ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರುಪತ್ಯದ ಕನಸು ಕಂಡಿದ್ದವರಿಗೆ ಮೀಸಲಾತಿ ಅಡ್ಡಿ

ಸೊರಬ: ತಾಲ್ಲೂಕಿನ 5 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಗೆ ಹಲವರ ವಿರೋಧ
Last Updated 6 ಜುಲೈ 2021, 3:22 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನ 5 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಕೆಲ ಮುಖಂಡರಲ್ಲಿ ಹೊಸ ಉತ್ಸಾಹ ಮೂಡಿದ್ದರೆ ಪ್ರಮುಖ ಹುರಿಯಾಳುಗಳಿಗೆನಿರಾಸೆ ಮೂಡಿಸಿದೆ.

5 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ ನಿಗದಿ ಆಗಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಕನಸು ಕಾಣುತ್ತಿದ್ದ ಪ್ರಮುಖರಿಗೆ ಅಸಮಾಧಾನ ತಂದಿದೆ.

ಚಂದ್ರಗುತ್ತಿ ಕ್ಷೇತ್ರ ಹೊರತುಪಡಿಸಿ, ಮೂಡಿ, ಉದ್ರಿ ತತ್ತೂರು, ಜಡೆ ಮಹಿಳಾ ಮೀಸಲಾತಿಗೆ ಒಳಪಟ್ಟರೆ, ಉಳವಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬದಲು ಹೊಸದಾಗಿ ಸೇರ್ಪಡೆಯಾಗಿರುವ ಶಿಗ್ಗಾ ಕ್ಷೇತ್ರ ಅನುಸೂಚಿತ ಜಾತಿಗೆ ಮೀಸಲಾಗಿದೆ. ಈ ಕ್ಷೇತ್ರದಲ್ಲಿ ಗೆದ್ದು ಪಾರುಪತ್ಯದ ಕನಸು ಕಂಡಿದ್ದ ಅಭ್ಯರ್ಥಿಗಳು ಜಾತಿಯಾಧಾರಿತ ಮೀಸಲಾತಿ ನಿಗದಿಯಾಗಿಲ್ಲ ಎಂದು ಮೀಸಲಾತಿ ವಿರೋಧಿಸುತ್ತಿದ್ದಾರೆ.

ಕಳೆದ ಬಾರಿ ಸಾಮಾನ್ಯ ಮಹಿಳಾ ಕ್ಷೇತ್ರವಾಗಿದ್ದ ಚಂದ್ರಗುತ್ತಿ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹುಲ್ತಿಕೊಪ್ಪ ಶ್ರೀಧರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಗಣಪತಿ, ಬಿಜೆಪಿಯಿಂದ ಶಾಸಕ ಕುಮಾರ್ ಬಂಗಾರಪ್ಪ ಅವರ ನಿಕಟವರ್ತಿ ಕಡಸೂರು ಶಿವಕುಮಾರ್, ಮಣ್ಣಿತ್ತೆ ಪರಮೇಶ್, ಈಶ್ವರ ಚನ್ನಪಟ್ಟಣ ಹಾಗೂ ಜೆಡಿಎಸ್‌ನಿಂದ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಅಜ್ಜಪ್ಪ ಮೊದಲ ಬಾರಿ ಸದಸ್ಯರಾಗುವ ಕನಸು ಕಂಡಿದ್ದಾರೆ.

ಈ ಹಿಂದೆ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿದ್ದ ಆನವಟ್ಟಿ ಈಗ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ್ದು, ಸಮೀಪದ ಮೂಡಿ ಕ್ಷೇತ್ರವನ್ನು ಜಿಲ್ಲಾ ಪಂಚಾಯಿತಿ ಹೊಸ ಕ್ಷೇತ್ರವಾಗಿ ಮರು ವಿಂಗಡಣೆ ಮಾಡಲಾಗಿದೆ.

ಆನವಟ್ಟಿ ಹೋಬಳಿ ಯಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯ ಇರುವುದರಿಂದ ಮೂಡಿ ಸಾಮಾನ್ಯ ಕ್ಷೇತ್ರವಾಗಿಯೇ ಉಳಿಯುತ್ತದೆ ಎನ್ನುವ ನಂಬಿಕೆ ಹುಸಿಯಾಗಿದೆ.

ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್, ಹಿರಿಯ ಮುಖಂಡ ಚೌಟಿ ಚಂದ್ರಶೇಖರ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಜೆಡಿಎಸ್‌ನಿಂದ ಗೆದ್ದಿದ್ದ ವೀರೇಶ್ ಕೊಟಗಿ ಮರು ಆಯ್ಕೆ ಬಯಸಿದ್ದರು. ಆದರೆ ಅವರಿಗೆ ನಿರಾಸೆಯಾಗಿದೆ.

ಉಳವಿಯಿಂದ ಹೊಸ ಕ್ಷೇತ್ರವಾಗಿ ಬದಲಾಗಿರುವ ಶಿಗ್ಗಾ ಕ್ಷೇತ್ರ ಅನುಸೂಚಿತ ಜಾತಿಗೆ ಮೀಸಲಾಗಿದ್ದರಿಂದ ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕಸವಿ ನಾಗರಾಜ್ ಅವರ ಸ್ಪರ್ಧೆಗೆ ಅವಕಾಶ ಇಲ್ಲದಾಗಿದೆ.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಯನಾ ಹಾಗೂ ಅವರ ಪತಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಪಾದ ಹೆಗಡೆ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲದಂತಾಗಿದೆ. ಅಲ್ಲದೇ ಮೂರು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಒಂದು ಅವಧಿಗೆ ಉಪಾಧ್ಯಕ್ಷರಾಗಿದ್ದ ಹುಣವಳ್ಳಿ ಗಂಗಾಧರಪ್ಪ ಅವರಿಗೂ ಮೀಸಲಾತಿ ತೊಡಕುಂಟು ಮಾಡಿದೆ. ಈ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಬಿಳುವಾಣಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುರೇಶ್, ಸುರೇಂದ್ರ ಸುತ್ತುಕೋಟೆ, ಬಿಜೆಪಿಯಿಂದ ಗುರುವಪ್ಪ, ಕಿರಣಕುಮಾರ್, ಜೈಕುಮಾರ್, ಚಂದ್ರು ಸುತ್ತುಕೋಟೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಉದ್ರಿ ತತ್ತೂರು ಕ್ಷೇತ್ರ ಸಾಮಾನ್ಯ (ಮಹಿಳೆ) ಮೀಸಲಾಗಿದ್ದು, ಬಿಜೆಪಿಯಿಂದ ಸದಸ್ಯರಾಗಿದ್ದ ಕೋಮಲ ನಿರಂಜನ ಸ್ಪರ್ಧಿಸುವ ಮನಸ್ಸು ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸತೀಶ್ ತಮ್ಮ ಪತ್ನಿ ಸುಮಲತಾ ಅವರನ್ನು ಕಣಕ್ಕಿಳಿಸುವ ಪ್ರಯತ್ನದಲ್ಲಿದ್ದಾರೆ.

ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆ ಶಾಸಕ ಕುಮಾರ್ ಬಂಗಾರಪ್ಪ ನಿರ್ಧರಿಸುವುದರಿಂದ ಬಿಜೆಪಿಯ ಮೂಲ ಕಾರ್ಯಕರ್ತರು ಹಾಗೂ ಆಕಾಂಕ್ಷಿತರು ಜಿಲ್ಲಾ ಸಮಿತಿ ಮುಂದೆ ಕೈಯೊಡ್ಡಿ ನಿಲ್ಲುವ ಪರಿಸ್ಥಿತಿ ಇದೆ. ಜಡೆ ಸಾಮಾನ್ಯ ಮಹಿಳಾ ಕ್ಷೇತ್ರವಾಗಿದ್ದು, ಕಾಂಗ್ರೆಸ್‌ನಿಂದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಲಾಕ್ಷಮ್ಮ, ಜಯಶ್ರೀ, ಶಾಂತಲಾ ವೀರೇಂದ್ರ ಅವರ ಹೆಸರು ಕೇಳಿಬರುತ್ತಿದೆ.

ಬಿಜೆಪಿಯಲ್ಲಿ ಶಮನಗೊಳ್ಳದ ಬಣ ರಾಜಕೀಯ

ಕುಮಾರ್ ಬಂಗಾರಪ್ಪ ಶಾಸಕರಾದ ದಿನದಿಂದಲೂ ವಲಸೆ ಹಾಗೂ ಮೂಲ ಬಿಜೆಪಿಗರ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಶಾಸಕರ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಹಿರಿಯ ಮುಖಂಡರು ವಿರೋಧ ಪಕ್ಷವಾಗಿ ಶಾಸಕರ ಆಡಳಿತವನ್ನು ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಮೇಲೆ ಜಿಲ್ಲಾ ಮುಖಂಡರು 11 ಜನರ ಉಸ್ತುವಾರಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಿದ್ದರು.

ಮತ್ತೆ ಅಂತಹುದೇ ಸ್ಥಿತಿ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಎದುರಾಗಲಿದೆ. ಶಾಸಕರು ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವರಿಗೆ ಮಾತ್ರ ಟಿಕೆಟ್ ನೀಡಬಹುದು. ತಾಲ್ಲೂಕಿನಲ್ಲಿ ಪಕ್ಷಕಟ್ಟಿ ಬೆಳೆಸಿದ ನಿಷ್ಠಾವಂತರಿಗೆ ಟಿಕೆಟ್ ಕೈತಪ್ಪಲಿದೆ ಎನ್ನುವ ಆತಂಕ ಇದೆ ಮೂಲ ಬಿಜೆಪಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT