ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖದಾಯಕ ಬದುಕಿಗೆ ಧರ್ಮ ಪರಿಪಾಲನೆ ಅಗತ್ಯ: ರಂಭಾಪುರಿ ಶ್ರೀ

Published 26 ಫೆಬ್ರುವರಿ 2024, 15:35 IST
Last Updated 26 ಫೆಬ್ರುವರಿ 2024, 15:35 IST
ಅಕ್ಷರ ಗಾತ್ರ

ಭದ್ರಾವತಿ: ಬದುಕು ಭಗವಂತನ ಕೊಡುಗೆ. ಅರಿವು ಆದರ್ಶಗಳಿಂದ ಬದುಕು ಸಮೃದ್ಧಿಗೊಳ್ಳಬೇಕು. ಸುಖ ಶಾಂತಿದಾಯಕ ಬದುಕಿಗೆ ಧರ್ಮ ಪರಿಪಾಲನೆ ಅವಶ್ಯಕ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೂಡ್ಲಿಗೆರೆಯಲ್ಲಿ ಸೋಮವಾರ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಅಂಗವಾಗಿ ನಡೆದ ಜನ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಧರ್ಮದಲ್ಲಿರುವ ಉದಾತ್ತ ತತ್ವಗಳು ಜೀವನದ ಶ್ರೇಯಸ್ಸಿಗೆ ಕಾರಣ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಮಲಗಿದರೆ ಬಾಳು ಬಂಧನಕಾರಿ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಗುರಿಯಿಲ್ಲದ ಗುರಿ ಸಾಧಿಸದ ಜೀವನ ವ್ಯರ್ಥ ಎಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಸಕಲರ ಬಾಳಿಗೆ ಬೆಳಕು ತೋರಿವೆ. ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸುವ ಉದಾತ್ತ ಗುರಿ ಹೊಂದಿದೆ ಎಂದ ಅವರು ತತ್ವ ತ್ರಯಗಳನ್ನು ಮನುಷ್ಯ ಆಚರಿಸಿ ಜೀವನದಲ್ಲಿ ಉನ್ನತಿ ಕಾಣಬೇಕಾಗಿದೆ ಎಂದರು.

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ ಸಮಾರಂಭ ಉದ್ಘಾಟಿಸಿ ಮಾತನಾಡಿ, ಧರ್ಮಾಚರಣೆ ಇಲ್ಲದಿದ್ದರೆ ಜೀವನದಲ್ಲಿ ಶಾಂತಿ ಕಾಣದು. ನೆಮ್ಮದಿಯ ಆದರ್ಶ ಬದುಕಿಗೆ ಧರ್ಮವೊಂದೇ ಆಶಾಕಿರಣ ಎಂದರು.

ಎಡೆಯೂರು ರೇಣುಕ ಶಿವಾಚಾರ್ಯರು, ಮಳಲಿ ಮಠದ ನಾಗಭೂಷಣ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ತಾವರೆಕೆರೆ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು. ಚಿಕ್ಕಮಗಳೂರಿನ ಚಂದ್ರಶೇಖರ ನಾರಣಾಪುರ ಉಪನ್ಯಾಸ ನೀಡಿದರು. ಗಂಜಿಗಟ್ಟಿ ಕೃಷ್ಣಮೂರ್ತಿ ಅವರಿಂದ ಭಕ್ತಿ ಗೀತೆ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಜರುಗಿದ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಆರತಿ ಹಿಡಿದ ಮುತ್ತೈದೆಯರು, ಕುಂಭ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದರು. ವಿವಿಧ ವಾದ್ಯ ವೈಭವಗಳೊಂದಿಗೆ ಚನ್ನಗಿರಿ ರಸ್ತೆಯ ಹರಿಹರೇಶ್ವರ ಮಹಾದ್ವಾರದಿಂದ ಕೂಡ್ಲಿಗೆರೆಯ ರಾಜಬೀದಿಗಳಲ್ಲಿ ಸಂಚರಿಸಿದ ಉತ್ಸವ ಬಸವೇಶ್ವರ ದೇವಾಲಯ ತಲುಪಿತು. ಕೂಡ್ಲಿಗೆರೆ ಬಸವೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿಯಿಂದ ಪ್ರಸಾದ ಸೇವೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT