ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ದೇಗುಲಗಳಲ್ಲಿ ಮತ್ತೆ ‘ಸಪ್ತಪದಿ’ ಆರಂಭ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Last Updated 21 ಜುಲೈ 2021, 12:41 IST
ಅಕ್ಷರ ಗಾತ್ರ

ಶಿವಮೊಗ್ಗ: ಕೋವಿಡ್‌ ಸಂಕಷ್ಟದ ಸಮಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಸಪ್ತಪದಿ ಯೋಜನೆ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ. ರಾಜ್ಯದ 100 ಆಯ್ದ ದೇವಸ್ಥಾನಗಳಲ್ಲಿ ಸರ್ಕಾರದಿಂದಲೇ ಸರಳ ವಿವಾಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಮಾಧ್ಯಮಗಳಿಗೆ ವಿವರ ನೀಡಿದರು.

ಈ ಯೋಜನೆಯಡಿ ಮದುವೆಯಾಗುವ ವಧುವಿಗೆ ₹ 40 ಸಾವಿರ ಮೌಲ್ಯದ ಚಿನ್ನ, 10 ಸಾವಿರ ನಗದು, ಧಾರೆ ಸೀರೆ ಹಾಗೂ ವರನಿಗೆ ₹ 5 ಸಾವಿರ ನಗದು ನೀಡಲಾಗುವುದು. ಮದುವೆಗಳಿಗೆ ಈಗಾಗಲೆ ಮುಹೂರ್ತ ನಿಗದಿಪಡಿಸಲಾಗಿದೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊರೊನಾ ಸಮಯ ಕಳೆದ ನಂತರ ಜನಸಾಮಾನ್ಯರು ಆಡಂಬರದ ಮದುವೆಗಿಂತ ಸರಳ ಮದುವೆಗಳತ್ತ ಮನಸ್ಸು ಮಾಡುತ್ತಿದ್ದಾರೆ. ಸರ್ಕಾರ ಆಯೋಜಿಸುವ ಮದುವೆಗಳತ್ತ ಒಲವು ತೋರುತ್ತಿದ್ದಾರೆ ಎಂದರು.

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೂಲ ಸೌಕರ್ಯ ಸೇರಿದಂತೆ ದೇವಸ್ಥಾನದ ಸರ್ವಾಂಗೀಣ ವಿಕಾಸಕ್ಕೆ ಕ್ರಮ ಕೈಗೊಳ್ಳಲು ನೆರವು ನೀಡಲಾಗುವುದು. ಕ್ರಿಯಾ ಯೋಜನೆ ರೂಪಿಸಿ, ಸಲ್ಲಿಸಲು ಸೂಚಿಸಲಾಗಿದೆ. ಶೀಘ್ರ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಜಿಲ್ಲೆಗೆ ಅಗತ್ಯವಾಗಿರುವ ಹಾಗೂ ಅರ್ಚಕರ ಕೋರಿಕೆಯಂತೆ ವಸತಿಯುಕ್ತ ಆಗಮ ವೇದ ಪಾಠಶಾಲೆಗಳನ್ನು ಮಂಜೂರು ಮಾಡಲಾಗುವುದು. ಈ ವೇದಾದ್ಯಯನ ಶಾಲೆಯು ಆಗಸ್ಟ್-ಡಿಸೆಂಬರ್‌ನಲ್ಲಿ ಆರಂಭವಾಗಲಿವೆ ಎಂದು ಮಾಹಿತಿ ನೀಡಿದರು.

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಹಣಗೆರೆಕಟ್ಟೆಯಲ್ಲಿ ಭಕ್ತರ ಅನುಕೂಲಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಶೀಘ್ರ ಸಭೆ ಕರೆಯಲಾಗುವುದು. ಚರ್ಚಿಸಿದ ನಂತರ ಸೂಕ್ತ ಯೋಜನೆ ರೂಪಿಸಿ, ಕಾರ್ಯಗತಗೊಳಿಸಲಾಗುವುದು ಎಂದು ವಿವರ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ‘ಸೂಡಾ’ ಅಧ್ಯಕ್ಷ ಎಸ್‌.ಎಸ್‌. ಜ್ಯೋತಿಪ್ರಕಾಶ್, ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ, ಪಾಲಿಕೆ ಸದಸ್ಯರಾದ ಎಸ್‌.ಎನ್‌.ಚನ್ನಬಸಪ್ಪ, ಜ್ಞಾನೇಶ್ವರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT