ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ | ನೂತನ ಸೇತುವೆ ಲೋಕಾರ್ಪಣೆಗೆ ಅಡೆತಡೆ

ವರ್ಷಗಳು ಕಳೆದರೂ ಸಂಚಾರಕ್ಕೆ ಸಿದ್ಧಗೊಳ್ಳದ ಸೇತುವೆ; ಸಾರ್ವಜನಿಕರ ಆಕ್ಷೇಪ
ಕಿರಣ್ ಕುಮಾರ್
Published 27 ಏಪ್ರಿಲ್ 2024, 7:08 IST
Last Updated 27 ಏಪ್ರಿಲ್ 2024, 7:08 IST
ಅಕ್ಷರ ಗಾತ್ರ

ಭದ್ರಾವತಿ: ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ಸೇತುವೆ ಲೋಕಾರ್ಪಣೆಗೆ ಹಲವು ಎಡರು ತೊಡರುಗಳು ಎದುರಾಗುತ್ತಿದ್ದು, ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. 

ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆ ಬದಿಯಲ್ಲಿ ಜೋಡಣೆ ಕಾರ್ಯ ಪೂರ್ಣಗೊಳ್ಳದ ಕಾರಣ ಉದ್ಘಾಟನೆ ವಿಳಂಬವಾಗುತ್ತಿದ್ದು, ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ. 

ಕಳೆದ ಬಾರಿ ಸರ್ಕಾರ ಬದಲಾಗಿ, ಹೊಸ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಸಮೀಪಿಸುವ ಸಮಯ ಬಂದಿದ್ದರೂ, ನಗರದ ಸೇತುವೆ ಲೋಕಾರ್ಪಣೆ ಆಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

160 ವರ್ಷಗಳಿಗೂ ಹಳೆಯದಾದ ಭದ್ರಾ ಸೇತುವೆ ಶಿಥಿಲಗೊಳ್ಳುತ್ತಿದ್ದ ಕಾರಣ, ಅದರ ಬದಲಾಗಿ ಹೊಸ ಸೇತುವೆ ನಿರ್ಮಾಣ ಮಾಡುವಂತೆ ಹಲವಾರು ವರ್ಷಗಳಿಂದ ಬೇಡಿಕೆಯಿತ್ತು. ಕೊನೆಗೂ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಯಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಸಿ ಮಹದೇವಪ್ಪ ಅವರು 2018ರಲ್ಲಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ವೇಳೆ ಎಂ.ಜೆ ಅಪ್ಪಾಜಿ ಶಾಸಕರಾಗಿದ್ದರು. 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ₹21.34 ಕೋಟಿ ವೆಚ್ಚದಲ್ಲಿ 240.5 ಮೀಟರ್ ಉದ್ದದ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ‘ಎಸ್.ಪಿ.ಎಲ್. ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು’ ಎಂಬ ಕಂಪನಿ ವಹಿಸಿಕೊಂಡಿತ್ತು. ಕಾಮಗಾರಿ ಬಳಿಕ, ಐದು ವರ್ಷಗಳವರೆಗೆ ನಿರ್ವಹಣಾ ಜವಾಬ್ದಾರಿಯನ್ನೂ ಗುತ್ತಿಗೆದಾರರಿಗೆ ವಹಿಸಲಾಗಿತ್ತು. 

ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಬಿ.ಎಸ್. ಯಡಿಯೂರಪ್ಪ ನಂತರ ಬಂದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸೇರಿದಂತೆ ಒಟ್ಟು ಮೂರು ಸರ್ಕಾರಗಳು ಬದಲಾವಣೆಯಾಗಿ, ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯಿತು. ಇಷ್ಟು ಸುದೀರ್ಘ ಅವಧಿ ಕಳೆದರೂ ಸೇತುವೆಗೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. 

ಸೇತುವೆಯನ್ನು ಕಮಾನು ಮಾದರಿಯಲ್ಲಿ ವಿಶಿಷ್ಟವಾಗಿ ನಿರ್ಮಿಸಲಾಗಿದೆ. ಸೇತುವೆಯ ಎರಡು ಬದಿಗೂ ಸಂಪರ್ಕ ಕಲ್ಪಿಸುವ ಕೊನೆಯ ಹಂತದ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಪ್ರೇಮ ಕಾಂಪ್ಲೆಕ್ಸ್ ಹಾಗೂ ಪಕ್ಕದ ಕಟ್ಟಡಗಳು ತೆರವುಗೊಳ್ಳದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. 

ಕೆಲವು ಕಟ್ಟಡಗಳ ಮಾಲೀಕರು ಈಗಾಗಲೇ ಪರಿಹಾರ ಪಡೆದು ಕಟ್ಟಡ ತೆರವುಗೊಳಿಸಿದ್ದಾರೆ. ಕರ್ನಾಟಕ ಬ್ಯಾಂಕಿನ ಕಟ್ಟಡಕ್ಕೆ ಭಾಗಶಃ ಹಾನಿಯಾಗಲಿದ್ದು, ಅಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಮೂಲ ನಕ್ಷೆ ಬದಲಾವಣೆ ಆರೋಪ: 

ಈ ನಡುವೆ, ಕೆಲವರ ಅನುಕೂಲಕ್ಕಾಗಿ ಹಾಗೂ ಅಧಿಕಾರ ಶಾಹಿಗಳ ಕುಮ್ಮಕ್ಕಿನಿಂದ ಮೂಲ ನಕ್ಷೆಯನ್ನೇ ಕೈಬಿಟ್ಟು ವಾಣಿಜ್ಯ ಸಂಕೀರ್ಣವೊಂದನ್ನು ರಕ್ಷಿಸುವ ಸಲುವಾಗಿ ಮನಬಂದಂತೆ ಮಾರ್ಗ ಬದಲಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸ್ಥಳೀಯ ಮುಖಂಡರು ಆರೋಪಿಸುತ್ತಿದ್ದಾರೆ.

‘ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದನ್ನೇ ನೆಪ ಮಾಡಿಕೊಂಡು, ಕಟ್ಟಡ ತೆರವುಗೊಳಿಸದೇ ಹಾಗೆಯೇ ಕಾಮಗಾರಿ ಪೂರೈಸಲು ರಾತ್ರೋರಾತ್ರಿ ಸಿಮೆಂಟ್ ಮಿಶ್ರಿತ ಜಲ್ಲಿಯನ್ನು ತಂದು ಲಾರಿಗಳಲ್ಲಿ ಸುರಿಯಲಾಗುತ್ತಿದೆ’ ಎಂದು ನಗರಸಭಾ ಸದಸ್ಯರಾದ ಜಾರ್ಜ್, ಉದಯ್ ಕುಮಾರ್, ಮಾಜಿ ಉಪಮೇಯರ್ ಸನಾವುಲ್ಲ, ಮುಖಂಡರಾದ ಶಂಕರ್ ರಾವ್, ಡಿ.ಎಚ್ ಕೃಷ್ಣ, ತರುಣ್ ಆಕ್ಷೇಪ ವ್ಯಕ್ತಪಡಿಸಿದರು. 

ದಟ್ಟಣೆ ತಗ್ಗಿಸಲಿದೆ ಸೇತುವೆ: ದಿನದಿಂದ ದಿನಕ್ಕೆ ನಗರ ವಿಸ್ತಾರಗೊಳ್ಳುತ್ತಿದೆ. ಇದರಿಂದಾಗಿ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಲಿದೆ. ಸೇತುವೆ ಕಾಮಗಾರಿಯನ್ನು ಆದಷ್ಟು ಶೀಘ್ರ  ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಒಂದು ಬದಿಯಲ್ಲಿ ಮಾತ್ರ ರಸ್ತೆ ಜೋಡಣೆಯಲ್ಲಿ ಸಿದ್ಧವಿದೆ
ಒಂದು ಬದಿಯಲ್ಲಿ ಮಾತ್ರ ರಸ್ತೆ ಜೋಡಣೆಯಲ್ಲಿ ಸಿದ್ಧವಿದೆ
ನೂತನ ಸೇತುವೆ
ನೂತನ ಸೇತುವೆ

Cut-off box - ಕೋಟ್.. ಈಗಾಗಲೇ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೂಲ ನಕ್ಷೆಯ ಪ್ರಕಾರ ಕಟ್ಟಡ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಆದರೂ ಸಹ ಕಾಣದ ಕೈಗಳು ರಾತ್ರೋರಾತ್ರಿ ಕಣ್ತಪ್ಪಿಸಿ ಸಾಮಗ್ರಿ ತಂದು ಸುರಿದು ಕಾಮಗಾರಿ ನಡೆಸುತ್ತಿರುವುದು ಖಂಡನೀಯ ಜಾರ್ಜ್ ನಗರಸಭಾ ಸದಸ್ಯ ಸುಗಮ ಸಂಚಾರಕ್ಕೆ ರಸ್ತೆ ವಿಸ್ತರಣೆ ಅಗತ್ಯ. ಈ ಕಾರಣಕ್ಕೆ ವಾಣಿಜ್ಯ ಸಂಕೀರ್ಣದಲ್ಲಿನ ಬಾಡಿಗೆದಾರರನ್ನು ಮೂರು ವರ್ಷಗಳಿಂದ ಖಾಲಿ ಮಾಡಿಸಿ ಆದಾಯವಿಲ್ಲದೆ ನಾವು ನಷ್ಟ ಅನುಭವಿಸುತ್ತಿದ್ದೇವೆ. ಭೂಸ್ವಾಧೀನ ನಿಯಮದ ಅನ್ವಯ ಪರಿಹಾರ ನೀಡಿ ತೆರವು ಕಾರ್ಯಾಚರಣೆ ನಡೆಸಲು ನಮ್ಮ  ಅಭ್ಯಂತರವಿಲ್ಲ. ಈ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಕ್ರಮ ಅನುಸರಿಸದೆ ಎಡವಟ್ಟು ಮಾಡುತ್ತಿದ್ದಾರೆ ರಮೇಶ್ ರೇವಣಕರ್ ಪ್ರೇಮ ಕಾಂಪ್ಲೆಕ್ಸ್ ಮಾಲೀಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT