ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣ

ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ: ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ಶಾಸಕ ಅಶೋಕ ನಾಯ್ಕ ಚಾಲನೆ
Last Updated 12 ಡಿಸೆಂಬರ್ 2022, 6:03 IST
ಅಕ್ಷರ ಗಾತ್ರ

ಶಿವಮೊಗ್ಗ: ಆರು ದಶಕಗಳಿಂದ ಬೆಳಕು ಕಾಣದ ಶೆಟ್ಟಿಹಳ್ಳಿ- ಚಿತ್ರಶೆಟ್ಟಿಹಳ್ಳಿ ಗ್ರಾಮಗಳಿಗೆ 110 ಕೆ.ವಿ ಸಾಮರ್ಥ್ಯದ ವಿದ್ಯುತ್ ಸೌಲಭ್ಯಕ್ಕೆ ₹ 3.60 ಕೋಟಿ ವೆಚ್ಚದಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಗೆ ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್ ನಾಯ್ಕ ಭಾನುವಾರ ಚಾಲನೆ ನೀಡಿದರು.

ಈ ಹಳ್ಳಿಗಳಿಗೆ ವಿದ್ಯುತ್ ಶಕ್ತಿ ಸಮಸ್ಯೆ ನೀಗಿಸಲು ಹೋರಾಟ ನಡೆಸಿಕೊಂಡು ಬರಲಾಗಿತ್ತು. ಆದರೆ, ಅದು ಫಲಪ್ರದ ಆಗಿರಲಿಲ್ಲ. 1980ರಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಗೊಂಡ ಸಂದರ್ಭದಲ್ಲಿ ಈ ಗ್ರಾಮದ ಸುತ್ತಮುತ್ತ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಬಾರದು ಎಂದು ಆದೇಶ ಹೊರಡಿಸಲಾಗಿತ್ತು. ಆದ್ದರಿಂದ ಈ ಗ್ರಾಮಕ್ಕೆ ಯಾವುದೇ ಸೌಲಭ್ಯವನ್ನು ನೀಡಲು ಸಾಧ್ಯವಾಗಿರಲಿಲ್ಲ. ಅಂದಿನಿಂದ ಇಂದಿನವರೆಗೂ ಇಲ್ಲಿನ ಜನರು ಬೆಳಕಿಲ್ಲದೆ ಪ್ರಾಣಿಗಳ ರೀತಿ ಜೀವನ ಸಾಗಿಸುತ್ತಾ ಬಂದಿದ್ದರು. ಆದರೆ, ಈಗ ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ ಎಂದು ಶಾಸಕ ಅಶೋಕ್ ನಾಯ್ಕ ತಿಳಿಸಿದರು.

ಸೋಮವಾರದಿಂದಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಫೆಬ್ರುವರಿ ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಲಾಗಿದೆ. ಭೂಗತ ಕೇಬಲ್ ಅಳವಡಿಕೆ ಕಾಮಗಾರಿಯಿಂದ ಯಾರಿಗೂ ಹಾನಿ ಉಂಟಾಗುವುದಿಲ್ಲ ಎಂದರು.

ಈಗಾಗಲೇ ರಸ್ತೆ ನಿರ್ಮಾಣಕ್ಕೆ ₹ 50 ಲಕ್ಷ ಎರಡು ಬಾರಿ ಮಂಜೂರು ಮಾಡಲಾಗಿತ್ತು. ಆದರೆ, ಅರಣ್ಯ ಇಲಾಖೆಯವರು ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿರಲಿಲ್ಲ. ಅವರಿಗೆ ಇಲ್ಲಿನ ಪರಿಸ್ಥಿತಿ ಕುರಿತು ಮನವರಿಕೆ ಮಾಡಲಾಗಿದೆ. ಈಗಾಗಲೇ ಕಚ್ಚಾ ರಸ್ತೆ ನಿರ್ಮಾಣ ಈ ಭಾಗದಲ್ಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಡಾಂಬರ್‌ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದರು.

ಈ ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆ ನೀಗಿಸಲು ಟವರ್ ಮಂಜೂರು ಮಾಡಲಾಗಿದೆ. ಶಿವಮೊಗ್ಗ ಕ್ಷೇತ್ರಕ್ಕೆ 5 ಟವರ್‌ಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಚಿತ್ರ ಶಟ್ಟಿಹಳ್ಳಿ ಭಾಗಕ್ಕೂ ಒಂದು ಟವರ್ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪಿ.ಎಚ್. ಫಾಲಾಕ್ಷಿ ಮಾತನಾಡಿದರು. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ನಾಗರಾಜ್ ತಮ್ಮಡಿಹಳ್ಳಿ, ಪ್ರೇಮಾ ಸುಧಾಕರ್, ಮೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ವೀರೇಂದ್ರ ಎಚ್.ಆರ್., ಮುಖ್ಯ ಎಂಜಿನಿಯರ್ ಎಚ್. ಬಸಪ್ಪ, ಅಧೀಕ್ಷಕ ಎಂಜಿನಿಯರ್ ಎಸ್.ಜಿ. ಶಶಿಧರ್, ಪುರದಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀಬಾಯಿ, ಜಿ. ಮಾನಸ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜೇಶ್, ವಕೀಲ ದೇವರಾಜ್ ಪಿ. ಹಿಲ್ಲೋಡಿ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT