ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿಗೆ ವಿರೋಧವಿಲ್ಲ, ಅರ್ಹರಿಗೆ ಕೊಡಿ: ಆರಗ ಜ್ಞಾನೇಂದ್ರ

Published : 6 ಸೆಪ್ಟೆಂಬರ್ 2024, 13:55 IST
Last Updated : 6 ಸೆಪ್ಟೆಂಬರ್ 2024, 13:55 IST
ಫಾಲೋ ಮಾಡಿ
Comments

ತೀರ್ಥಹಳ್ಳಿ: ‘ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜಕೀಯವಾಗಿ ವಿರೋಧಿಸುವುದಿಲ್ಲ. ಯೋಜನೆಗಳ ಅನುಷ್ಠಾನಕ್ಕೆ ಬಿಜೆಪಿ ಸಹಕಾರವಿದೆ. ನನ್ನ ಹೆಂಡತಿಗೂ ಫ್ರೀ ನಿಮ್ಮ ಹೆಂಡತಿಗೂ ಫ್ರೀ ಅಂದ್ರೆ ದುಬಾರಿ ಆಗುತ್ತದೆ. ಅರ್ಹರಿಗೆ ಯೋಜನೆ ತಲುಪಿಸಿ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಗ್ರಾಮೀಣಾಭಿವೃದ್ಧಿ ಭವನದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಬೊಕ್ಕಸದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ಬಡವರು, ಪರಿಶಿಷ್ಟ ವರ್ಗಗಳ ಕಲ್ಯಾಣದ ಕಾರ್ಯಕ್ರಮವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಸರ್ಕಾರ ಬಂಡವಾಳ ಸೃಷ್ಟಿಗೆ ಒತ್ತು ನೀಡದಿದ್ದರೆ ಭವಿಷ್ಯದಲ್ಲಿ ರಾಜ್ಯದ ಆದಾಯ ಕುಂಠಿತಗೊಳ್ಳಲಿದೆ. ಸಾರಿಗೆ ನಿಗಮ ನಷ್ಟದಲ್ಲಿದೆ. ಆಸ್ತಿ ನೊಂದಾಣಿ ದರ ದುಬಾರಿಯಾಗಿದೆ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಪೆಟ್ರೋಲ್‌, ಡೀಸೆಲ್‌ ಮೇಲೆ ಸೆಸ್‌ ಹಾಕಿ ಸಾಮಾನ್ಯ ಜನರಿಂದ ಸುಲಿಗೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತದಲ್ಲಿ ಶ್ರೀಮಂತರ ಅಭಿವೃದ್ಧಿ ಮುಖ್ಯವಲ್ಲ. ಬಡವರು, ಪರಿಶಿಷ್ಟರು ಯಾವ ರೀತಿ ಜೀವನ ನಡೆಸುತ್ತಿದ್ದಾರೆ ಎನ್ನುವುದು ಮುಖ್ಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಕುಟುಕಿದರು.

‘ದೇಶದಲ್ಲಿ 30 ಕೋಟಿ ಜನರು ನಿರುದ್ಯೋಗ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ನರೇಗಾ ಯೋಜನೆಯ ಅನುದಾನವನ್ನು ₹76,000 ಕೋಟಿಯಿಂದ ₹26,000 ಕೋಟಿಗೆ ಇಳಿಸಿದೆ. ಜನತಾಮನೆ, ಆಶ್ರಯಮನೆಗೆ ಅನುದಾನ ನೀಡುತ್ತಿಲ್ಲ. ಕಾಂಗ್ರೆಸ್‌ ಬಡವರು, ಪರಿಶಿಷ್ಠರ ಏಳಿಗೆಗೆ ಕಾರ್ಯಕ್ರಮ ರೂಪಿಸಿದೆ. ಜಾತಿ ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ’ ಎಂದರು. 

ಎಂಎಡಿಬಿ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೋಪಾಲ, ತಾಲ್ಲೂಕು ಘಟಕದ ಅಧ್ಯಕ್ಷ ಶಚೀಂದ್ರ ಹೆಗ್ಡೆ, ಇಓ ಎನ್.ಶೈಲಾ ಮಾತನಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರೆಹಮತ್‌ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್‌, ಮುಖಂಡರಾದ ಆರ್‌.ಪ್ರಸನ್ನ ಕುಮಾರ್‌, ಕೆಸ್ತೂರು ಮಂಜುನಾಥ, ಮುಡುಬ ರಾಘವೇಂದ್ರ, ಕಲಗೋಡು ರತ್ನಾಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT