ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ರಾಜಕಾರಣಕ್ಕೆ ‘ಘನತೆ’ಯ ವಿದಾಯ ಹೇಳಿದ ಬಂಡಾಯದ ಒಡೆಯ: ಕಾಗೋಡು ತಿಮ್ಮಪ್ಪ

ಧೃತರಾಷ್ಟ್ರನಾಗಲಾರದ ಧರ್ಮ ಸಂಕಟದಲ್ಲಿ ಗೆಲುವು ಸಾಧಿಸಿದ ಕಾಗೋಡು ತಿಮ್ಮಪ್ಪ
Published 18 ಮೇ 2023, 23:30 IST
Last Updated 18 ಮೇ 2023, 23:30 IST
ಅಕ್ಷರ ಗಾತ್ರ

ಎಂ.ರಾಘವೇಂದ್ರ

ಸಾಗರ: ‘ರಾಜಕೀಯದಲ್ಲಿ ನಾವಿಬ್ಬರೂ ಎದುರಾಳಿಗಳೇ ಆಗಿದ್ದರೂ ಅವರ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ಶಿವಮೊಗ್ಗ ಜೆಲ್ಲೆಯ ಘನತೆಯನ್ನು ಹೆಚ್ಚಿಸಿದ ರಾಜಕಾರಣಿಗಳಲ್ಲಿ ಅವರೂ ಒಬ್ಬರು. ಈ ಚುನಾವಣೆಯಲ್ಲಿ ಅವರು ಸೋಲಬಾರದಿತ್ತು’

ಇದು 2004ರ ವಿಧಾನಸಭೆ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಬಿಜೆಪಿಯ ಬೇಳೂರು ಎದುರು ಸೋತಾಗ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ನೀಡಿದ್ದ ಪ್ರತಿಕ್ರಿಯೆ.

ಅಭಿವೃದ್ಧಿ ರಾಜಕಾರಣದ ವಿಷಯ ಬಂದಾಗ ತಮ್ಮ ರಾಜಕೀಯ ವಿರೋಧಿಗಳಿಂದಲೂ ಪ್ರಶಂಸೆಗೆ ಪಾತ್ರರಾಗಿರುವ ಕಾಗೋಡರಿಗೆ ಈಗ 92 ವರ್ಷ. ಐದು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ಕಾಗೋಡು ಚುನಾವಣಾ ರಾಜಕಾರಣದಿಂದ ನಿವೃತ್ತರಾದಂತೆಯೇ.

1972ರಲ್ಲಿ ಸಮಾಜವಾದಿ ಪಕ್ಷದ ಮೂಲಕ ವಿಧಾನಸಭೆ ಪ್ರವೇಶಿಸಿದ ಕಾಗೋಡು ರಾಜಕಾರಣದಲ್ಲಿ ಸೋಲು ಗೆಲುವುಗಳೆರಡನ್ನೂ ಕಂಡವರು. ಭೂ ಸುಧಾರಣೆ ಕಾಯ್ದೆ ಜಾರಿಗೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರಿಗೆ ಈ ಸಂಗತಿ ರಾಜಕಾರಣದಲ್ಲಿ ಶಾಶ್ವತ ಮಿತ್ರರ ಜೊತೆ ಶಾಶ್ವತ ಶತ್ರುಗಳನ್ನೂ ಸೃಷ್ಟಿಸಿದೆ.

ಅದೇನೆ ಆದರೂ ಕಾಗೋಡರ ರಾಜಕೀಯ ಜೀವನದ ಮಹತ್ವದ ಘಟ್ಟವೆಂದರೆ ಗೇಣಿದಾರರಿಗೆ ಭೂಮಿಯ ಹಕ್ಕು ಕೊಡಿಸುವ ಭೂ ಸುಧಾರಣೆ ಕಾಯ್ದೆ ಎಂಬುದನ್ನು ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ.

ತದನಂತರ ಕಾಗೋಡು ಹೆಚ್ಚಿನವರಿಗೆ ಇಷ್ಟವಾದದ್ದು ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ರೀತಿ. ಆಡಳಿತ ಪಕ್ಷದವರನ್ನೂ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡ ಕಾರ್ಯವೈಖರಿ ನೋಡಿದವರು ಅವರನ್ನು ‘ಸದನದ ಹೆಡ್ ಮಾಸ್ಟರ್’ ಎಂದೇ ಕರೆದಿದ್ದುಂಟು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕಾಗೋಡರ ಹೆಸರು ಕೂಡ ಇತ್ತು. ಆದರೆ ವಯಸ್ಸಿನ ಕಾರಣಕ್ಕೆ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಿಲ್ಲ. ಕಾಗೋಡು ಪುತ್ರಿ ಡಾ.ರಾಜನಂದಿನಿ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗದ ಕಾರಣ ಬಿಜೆಪಿಗೆ ಸೇರಿದ್ದು ಕಾಗೋಡರಿಗೆ ಶಾಕ್ ನೀಡಿತ್ತು.

‘ಮಗಳು ಬಿಜೆಪಿಗೆ ಸೇರಿದ್ದು ನನ್ನ ಎದೆಗೆ ಚೂರಿ ಚುಚ್ಚಿದಂತಾಗಿದೆ’ ಎಂದು ಕಾಗೋಡು ಹೇಳಿಕೆ ನೀಡಿದರೂ ಅವರ ಪಕ್ಷನಿಷ್ಠೆಯನ್ನು ಕೆಲವರು ಅನುಮಾನದಿಂದಲೇ ನೋಡಿದ್ದರು. ಅವರು ಕೂಡ ಧೃತರಾಷ್ಟ್ರ ಪ್ರೇಮಕ್ಕೆ ಒಳಗಾಗುತ್ತಾರೆ ಎಂದೇ ಕೆಲವರು ಸಂದೇಹ ವ್ಯಕ್ತಪಡಿಸಿದ್ದರು. ಆದರೆ, ಚುನಾವಣೆ ಮುಗಿಯುವವರೆಗೂ ಕಾಂಗ್ರೆಸ್ ಪರವಾಗಿ ಅಚಲವಾಗಿ ನಿಲ್ಲುವ ಮೂಲಕ ಕಾಗೋಡು ಚುನಾವಣಾ ರಾಜಕಾರಣಕ್ಕೆ ‘ಘನತೆ’ಯ ವಿದಾಯ ಹೇಳಿದ್ದಾರೆ.

ಕಾಗೋಡು ತಿಮ್ಮಪ್ಪ ಅವರ ಚುನಾವಣಾ ರಾಜಕಾರಣದ ಹಾದಿ

ವರ್ಷ;ಪಕ್ಷ;ಎದುರಾಳಿ;ಫಲಿತಾಂಶ

1962;ಸಮಾಜವಾದಿ;ಲಕ್ಷ್ಮಿಕಾಂತಪ್ಪ;ಸೋಲು

1967;ಸಮಾಜವಾದಿ;ಕೆ.ಎಚ್.ಶ್ರೀನಿವಾಸ್;ಸೋಲು

1972;ಸಮಾಜವಾದಿ;ಎಲ್.ಟಿ.ತಿಮ್ಮಪ್ಪ ಹೆಗಡೆ;ಗೆಲುವು

1978;ಜನತಾ ಪಕ್ಷ;ಎಲ್.ಟಿ.ತಿಮ್ಮಪ್ಪ ಹೆಗಡೆ;ಸೋಲು

1983;ಕಾಂಗ್ರೆಸ್;ಎಸ್.ಬಂಗಾರಪ್ಪ;ಸೋಲು

1989;ಕಾಂಗ್ರೆಸ್;ಬಿ.ಆರ್.ಜಯಂತ್;ಗೆಲುವು

1994;ಕಾಂಗ್ರೆಸ್;ಎಚ್.ವಿ.ಚಂದ್ರಶೇಖರ್;ಗೆಲುವು

1999;ಕಾಂಗ್ರೆಸ್ ಎಲ್.ಟಿ.ತಿಮ್ಮಪ್ಪ ಹೆಗಡೆ;ಗೆಲುವು

2004;ಕಾಂಗ್ರೆಸ್;ಗೋಪಾಲಕೃಷ್ಣ ಬೇಳೂರು;ಸೋಲು

2008;ಕಾಂಗ್ರೆಸ್;ಗೋಪಾಲಕೃಷ್ಣ ಬೇಳೂರು;ಸೋಲು

2013;ಕಾಂಗ್ರೆಸ್;ಬಿ.ಆರ್.ಜಯಂತ್;ಗೆಲುವು

2018;ಕಾಂಗ್ರೆಸ್;ಹಾಲಪ್ಪ ಹರತಾಳು;ಸೋಲು

(1983ರಲ್ಲಿ ಕಾಗೋಡು ಸೊರಬ ಕ್ಷೇತ್ರದಿಂದ ಸ್ಪರ್ಧಿಸಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT