ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೌಕರರ ವಿರೋಧಿ ನಿಲುವುಗಳೇ ಬಿಜೆಪಿಗೆ ಮುಳುವು: ಆರ್‌.ಎಂ. ಮಂಜುನಾಥಗೌಡ

Published 29 ಮೇ 2024, 15:50 IST
Last Updated 29 ಮೇ 2024, 15:50 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಮತ ಕೇಳುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ. ಸರ್ಕಾರಿ ನೌಕರರ ವಿರೋಧಿ ನಿಲುವುಗಳೇ ಅವರಿಗೆ ಚುನಾವಣೆಯಲ್ಲಿ ಮುಳುವು ಆಗಲಿವೆ’ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಹೇಳಿದರು. 

‘ಹಳೇ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿದರು. ಪದವೀಧರರು ಉದ್ಯೋಗ ಕೇಳಿದರೆ ಕೇಂದ್ರ ಸರ್ಕಾರದ ಮಂತ್ರಿಗಳು ಪಕೋಡಾ ಮಾರುವಂತೆ ಹೇಳಿದರು. ಸರ್ಕಾರಿ ನೌಕರರ ಹಿತಕಾಯಲಿಲ್ಲ. ಹೀಗಾಗಿಯೇ ಅವರು ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಚುನಾವಣೆ ಮುಗಿದ ಬಳಿಕ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಲಿದೆ. ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡಲಿದೆ. ಯುವ ಜನರಿಗಾಗಿ ಯುವ ನಿಧಿಯನ್ನು ಆರಂಭಿಸುವ ಮೂಲಕ ಪ್ರತಿ ತಿಂಗಳು ₹ 3,000 ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ’ ಎಂದು ತಿಳಿಸಿದರು. 

‘ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ ಅವರ ಗೆಲುವು ನಿಶ್ಚಿತವಾಗಿದೆ. ಮೊದಲ ಪ್ರಾಶಸ್ತ್ಯದ ಮತದಲ್ಲಿಯೇ ಗೆಲ್ಲುತ್ತಾರೆ. ಆಯನೂರು ಮಂಜುನಾಥ್‌ ಅವರು ಹಿರಿಯ ರಾಜಕಾರಣಿ. ಅವರ ಹೋರಾಟವನ್ನು ಮತದಾರರು ಗುರುತಿಸಿದ್ದಾರೆ’ ಎಂದು ಹೇಳಿದರು. 

‘ಕಾಂಗ್ರೆಸ್‌ ಪಕ್ಷವು ಈ ಬಾರಿ ವ್ಯವಸ್ಥಿತವಾಗಿ ಚುನಾವಣೆ ಎದುರಿಸುತ್ತಿದೆ. ಸರ್ಕಾರದ ಸಾಧನೆಗಳು ನಮಗೆ ಪೂರಕವಾಗಿವೆ. ಶಿಕ್ಷಣ ಇಲಾಖೆಯಲ್ಲಿ ಹಲವಾರು ಬದಲಾವಣೆ ಕೂಡ ಮಾಡಲಾಗಿದೆ. ಮಧು ಬಂಗಾರಪ್ಪ ಸಚಿವರಾದ ಮೇಲೆ 13,500 ಶಿಕ್ಷಕರ ನೇಮಕಾತಿ ಮಾಡಿ ಅವರಿಗೆ ಆದೇಶ ಪತ್ರ ನೀಡಿರುವ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ಬದಲಾವಣೆಯ ಸಂಕೇತವಾಗಿದೆ’ ಎಂದರು. 

‘ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕಾರ್ಮಿಕರು ಕೆಲಸ ಮಾಡುವ ಅವಧಿಯನ್ನು 12 ತಾಸಿಗೆ ಹೆಚ್ಚಿಸಿದರು. ಇದರಿಂದಾಗಿ ಪದವೀಧರ ಕಾರ್ಮಿಕರು ರೋಸಿ ಹೋಗಿದ್ದಾರೆ. ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ’ ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಕಲಗೋಡು ರತ್ನಾಕರ, ಜಿ.ಡಿ.ಮಂಜುನಾಥ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT