ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಅಡಿಕೆ ಆಮದು, ಹೆಚ್ಚಿನ ತೆರಿಗೆ ವಿಧಿಸಿ: ಸಚಿವ ಕೆ.ಎನ್. ರಾಜಣ್ಣ

ಆಪ್ಸ್‌ಕೋಸ್ ಸಂಸ್ಥೆಯ ಸುವರ್ಣ ಮಹೋತ್ಸವ ಉದ್ಘಾಟಿಸಿದ ಸಚಿವ ರಾಜಣ್ಣ
Published 6 ಆಗಸ್ಟ್ 2023, 16:08 IST
Last Updated 6 ಆಗಸ್ಟ್ 2023, 16:08 IST
ಅಕ್ಷರ ಗಾತ್ರ

ಸಾಗರ: ‘ರಾಜ್ಯದ ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸುವ ದೃಷ್ಟಿಯಿಂದ ವಿದೇಶದಿಂದ ಆಮದಾಗುವ ಅಡಿಕೆಗೆ ಹೆಚ್ಚಿನ ಪ್ರಮಾಣದ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಬೇಕು’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಒತ್ತಾಯಿಸಿದರು.

ಇಲ್ಲಿನ ಈಡಿಗರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ (ಆಪ್ಸ್‌ಕೋಸ್‌)ದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ವ್ಯಾಪಾರ ಒಪ್ಪಂದದ ಅನ್ವಯ ಅಡಿಕೆ ಆಮದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಅಸಹಾಯಕತೆ ವ್ಯಕ್ತಪಡಿಸುವುದರಿಂದ ಯಾವ ಪ್ರಯೋಜನವಿಲ್ಲ. ಅದರ ಬದಲಾಗಿ ಆಮದಾಗುವ ಅಡಿಕೆಯ ಪ್ರಮಾಣದ ಮೇಲೆ ನಿಯಂತ್ರಣ ಹೇರುವ ಕುರಿತು ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಹಕಾರ ಆಂದೋಲನ ಜನಾಂದೋಲನವಾಗಿ ಪರಿವರ್ತನೆಗೊಳ್ಳಬೇಕು. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಆಂದೋಲನದ ಭಾಗವಾಗಬೇಕು. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರ ಪ್ರತಿ ಪಂಚಾಯಿತಿಗೆ ಒಂದರಂತೆ ಪತ್ತಿನ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ ವಿತರಿಸಲು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

‘ಚಿನ್ನದ ಹೆಜ್ಜೆ’ ಸುವರ್ಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ‘ ಆಪ್ಸ್‌ಕೋಸ್‌ನಂತಹ ಸಹಕಾರ ಸಂಸ್ಥೆಗಳು ರೈತರ ಪಾಲಿಗೆ ಜೀವನಾಡಿಯಂತೆ ಕೆಲಸ ಮಾಡುತ್ತಿವೆ. ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ ಎಲ್ಲಾ ಸಂದರ್ಭಗಳಲ್ಲೂ ಅವರ ನೆರವಿಗೆ ನಿಂತಿದ್ದು ಈ ಸಂಸ್ಥೆಯ ಹೆಗ್ಗಳಿಕೆ’ ಎಂದರು.

ಎಲೆಚುಕ್ಕಿ ಹಾಗೂ ಕೊಳೆರೋಗ ಅಡಿಕೆ ಬೆಳೆಗಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ನಡೆಸುವಂತೆ ಸರ್ಕಾರ ತಜ್ಞರಿಗೆ ಸೂಚನೆ ನೀಡಿದೆ. ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಸದಾ ಸಿದ್ಧ ಎಂ‌ದರು.

‘ಅಡಿಕೆ ಸೇವನೆಯಿಂದ ಕ್ಯಾನ್ಸರ್ ರೋಗ ಬರುವುದಿಲ್ಲ ಎಂಬುದು ಸಂಶೋಧನೆಯಿಂದ ಈಗಾಗಲೇ ಸಾಬೀತಾಗಿದೆ. ಆದಾಗ್ಯೂ ಕೆಲವು ಲಾಬಿಗಳು ಇಂತಹ ಪ್ರಚಾರದಲ್ಲಿ ತೊಡಗಿವೆ. ಬೆಳೆಗಾರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಲೇ ಬಂದಿದೆ’ ಎಂದು ಸುವರ್ಣ ಮಹೋತ್ಸವ ಕೂಪನ್ ಬಿಡುಗಡೆ ಮಾಡಿದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

‘ಚೀನಾದ ಉತ್ಪನ್ನಗಳನ್ನು ಭಾರತದೊಳಗೆ ಬಾರದಂತೆ ನಿಷೇಧಿಸಿರುವ ರೀತಿಯಲ್ಲೇ ಭೂತಾನ್‌ನಿಂದ ಅಡಿಕೆ ಆಮದಾಗದಂತೆ ನಿಷೇಧ ಹೇರುವತ್ತ ಕೇಂದ್ರ ಸರ್ಕಾರ ಮುಂದಾಗಬೇಕು’ ಎಂದು ಸಂಸ್ಥೆಯ ಆಡಳಿತ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದರು.

‘ಖಾಸಗಿ ವ್ಯಾಪಾರಸ್ಥರು ಹಾಗೂ ಲೇವಾದೇವಿದಾರರ ಬವಣೆ ತಪ್ಪಿಸಿ ಈ ಭಾಗದ ಅಡಿಕೆ ಬೆಳೆಗಾರರ ಆತ್ಮಗೌರವವನ್ನು ಎತ್ತಿಹಿಡಿದ ಶ್ರೇಯಸ್ಸು ನಮ್ಮ ಸಂಸ್ಥೆಗೆ ಸಲ್ಲುತ್ತದೆ. ಬೈಲಾ ತಿದ್ದುಪಡಿ ಮಾಡುವ ಮೂಲಕ ಷೇರುದಾರರಿಗೆ ಗೃಹ ನಿರ್ಮಾಣ ಕಾರ್ಯಕ್ಕೂ ಸಾಲ ಸೌಲಭ್ಯ ನೀಡಲು ಸಂಸ್ಥೆ ಮುಂದಾಗಲಿದೆ’ ಎಂದು ಆಪ್ಸ್‌ಕೋಸ್ ಅಧ್ಯಕ್ಷ ಕೆ.ಎಂ. ಸೂರ್ಯನಾರಾಯಣ ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಬಿ. ಸ್ವಾಮಿರಾವ್, ಪ್ರಮುಖರಾದ ಆರ್.ಎಂ. ಮಂಜುನಾಥ ಗೌಡ, ಎಂ. ಹರನಾಥರಾವ್, ಬಿ.ಆರ್. ಜಯಂತ್, ಎಚ್.ಎಲ್. ಷಡಕ್ಷರಿ, ಕಿಶೋರ್ ಕುಮಾರ್ ಕೊಡಿಗಿ, ಎಂ.ಎನ್. ಹೆಗಡೆ, ವ.ಶಂ. ರಾಮಚಂದ್ರ ಭಟ್, ಎಚ್.ಎಸ್. ಮಂಜಪ್ಪ, ಕೆ. ಬಸವರಾಜ್, ಎಂ.ವಿ. ಮೋಹನ್ ಗೌಡ್ರು, ಮಂಜುನಾಥ ಬಿ. ಮಹೇಶ್ವರಪ್ಪ, ಎ.ಒ.ರಾಮಚಂದ್ರ, ಲಂಬೋದರ್, ಮಂಜಪ್ಪ, ವಸುಮತಿ ಗೌಡ ಇದ್ದರು.

ಶ್ರೀರಂಜಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿ.ಶಂಕರ್ ರೈತಗೀತೆ ಹಾಡಿದರು. 

ಆಪ್ಸ್‌ಕೋಸ್ ಸಂಸ್ಥೆ ಹೊರತಂದಿರುವ ‘ಚಿನ್ನದ ಹೆಜ್ಜೆ’ ಸುವರ್ಣ ಸಂಚಿಕೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು.
ಆಪ್ಸ್‌ಕೋಸ್ ಸಂಸ್ಥೆ ಹೊರತಂದಿರುವ ‘ಚಿನ್ನದ ಹೆಜ್ಜೆ’ ಸುವರ್ಣ ಸಂಚಿಕೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು.
ನೆರವು ಸ್ಮರಿಸಿದ ಮಧು ಬಂಗಾರಪ್ಪ
ಬೇಳೂರು ಆಪ್ಸ್‌ಕೋಸ್ ಸಂಸ್ಥೆ ಎಂಬುದು ಮಲೆನಾಡಿನ ರೈತ ಕುಟುಂಬಗಳ ಪಾಲಿಗೆ ಆಪತ್ಭಾಂಧವ ಇದ್ದಂತೆ ಎಂಬ ಮಾತು ಸಮಾರಂಭದ ವೇದಿಕೆಯಲ್ಲಿ ಇದ್ದ ಹಲವು ಗಣ್ಯರಿಂದ ಕೇಳಿಬಂತು. ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಸಂಸ್ಥೆ ಅಡಿಕೆಗೆ ಮುಂಗಡವಾಗಿ ₹ 60 ಲಕ್ಷ ನೆರವು ನೀಡಿದ್ದನ್ನು ಸಚಿವ ಮಧು ಬಂಗಾರಪ್ಪ ಸ್ಮರಿಸಿದರು. ಪ್ರೌಢಶಿಕ್ಷಣ ಮುಗಿಸಿ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಸಂಸ್ಥೆ ₹ 4 ಸಾವಿರ ಸಹಾಯ ಮಾಡಿದ್ದನ್ನು ಶಾಸಕ ಬೇಳೂರು ನೆನಪಿಸಿಕೊಂಡರು. ಯು.ಮಹಾಬಲರಾವ್ ವಿರುದ್ಧದ ಮೊಕದ್ದಮೆ ವಾಪಸ್‌ಗೆ ಸಮ್ಮತಿ ಆಪ್ಸ್‌ಕೋಸ್ ಸಂಸ್ಥೆಯಲ್ಲಿ ಈ ಹಿಂದೆ ಕಾರ್ಯದರ್ಶಿಯಾಗಿದ್ದ ಯು. ಮಹಾಬಲರಾವ್ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂಬ ಈ ಭಾಗದ ಸಹಕಾರಿ ಮುಖಂಡರ ಒತ್ತಾಯಕ್ಕೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಮ್ಮತಿ ನೀಡಿದರು. ಸಂಸ್ಥೆಯ ಬೆಳವಣಿಗೆಗೆ ಮಹಾಬಲರಾವ್ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT