ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೀರ್ಥಹಳ್ಳಿ: ಕಾಡುಪ್ರಾಣಿ ಉಪಟಳ, ರೈತಾಪಿ ವರ್ಗ ಕಂಗಾಲು

Published 11 ಜುಲೈ 2024, 5:20 IST
Last Updated 11 ಜುಲೈ 2024, 5:20 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪಶ್ಚಿಮಘಟ್ಟದ ಜೀವವೈವಿಧ್ಯಕ್ಕೆ ಮಾರಕವಾದ ಏಕಜಾತಿಯ ನೆಡುತೋಪು ಅಭಿವೃದ್ಧಿ ನಿಂತಿಲ್ಲ. ಅಕೇಶಿಯಾ, ನೀಲಗಿರಿ ಮರ ಬೆಳೆಸುವ ಯೋಜನೆಗಳಿಂದ ಸಹಜ ಅರಣ್ಯಕ್ಕೆ ಕುತ್ತುಂಟಾಗಿದೆ. ಕಾಡುಪ್ರಾಣಿ ಉಪಟಳ ಹೆಚ್ಚಿದೆ.

ಅಧಿಸೂಚಿತ ಅರಣ್ಯ ಪ್ರದೇಶದಲ್ಲಿನ ಭೂ ಒತ್ತುವರಿ ತೆರವು ಕಾರ್ಯಾಚರಣೆ ಪ್ರಸ್ತಾವ ಮಲೆನಾಡು ಭಾಗದಲ್ಲಿ ಕೋಲಾಹಲ ಸೃಷ್ಟಿಸಿದೆ. ಬಗರ್‌ಹುಕುಂ ಅರ್ಜಿ ಸಲ್ಲಿಸಿ ಸಾಗುವಳಿ ಚೀಟಿ ನಿರೀಕ್ಷೆಯಲ್ಲಿರುವ ರೈತರನ್ನು ಕಂಗಾಲು ಮಾಡಿದೆ.

247 ಗ್ರಾಮಗಳ ಪೈಕಿ ಬಹುತೇಕ ಗ್ರಾಮಗಳು ಸೋಮೇಶ್ವರ, ಮೂಕಾಂಬಿಕಾ, ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ, ಕುಪ್ಪಳ್ಳಿ ಜೈವಿಕ ಅರಣ್ಯಧಾಮಕ್ಕೆ ಹೊಂದಿಕೊಂಡಿವೆ. ಈ ಪ್ರದೇಶದ ಅಂದಾಜು 15 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಆನೆ, ಹುಲಿ, ಚಿರತೆ, ಕಾಡುಕೋಣ, ಮೊಲ, ಹಂದಿ, ಜಿಂಕೆ, ಕಡವೆ, ಮಂಗಗಳು ಪ್ರತಿನಿತ್ಯ ಸಾಗುವಳಿ ಜಮೀನಿಗೆ ಹಾನಿಯುಂಟು ಮಾಡುತ್ತಿವೆ. ಇದರಿಂದಾಗಿ ಬೆಳೆ ಉಳಿಸಿಕೊಳ್ಳಲು ರೈತರು ಹೈರಾಣಾಗಿದ್ದಾರೆ.

ಸ್ಥಳೀಯರ ವಿರೋಧದ ನಡುವೆಯೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಪರ್ಯಾಯ ಕಾಡು ನಿರ್ಮಿಸುವ ನೆಪದಲ್ಲಿ ಪುನಾ ಏಕಜಾತಿ ನೆಡುತೋಪು ಬೆಳೆಸುತ್ತಿದೆ. ನೆಡುತೋಪು ಉದ್ದೇಶಕ್ಕೆ ಬೆಂಕಿ ಹಚ್ಚಿ ಸಹಜ ಕಾಡು ನಾಶ ಮಾಡುವ ಪ್ರಕರಣ ಈಚೆಗೆ ಮುಳುಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಜದಕಟ್ಟೆ ಗ್ರಾಮದಲ್ಲಿ ನಡೆದಿದೆ.

ಹಡ್ಡೆಯೊಳಗೆ ಸಸಿ ನೆಟ್ಟರು!: 

‘ಸೌಳಿ ಗ್ರಾಮದಲ್ಲಿ ಸಹಜವಾಗಿ ಬೆಳೆದಿರುವ ಹಡ್ಡೆ, ಬ್ಯಾಣದ ಒಳಗೆ ಈ ಬಾರಿ ಅರಣ್ಯ ಇಲಾಖೆ ವನಮಹೋತ್ಸವ ಆಚರಿಸಿದೆ. ಗಿಡ, ಮರಗಳ ನೆರಳಿನಿಂದ ಬಿಸಿಲು ಕಾಣದ ಹಡ್ಡೆಯೊಳಗೆ ಗಿಡ ಬೆಳೆಸುವ ಯೋಜನೆಯ ಪ್ರಯೋಜನೆ ಏನು? ಅಲ್ಲದೇ ಗಿಡಗಳಿಗೆ ಬಳಸಿರುವ ಪ್ಲಾಸ್ಟಿಕ್‌ ಕವರ್‌ಗಳನ್ನು ಬೇಕಾಬಿಟ್ಟಿಯಾಗಿ ಹಡ್ಡೆಯೊಳಗೆ ಎಸೆದು ಪರಿಸರ ನಾಶ ಮಾಡಿದ್ದಾರೆ’ ಎಂದು ಸ್ಥಳೀಯರಾದ ಎಸ್‌.ಎಸ್.‌ ನಾಗರಾಜ್‌ ದೂರುತ್ತಾರೆ.

ಅಡಿಕೆಗೆ ಮಂಗನ ಕಾಟ: 

‘ಕಾಡುಪ್ರಾಣಿಗಳು ಸಾಗುವಳಿ ಜಮೀನಿಗೆ ಲಗ್ಗೆ ಇಡುತ್ತಿದ್ದು ರೈತಾಪಿ ಜನರ ಜೀವನ ದುಸ್ತರವಾಗಿದೆ. ಕಾಡುಕೋಣ, ಹಂದಿಗಳು ಭತ್ತ, ಬಾಳೆ, ಕಾಳುಮೆಣಸು, ಏಲಕ್ಕಿ, ಅಡಿಕೆ ಬೆಳೆಗಳಿಗೆ ತೀವ್ರ ಹಾನಿ ಮಾಡುತ್ತಿವೆ. ಮಂಗಗಳು ಅಡಿಕೆ ತೋಟಗಳಿಗೆ ಲಗ್ಗೆ ಇಡುತ್ತಿದ್ದು ಅಡಿಕೆ ಕಾಯಿಗಳು ಉದುರುತ್ತಿವೆ. ಎಲೆಚುಕ್ಕಿ, ಕೊಳೆ, ಹಳದಿರೋಗಕ್ಕೆ ತತ್ತರಿಸಿರುವ ಅಡಿಕೆ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ. ಮಂಗಗಳನ್ನು ಅರಣ್ಯ ಇಲಾಖೆ ನಿಯಂತ್ರಿಸದಿದ್ದರೆ ರೈತರ ಬದುಕು ಸರ್ವ ನಾಶವಾಗಲಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಫಣಿರಾಜ್‌ ಅಳಲು ತೋಡಿಕೊಳ್ಳುತ್ತಾರೆ.

ಕಟ್ಟೇಹಕ್ಕಲು ಗ್ರಾಮದಲ್ಲಿ ಅಡಿಕೆ ಕಾಯಿಗಳನ್ನು ಮಂಗಗಳು ಉದುರಿಸಿರುವುದು
ಕಟ್ಟೇಹಕ್ಕಲು ಗ್ರಾಮದಲ್ಲಿ ಅಡಿಕೆ ಕಾಯಿಗಳನ್ನು ಮಂಗಗಳು ಉದುರಿಸಿರುವುದು
ರಂಜದಕಟ್ಟೆ ಗ್ರಾಮದಲ್ಲಿ ನೆಡುತೋಪು ನಿರ್ಮಿಸಲು ಬೆಂಕಿ ಹಂಚಿರುವುದು
ರಂಜದಕಟ್ಟೆ ಗ್ರಾಮದಲ್ಲಿ ನೆಡುತೋಪು ನಿರ್ಮಿಸಲು ಬೆಂಕಿ ಹಂಚಿರುವುದು
ರಂಜದಕಟ್ಟೆ ಗ್ರಾಮದಲ್ಲಿ ಅಕೇಶಿಯಾ ನೆಡುತೋಪು ನಿರ್ಮಿಸುವ ಉದ್ದೇಶಕ್ಕೆ ಕಲ್ಟಿವೇಟರ್‌ ಬಳಸಿ ಮಣ್ಣು ಹುಡಿ ಮಾಡುತ್ತಿರುವುದು
ರಂಜದಕಟ್ಟೆ ಗ್ರಾಮದಲ್ಲಿ ಅಕೇಶಿಯಾ ನೆಡುತೋಪು ನಿರ್ಮಿಸುವ ಉದ್ದೇಶಕ್ಕೆ ಕಲ್ಟಿವೇಟರ್‌ ಬಳಸಿ ಮಣ್ಣು ಹುಡಿ ಮಾಡುತ್ತಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಸೌಳಿ ಗ್ರಾಮದಲ್ಲಿ ಸಹಜವಾಗಿ ಬೆಳೆದಿರುವ ಹಡ್ಡೆಯೊಳಗೆ ಅರಣ್ಯ ಇಲಾಖೆ ಸಸಿ ನೆಟ್ಟು ಪ್ಲಾಸ್ಟಿಕ್‌ ಚೀಲ ಬೇಕಾಬಿಟ್ಟಿ ಬಿಸಾಡಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಸೌಳಿ ಗ್ರಾಮದಲ್ಲಿ ಸಹಜವಾಗಿ ಬೆಳೆದಿರುವ ಹಡ್ಡೆಯೊಳಗೆ ಅರಣ್ಯ ಇಲಾಖೆ ಸಸಿ ನೆಟ್ಟು ಪ್ಲಾಸ್ಟಿಕ್‌ ಚೀಲ ಬೇಕಾಬಿಟ್ಟಿ ಬಿಸಾಡಿರುವುದು
ರಂಜದಕಟ್ಟೆ ಗ್ರಾಮದಲ್ಲಿ ನೆಡುತೋಪು ನಿರ್ಮಿಸಲು ಅಧಿಕಾರಿಗಳು ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಲಾಭದಾಯಕ ಮರ ಬೆಳೆಸುವ ಬದಲು ಕಾಡುಪ್ರಾಣಿಗಳ ಆಹಾರಕ್ಕಾಗಿ ಹಣ್ಣಿನ ಗಿಡ ಬೆಳೆಸಬೇಕು
ಸುಬ್ರಹ್ಮಣ್ಯ ಬಿಳುಕೊಪ್ಪ ಸ್ಥಳೀಯ ಮುಖಂಡ
ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ನೆಡುತೋಪು ಬೆಳೆಸುವುದು ಜನ ಮತ್ತು ಪರಿಸರ ವಿರೋಧಿ ಚಟುವಟಿಕೆಯಾಗಿದೆ. 20000 ಹೆಕ್ಟೇರ್‌ ಪ್ರದೇಶದಲ್ಲಿ ಸಹಜ ಅರಣ್ಯ ಬೆಳೆಸಿದರೆ ಜೀವವೈವಿಧ್ಯ ರಕ್ಷಣೆ ಸಾಧ್ಯ
ಕೆ.ಪಿ.ಶ್ರೀಪಾಲ್‌ ನಮ್ಮೂರಿಗೆ ಆಕೇಶಿಯಾ ಬೇಡ ಒಕ್ಕೂಟ ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT