲು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು