ಶನಿವಾರ, ಸೆಪ್ಟೆಂಬರ್ 24, 2022
24 °C

ಘಜಲ್, ಮಂಡಕ್ಕಿ, ಬೋಂಡಾ ಪ್ರಿಯ ಸುಬ್ಬಣ್ಣ

ಎಚ್.ಯು.ವೈದ್ಯನಾಥ್ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಹ್ಯಾದ್ರಿ ಕಾಲೇಜಿನ ಪ್ರಾಚಾರ್ಯ ಸಾ.ಶಿ.ಮರುಳಯ್ಯ ಕಟ್ಟಿದ್ದ ‘ಅಭಿನಯ’ ರಂಗ ತಂಡ ಶಿವಮೊಗ್ಗ ಸುಬ್ಬಣ್ಣನವರ ಪರಿಚಯಕ್ಕೆ ನಮಗೆ ವೇದಿಕೆ. ಆಡಿಟಿಂಗ್ ವೃತ್ತಿ, ವಕೀಲಿಕೆಯಲ್ಲಿ ತೊಡಗಿದ್ದರೂ ಸುಬ್ಬಣ್ಣ ನಾಟಕಗಳಿಗೆ ಹಿನ್ನೆಲೆ ಗಾಯನದ ರಿಹರ್ಸಲ್‌ ತಪ್ಪಿಸುತ್ತಿರಲಿಲ್ಲ. ಆಗ ನಾನು ಕಾಮರ್ಸ್ ಕಾಲೇಜಿನ ವಿದ್ಯಾರ್ಥಿ, ‘ಅಭಿನಯ’ದಲ್ಲಿ ಕಲಾವಿದ.

ಸುಬ್ಬಣ್ಣ ಶಿವಮೊಗ್ಗಕ್ಕೆ ಬಂದಾಗಲೆಲ್ಲ ಸಮಾನಮನಸ್ಕರನ್ನು ಸೇರಿಸಿ ಘಜಲ್‌ಗಳನ್ನು ಹಾಡುತ್ತಿದ್ದರು. ತಿಲಕ್‌ನಗರದ ಅವರ ಮನೆ, ಇಲ್ಲವೇ ರಾಜೇಂದ್ರ ನಗರದ
ಲ್ಲಿದ್ದ ಶಿವಮೊಗ್ಗ ವೆಂಕಟೇಶ ಅವರ ಮನೆಯ ಮಹಡಿಯಲ್ಲಿ ಸೇರುತ್ತಿದ್ದೆವು. ನಿರ್ದೇಶಕರಾದ ಸಾಗರದ ಎನ್‌.ಆರ್.ಮಾಸೂರು, ಗುರುರಾವ್ ಬಾಪಟ್, ಒ.ಎಲ್.ನಾಗಭೂಷಣಸ್ವಾಮಿ, ಹಾಲೇಶ್ ಜೊತೆಯಾಗುತ್ತಿದ್ದರು. ಸುಬ್ಬಣ್ಣ ಘಜಲ್‌ಗಳ ಅರ್ಥ ಹೇಳಿ ಹಾಡುತ್ತಿದ್ದರು. ಹೀಗಾಗಿ ಘಜಲ್‌ಗಳ ಭಾವಾರ್ಥ ನಮಗೆ ಕಬ್ಬಿಣದ ಕಡಲೆ ಆಗಿರಲಿಲ್ಲ. ರವೀಂದ್ರ ನಗರದಿಂದ ತರುತ್ತಿದ್ದ ಮಂಡಕ್ಕಿ, ಮೆಣಸಿನಕಾಯಿ ಬೋಂಡಾ ಮಧ್ಯದಲ್ಲಿ ಹಾಕಿಕೊಂಡು ಸುತ್ತಲೂ ಕುಳಿತುಕೊಳ್ಳುತ್ತಿದ್ದೆವು.

‘ಕಾಡು ಕುದುರೆ ಹಾಡು’ ಅತ್ಯಂತ ಜನಪ್ರಿಯವಾಗಿತ್ತು. ಸಿಂಗಾಪುರದಲ್ಲಿ ಒಮ್ಮೆ ಈ ಹಾಡು ಹಾಡಿದಾಗ ಭಾಷೆ ಅರ್ಥವಾಗದಿದ್ದರೂ ಅಲ್ಲಿನ ಜನರು ಈ ಹಾಡು ಕುದುರೆಗೆ ಸಂಬಂಧಿಸಿದ್ದಲ್ಲವೇ ಎಂದು ಕೇಳಿದ್ದರಂತೆ. ಅವರ ಧ್ವನಿ ಪ್ರಯೋಗ ಹಾಡಿನ ಭಾವವನ್ನೂ ಅರ್ಥೈಸುತ್ತಿತ್ತು.

ನೋಡಿದವರಿಗೆ ಗಂಭೀರವಾಗಿ ಕಾಣುತ್ತಿದ್ದ ಸುಬ್ಬಣ್ಣ ಬಹಳ ಹಾಸ್ಯ ಪ್ರಜ್ಞೆಯುಳ್ಳವರು. ನಾಟಕದ ರಿಹರ್ಸಲ್ ಮಾಡುವಾಗ ಹಾಸ್ಯ ಚಟಾಕಿ ಹಾರಿಸಿ ಗಂಭೀರವಾಗುತ್ತಿದ್ದರು. ಬಿದ್ದು ಬಿದ್ದು ನಗುತ್ತಿದ್ದ ನಾವು ನಿರ್ದೇಶಕರಿಂದ ಬೈಗುಳ ಕೇಳುತ್ತಿದ್ದೆವು.

ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳಿಗೆ ಭಾವಗೀತೆ ಸ್ಪರ್ಧೆ ಏರ್ಪಡಿಸಲು ಸುಬ್ಬಣ್ಣ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ತಂದೆ–ತಾಯಿ ಹೆಸರಿನಲ್ಲಿ ದತ್ತಿನಿಧಿ ಇಟ್ಟಿದ್ದಾರೆ. ವೃತ್ತಿ, ಪ್ರವೃತ್ತಿ ಏನೇ ಇದ್ದರೂ ಕುತೂಹಲ ಉಳಿಸಿಕೊಂಡು ಸಮಾಜಮುಖಿಯಾಗಿ ಯೋಚನೆ ಮಾಡುತ್ತಿದ್ದರು. ಸರಳ ಜೀವಿ. ಶಿವಮೊಗ್ಗಕ್ಕೆ ಬಂದಾಗ ಇಲ್ಲಿನ ಗೋಪಾಳದ ಆದಿರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತಪ್ಪದೇ ಹೋಗುತ್ತಿದ್ದರು. ಅಲ್ಲಿನ ದೇವರ ಪ್ರಸಾದ ಪುಳಿಯೋಗರೆ ಅಂದರೆ ಬಹಳ ಖುಷಿ ಅವರಿಗೆ. ಅಲ್ಲಿಯೂ ಹಾಡುತ್ತಿದ್ದರು.

***

ಸುಬ್ರಹ್ಮಣ್ಯ ಮತ್ತೆ ಸುಬ್ಬಣ್ಣನಾದ ಸಂಗತಿ

ಶಿವಮೊಗ್ಗ ಸುಬ್ಬಣ್ಣ ಆಗಿದ್ದ ಅವರು ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ ನಂತರ ಕೆಲ ಕಾಲ ಮೂಲ ಹೆಸರು ಸುಬ್ರಹ್ಮಣ್ಯ ಹೆಸರಿನಲ್ಲಿ ಮುನ್ನೆಲೆಗೆ ಬಂದಿದ್ದರು. ಆದರೆ, ಆಕಾಶವಾಣಿಯಲ್ಲಿ ಉದ್ಘೋಷಕರು ಹಾಡಿನ ಗಾಯಕರ ಹೆಸರು ಹೇಳುವಾಗ ಸುಬ್ರಹ್ಮಣ್ಯ ಬದಲು ಎಸ್ಪಿ ಬಾಲಸುಬ್ರಹ್ಮಣ್ಯಂ ಎಂದು ಹೇಳುತ್ತಿದ್ದರು. ಇದು ಅವರಿಗೆ ಬೇಸರವಾಗುತ್ತಿತ್ತು. ಈ ಗೊಂದಲವೇ ಬೇಡ ಎಂದು ‘ಶಿವಮೊಗ್ಗ ಸುಬ್ಬಣ್ಣ’ ಎಂಬ ಹೆಸರಿನಲ್ಲೇ ಮುಂದುವರಿದರು. ಈ ವಿಚಾರ ಎಸ್‌ಪಿಬಿ ಅವರೊಂದಿಗೂ ಹೇಳಿ ನಗಾಡಿದ್ದರು.

ಶಿಶುನಾಳ ಶರೀಫರನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವಲ್ಲಿ ನಾಗಾಭರಣ, ಸಿ..ಅಶ್ವಥ್, ಲಕ್ಷ್ಮೀನಾರಾಯಣ ಭಟ್ಟ ಅವರೊಂದಿಗೆ ಸುಬ್ಬಣ್ಣನ ಪಾತ್ರವೂ ಬಹಳ ಇದೆ. ಶರೀಫರ ಸಾಹಿತ್ಯ ಅಷ್ಟು ಸುಲಭವಾಗಿ ಅರ್ಥವಾಗಲ್ಲ. ಅದಕ್ಕೆ ಬೇರೆಯದೇ ಮನಸ್ಥಿತಿ ಬೇಕು. ಶರೀಫರ ಆಶಯಗಳಿಗೆ ಎಲ್ಲಿಯೂ ಧಕ್ಕೆ ಬಾರದಂತೆ ಅವರ ವಿಚಾರಗಳನ್ನು ನಾಲ್ವರೂ ಸೇರಿ ಸಿನಿಮಾ, ಸಂಗೀತದ ಮೂಲಕ ಜನರ ಬಳಿಗೆ ಕೊಂಡೊಯ್ದರು.

(ಲೇಖಕರು: ಹಿರಿಯ ರಂಗಕರ್ಮಿ, ಶಿವಮೊಗ್ಗ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.