ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ| ಸೋಗಾನೆ ವಿಮಾನ ನಿಲ್ದಾಣ: ಸಂತ್ರಸ್ತ ರೈತರ ಪ್ರತಿಭಟನೆ

Last Updated 22 ಫೆಬ್ರುವರಿ 2023, 6:38 IST
ಅಕ್ಷರ ಗಾತ್ರ

ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಭೂಮಿ ನೀಡಿದ ರೈತರಿಗೆ ನಿಲ್ದಾಣ ಉದ್ಘಾಟನೆಯಾಗುವ ಮೊದಲು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

‘ಸರ್ವೆ ನಂ 122ರಲ್ಲಿ ಸುಮಾರು 50 ವರ್ಷಗಳಿಂದ ನಾವು ಸಾಗುವಳಿ ಮಾಡಿಕೊಂಡು ಬಂದಿದ್ದೆವು. ನಮ್ಮ ಹೆಸರಿನಲ್ಲಿ ಸಾಗುವಳಿ ಚೀಟಿ ಮತ್ತು ಪಹಣಿ ಕೂಡ ಇದೆ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ ನಮಗೆ ಸೇರಿದ 24 ಎಕರೆ ಜಮೀನನ್ನು ನೀಡುವಾಗ ಗ್ರಾಮಾಂತರ
ಶಾಸಕರು ಹಾಗೂ ಉಪ ವಿಭಾಗಾಧಿಕಾರಿಗಳು ಮಧ್ಯಪ್ರವೇಶ ಮಾಡಿ, ಎಕರೆಗೆ ₹40 ಲಕ್ಷ ಪರಿಹಾರ ಹಾಗೂ ಒಂದು ನಿವೇಶನ ಕೊಡುವುದಾಗಿ ತೀರ್ಮಾನಿಸಿದ್ದರು’ ಎಂದು ಪ್ರತಿಭಟನಕಾರರು ಹೇಳಿದರು.

‘ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿ 24 ಎಕರೆ ಜಮೀನಿಗೆ ₹10.54 ಕೋಟಿನಿಗದಿ ಮಾಡಿ, ಜಿಲ್ಲಾಧಿಕಾರಿ ಖಾತೆಗೆ ಜಮಾ ಕೂಡ ಮಾಡಿದೆ. ಆದರೆ ಇಲ್ಲಿಯವರೆಗೆ ಭೂಮಿ ಕಳೆದುಕೊಂಡ ನಮಗೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಪರಿಹಾರ ಸಿಗದ ಹೊರತು ನಾವು ಹೇಗೆ ವಿಮಾನ ನಿಲ್ದಾಣ ಉದ್ಘಾಟನೆಗೆ ಒಪ್ಪುತ್ತೇವೆ, ಆದ್ದರಿಂದ ಯಾವ ಕಾರಣವನ್ನೂ ಹೇಳದೆ ವಿಮಾನ ನಿಲ್ದಾಣದ ಉದ್ಘಾಟನೆಗೆ ಮೊದಲೇ ಉಪವಿಭಾಗಾಧಿಕಾರಿಗೆ ಪರಿಹಾರ ನೀಡುವಂತೆ ಆದೇಶ ನೀಡಬೇಕು’ ಎಂದು ಮನವಿಯಲ್ಲಿ ಕೋರಿದರು. ರೈತ ಮುಖಂಡರಾದ ಬಿ.ಟಿ. ರವಿಕುಮಾರ್, ಬಿ.ಆರ್. ನಾಗರಾಜ್, ಬಾಲಕೃಷ್ಣ, ರಾಜಪ್ಪ, ಶಿವಮ್ಮ, ಶಾಂತಮ್ಮ, ಚಂದ್ರಪ್ಪ ಹಾಗೂ ಮಲೆನಾಡು ರೈತ ಹೋರಾಟ ಸಮಿತಿಯ ಮುಖ್ಯಸ್ಥ ತೀ.ನ. ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT