ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೀಡಂ ಪಾರ್ಕ್‌ಗೆ ಸ್ಮಾರ್ಟ್ ಟಚ್: ಬಿವೈಆರ್

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ
Last Updated 22 ಸೆಪ್ಟೆಂಬರ್ 2022, 4:59 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಫ್ರೀಡಂ ಪಾರ್ಕ್ ಜಾಗವನ್ನು ಸಾರ್ವಜನಿಕ ಸ್ನೇಹಿಯಾಗಿ ಅಭಿವೃದ್ಧಿ ಪಡಿಸಲಾಗುವುದು. ಅದಕ್ಕಾಗಿ ₹5 ಕೋಟಿ ಅನುದಾನ ಒದಗಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರೊಂದಿಗೆ ಫ್ರೀಡಂ ಪಾರ್ಕ್‌ಗೆ ಭೇಟಿ ನೀಡಿದ ಸಂಸದರು ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಫ್ರೀಡಂ ಪಾರ್ಕ್ 45 ಎಕರೆ ಜಾಗ ಹೊಂದಿದ್ದು, ಬಂಧೀಖಾನೆ ಇಲಾಖೆ ಸೇರಿದೆ. ಆದರೆ ಅದರ ನಿರ್ವಹಣೆ ಸರಿ ಇಲ್ಲ ಎಂದು ಸಾರ್ವಜನಿಕರಿಂದ ಅನೇಕ ದೂರು ಬಂದಿವೆ ಎಂದರು.

ಮುಖ್ಯವಾಗಿ ವಾಕಿಂಗ್ ಪಾತ್ ಅಸಮರ್ಪಕ ನಿರ್ವಹಣೆ, ವಿದ್ಯುತ್ ದೀಪ, ಶೌಚಾಲಯದ ನಿರ್ವಹಣೆಯಲ್ಲಿ ಲೋಪ, ಭದ್ರತಾ ಸಿಬ್ಬಂದಿ ಕೊರತೆ, ಪುಂಡುಪೋಕರಿಗಳ ಹಾವಳಿ, ವಾಕಿಂಗ್ ಪಾತ್‍ನಲ್ಲಿ ದ್ವಿಚಕ್ರವಾಹನ ಸವಾರರು ಜೋರಾಗಿ ಓಡಿಸುವುದು, ಎಲ್ಲೆಂದರಲ್ಲಿ ಮದ್ಯದ ಬಾಟಲಿ ಎಸೆದಿರುವುದು ಈ ವೇಳೆ ಕಂಡುಬಂದಿತು. ಇತ್ತೀಚೆಗೆ ಪಾಲಿಕೆಯವರು ಕಸ ತಂದು ಇಲ್ಲಿ ಸುರಿಯುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು.

'ಯಡಿಯೂರಪ್ಪ ಅವರ ಬಹುದೊಡ್ಡ ಕನಸು ಫ್ರೀಡಂ ಪಾರ್ಕ್. ಈಗಾಗಲೇ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಶೌಚಾಲಯಕ್ಕೆ ಟೆಂಡರ್ ಕರೆದು, ನಿರ್ವಹಣೆಗೆ ವ್ಯವಸ್ಥೆ, ರಾತ್ರಿ 8 ಗಂಟೆ ವರೆಗೆ ವಾಕಿಂಗ್‍ಗೆ ಅವಕಾಶ, ಎರಡು ಪಾಳಿಯಲ್ಲಿ ಭದ್ರತಾ ಸಿಬ್ಬಂದಿ ಒದಗಿಸಲಾಗುವುದು' ಎಂದರು.

ಶಿವಮೊಗ್ಗ ಸ್ಮಾರ್ಟ್‌ಸಿಟಿ ವತಿಯಿಂದ ನಾಲ್ಕು ಹಂತದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಒಂದು ಭಾಗದಲ್ಲಿ ಕಿರು ದಟ್ಟ ಅರಣ್ಯ ನಿರ್ಮಾಣ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಮಹಾಪುರುಷರ ಗ್ಯಾಲರಿ ನಿರ್ಮಿಸಲಾಗುವುದು ಎಂದರು.

ಈಗಾಗಲೇ ಮೂರು ವೇದಿಕೆಗಳ ನಿರ್ಮಾಣವಾಗಿದ್ದು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಆಯೋಜಕರಿಗೆ ಸ್ವಲ್ಪಮಟ್ಟಿನ ಶುಲ್ಕ ವಿಧಿಸಿ, ಅದನ್ನು ಪಾರ್ಕ್ ನಿರ್ವಹಣೆಗೆ ಬಳಸಲು ಸಂಸದರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಉಪಮೇಯರ್ ಶಂಕರ್ ಗನ್ನಿ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ, ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿ, ಇ. ವಿಶ್ವಾಸ್, ಪ್ರಮುಖರಾದ ಎಸ್. ದತ್ತಾತ್ರಿ, ದಿವಾಕರ್ ಶೆಟ್ಟಿ, ಸಿ.ಎಚ್. ಮಾಲತೇಶ್, ಬಿ.ಎಂ. ಕುಮಾರಸ್ವಾಮಿ, ಪ್ರೊ. ಚಂದ್ರಶೇಖರ್, ಮಂಜುನಾಥ್, ಬಳ್ಳೆಕೆರೆ ಸಂತೋಷ್, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

ನಂತರ ಸಂಸದರು ಕಾಶೀಪುರ ಮತ್ತು ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲಿಸಿದರು. ಅಕ್ಕಪಕ್ಕದ ನಿವಾಸಿಗಳಿಗೆ ಕಾಮಗಾರಿಯಿಂದ ತೊಂದರೆ ಆಗುತ್ತಿರುವುದರಿಂದ ಸರ್ವಿಸ್ ರಸ್ತೆ ಕೆಲಸ ತಿಂಗಳೊಳಗೆ ಮುಗಿಸಲು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT