ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಮಳೆಗೆ ಬಿಜೆಪಿಯ ‘ತಣ್ಣನೆ’ ತಂತ್ರಗಾರಿಕೆ

ಲೋಕಸಭೆ ಚುನಾವಣೆಗೆ ಸ್ಪರ್ಧೆ: ಬೆಂಬಲಿಗರ ನಂಬಿಸುವುದೇ ಈಶ್ವರಪ್ಪಗೆ ಸವಾಲು
Published 30 ಮಾರ್ಚ್ 2024, 23:04 IST
Last Updated 30 ಮಾರ್ಚ್ 2024, 23:04 IST
ಅಕ್ಷರ ಗಾತ್ರ

ಶಿವಮೊಗ್ಗ: ಈಶ್ವರಪ್ಪ ನಮ್ಮ ನಾಯಕರು. ಬಿಜೆಪಿಯಲ್ಲೇ ಇರುತ್ತಾರೆ. ಪಕ್ಷ ಅವರಿಗೆ ತಾಯಿ ಇದ್ದಂತೆ. ಅಮ್ಮನ ಮಾತು ಮಗ ಮೀರೊಲ್ಲ. ಶೀಘ್ರ ದೊಡ್ಡವರು (ಹೈಕಮಾಂಡ್) ಕರೆ ಮಾಡಿ ಸಮಸ್ಯೆ ಪರಿಹರಿಸುತ್ತಾರೆ...

ಇದು ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿ ಸ್ವತಂತ್ರ ಸ್ಪರ್ಧೆಗೆ ಸಿದ್ಧತೆ ನಡೆಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಬಗ್ಗೆ ಜಿಲ್ಲೆಯ ಬಿಜೆಪಿ ಮುಖಂಡರು ಕೊಡುತ್ತಿರುವ ಬಹಿರಂಗ ಹೇಳಿಕೆ.

ಪುತ್ರ ಕಾಂತೇಶ ಅವರಿಗೆ ಹಾವೇರಿ ಟಿಕೆಟ್‌ ಕೈ ತಪ್ಪಿದ್ದಕ್ಕೆ ಈಶ್ವರಪ್ಪ ಆಕ್ರೋಶಗೊಂಡಿದ್ದಾರೆ. ಹೋದಲ್ಲಿ, ಬಂದಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರು ಮಾತ್ರ ‘ಈಶ್ವರಪ್ಪ ಬಿಜೆಪಿಯಲ್ಲೇ ಇರುತ್ತಾರೆ’ ಎಂದು ತಣ್ಣಗೆ ಪ್ರತಿಕ್ರಿಯಿಸುತ್ತಿದ್ದಾರೆ.

ಇದು ಈಶ್ವರಪ್ಪ ಬೆಂಬಲಿಗರನ್ನು ಗೊಂದಲಕ್ಕೆ ತಳ್ಳಿದೆ. ಈಶ್ವರಪ್ಪ ಅವರನ್ನು ಇನ್ನಷ್ಟು ಕೆಣಕುತ್ತಿದೆ. ತಮ್ಮ ಸ್ಪರ್ಧೆ ವಿಷಯದಲ್ಲಿ ಬೆಂಬಲಿಗರ ನಂಬಿಸುವುದೇ ಅವರಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಹೋದಲ್ಲಿ, ಬಂದಲ್ಲಿ, ‘ನಾನು ಚುನಾವಣೆಗೆ ಸ್ಪರ್ಧಿಸುವುದು ಗ್ಯಾರಂಟಿ’ ಎಂದು ಪುನರುಚ್ಚರಿಸುತ್ತಿದ್ದಾರೆ.

ಅದರ ಭಾಗವಾಗಿ, ‘ಬ್ರಹ್ಮ ಬಂದು ಹೇಳಿದರೂ ನನ್ನ ಸ್ಪರ್ಧೆ ನಿಶ್ಚಿತ’ ಎಂದು ಈಚೆಗೆ ಘೋಷಣೆ ಮಾಡಿದ್ದರು. ಅದೇ ದಿನ ಮನೆಯಲ್ಲೇ ಚುನಾವಣಾ ಪ್ರಚಾರ ಕಚೇರಿ ಆರಂಭಿಸಿ ಬೆಂಬಲಿಗರ ಸಭೆ ನಡೆಸಿದ್ದರು.

ಈ ವೇಳೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಿರಿಯರೊಬ್ಬರು, ‘ಈಶ್ವರಪ್ಪ ಯಾವ ಹೊತ್ತಲ್ಲಿ ಬೆಂಬಲಕ್ಕೆ ಕರೆದರೂ ನಾವು ಬರುತ್ತೇವೆ. ಆದರೆ ಅವರು ಚುನಾವಣೆಗೆ ನಿಲ್ಲುವುದು ಈಗಲೂ ಅನುಮಾನ. ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದರೆ ನಿಲುವು ಬದಲಿಸಬಹುದು. ಎಲ್ಲವೂ ದೈವ ನಿಶ್ಚಿತ’ ಅಂದು ಬಿಟ್ಟರು. ಮುಜುಗರಕ್ಕೊಳಗಾಗಿದ್ದ ಈಶ್ವರಪ್ಪ, ‘ಸ್ವತಃ ನರೇಂದ್ರ ಮೋದಿ ಬಂದು ಹೇಳಿದರೂ ಸ್ಪರ್ಧಿಸುವುದು ನಿಶ್ಚಿತ’ ಎಂದು ಅಲ್ಲಿಯೇ ಸ್ಪಷ್ಟನೆ ಕೊಡಬೇಕಾಯಿತು. 

‘ದಾವಣಗೆರೆ, ಬೆಳಗಾವಿಯಲ್ಲಿ ಭಿನ್ನಮತ ಶಮನ ಮಾಡಿದರೂ ಶಿವಮೊಗ್ಗದಲ್ಲಿ ಆ ಕೆಲಸ ಆಗಲಿಲ್ಲ. ಪಕ್ಷದವರೂ ಸಾಹೇಬರ (ಈಶ್ವರಪ್ಪ) ಮನವೊಲಿಕೆಯ ಪ್ರಯತ್ನ ಕೈ ಬಿಟ್ಟಂತೆ ಕಾಣುತ್ತಿದೆ. ಈಗ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಂಬಿಕೆ ಬರುತ್ತಿದೆ. ಆದರೂ ಕೊನೆಯ ಗಳಿಗೆಯಲ್ಲಿ ಮೋದಿ ಕರೆ ಮಾಡಿದರೆ?’ ಎಂದು ಬಿಜೆಪಿಯಲ್ಲಿರುವ ಈಶ್ವರಪ್ಪ ಬೆಂಬಲಿಗರೊಬ್ಬರು ಪ್ರಶ್ನಿಸುತ್ತಾರೆ.

‘ನಾಮಪತ್ರ ಹಿಂದಕ್ಕೆ ಪಡೆಯುವ ಕೊನೆಯ ದಿನದವರೆಗೂ ಕಾದು ನೋಡುವೆ. ನಂತರ ಅವರೊಂದಿಗೆ ಬಹಿರಂಗವಾಗಿ ಗುರುತಿಸಿಕೊಳ್ಳುವೆ’ ಎಂದು ಹೇಳುತ್ತಾರೆ.

ಬಿಜೆಪಿಯವರು ಕರೆಯುತ್ತಿಲ್ಲ?:

‘ಈಶ್ವರಪ್ಪ ಸ್ಪರ್ಧಿಸಿದರೆ ಹಿಂದುತ್ವದ ಪರ ಮತಗಳು ಮಾತ್ರವಲ್ಲ. ಹಿಂದುಳಿದ ವರ್ಗಗಳ ಮತಗಳೂ ಅನುಕಂ‍ಪದ ರೂಪದಲ್ಲಿ ಅವರಿಗೆ ಬೀಳಬಹುದು. ಇಲ್ಲಿ ನಷ್ಟದ ಬಾಬ್ತು ನಮ್ಮದು ಮಾತ್ರವಲ್ಲ ಕಾಂಗ್ರೆಸ್‌ನದ್ದೂ ಆಗಲಿದೆ. ಹೀಗಾಗಿ ನಾವು ಕರೆಯುವುದು ನಿಲ್ಲಿಸಿದ್ದೇವೆ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳುತ್ತಾರೆ.

ಬಂಡಾಯ ಸ್ಪರ್ಧೆ ಬಿಟ್ಟು ಪಕ್ಷಕ್ಕೆ ನಾನು ವಾಪಸ್‌ ಬರುವೆ ಎಂದು ಹೇಳಿಕೆ ನೀಡಿ ಬೆಂಬಲಿಗರಲ್ಲಿ ಗೊಂದಲ ಸೃಷ್ಟಿಸುವುದು ವಿರೋಧಿಗಳ ಚುನಾವಣಾ ತಂತ್ರಗಾರಿಕೆಯ ಭಾಗ. ನನ್ನ ಸ್ಪರ್ಧೆ ನಿಶ್ಚಿತ
–ಕೆ.ಎಸ್. ಈಶ್ವರಪ್ಪ ಮಾಜಿ ಉಪಮುಖ್ಯಮಂತ್ರಿ

ದೇವರನ್ನೂ ನಂಬಿಸಬೇಕಾಯಿತು: ಈಶ್ವರಪ್ಪ

ಲೋಕಸಭಾ ಚುನಾವಣೆಗೆ ಕೆ.ಎಸ್.ಈಶ್ವರಪ್ಪ ನಿಲ್ಲುತ್ತಿದ್ದಾರೋ  ಇಲ್ಲವೋ ಎಂಬ ಅನುಮಾನ ಆ ದೇವರಿಗೂ ಬಂದಿದೆಯಂತೆ. ಭದ್ರಾವತಿ ಬಳಿಯ ದಾನವಾಡಿ ರಂಗನಾಥ ದೇವಸ್ಥಾನದಲ್ಲಿ ಶುಕ್ರವಾರ ಈ ಸಂಗತಿ ನಿಷ್ಕರ್ಷೆಗೆ ಒಳಪಟ್ಟಿತ್ತು ಎಂದು ಕೆ.ಎಸ್. ಈಶ್ವರಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಅಲ್ಲಿ ಏನಾದರೂ ಕೋರಿಕೊಂಡರೆ ಒಂದೇ ನಿಮಿಷದಲ್ಲಿ ದೇವರ ವಿಗ್ರಹದಿಂದ ಹೂವಿನ ರೂಪದ ಪ್ರಸಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಆದರೆ ಎರಡು ನಿಮಿಷ ಕೂತರೂ ನನಗೆ ಸಿಗಲಿಲ್ಲ. ರಂಗನಾಥಪ್ಪ ಯಾಕೆ ಹೀಗೆ ಮಾಡುತ್ತಿದ್ದೀಯ ಪ್ರಸಾದ ಕೊಡು ಎಂದು ಜೊತೆಗಿದ್ದ ಬೆಂಬಲಿಗರು ಕೂಗಿ ಕೇಳಿದರೂ ಫಲ ಸಿಗಲಿಲ್ಲ. ಸ್ನೇಹಿತರೊಬ್ಬರ ಸಲಹೆ ಮೇರೆಗೆ ರಂಗನಾಥ ನಾನು ಚುನಾವಣೆಗೆ ನಿಲ್ಲುವುದು ನೂರಕ್ಕೆ ನೂರು ಸತ್ಯ. ದಯವಿಟ್ಟು ನನಗೆ ಆಶೀರ್ವಾದ ಮಾಡು ಎಂದು ಕೇಳಿಕೊಂಡೆ. ತಕ್ಷಣ ಪ್ರಸಾದ ಸಿಕ್ಕಿತು’ ಎಂದು ಈಶ್ವರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT