ಶುಕ್ರವಾರ, ಜುಲೈ 1, 2022
27 °C
ಡಿಎಸ್ಎಸ್‌ನ ಎಂ. ಗುರುಮೂರ್ತಿ ಸಲಹೆ

ಅಂಬೇಡ್ಕರ್ ಫೋಟೊ ಬದಲು ವಿಚಾರ ಬಳಸಿ: ಎಂ. ಗುರುಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ಡಾ.ಬಿ.ಆರ್. ಅಂಬೇಡ್ಕರ್ ಅವರ ಫೋಟೊ ಬಳಸುವ ಬದಲು ಅವರ ವಿಚಾರಗಳನ್ನು ಬಳಸಿಕೊಂಡರೆ ದಲಿತರ ಮೇಲೆ ದೌರ್ಜನ್ಯ ನಡೆಯುವುದಿಲ್ಲ ಎಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಸಲಹೆ ನೀಡಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ನೌಕರರ ಒಕ್ಕೂಟ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್‌, ಬಾಬು ಜಗಜೀವನರಾಂ ಜನ್ಮದಿನ ಹಾಗೂ ‘ಸಂವಿಧಾನ ಸಂರಕ್ಷಣಾ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುಡಿಯುವ ನೀರಿಗಾಗಿ ಹೋರಾಟ ಮಾಡಿದ ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್. ಬಾಲ್ಯದಲ್ಲಿ ನಡೆದ ಅವಮಾನ ಸಹಿಸಿಕೊಂಡು ವಿದ್ಯೆ ಪಡೆದು ದೇಶಕ್ಕೆ ಅಗತ್ಯವಾದ ಸಂವಿಧಾನವನ್ನು ನೀಡಿದರು. ದಲಿತರು ಅಂಬೇಡ್ಕರ್ ಅಮಲಿನಲ್ಲಿ ಇರುವ ಬದಲು ಅಂಬೇಡ್ಕರ್ ಅರಿವಿನಲ್ಲಿ ಇರಬೇಕು. ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತೆ ಮೇಲೆ ದೇಶ ಕಟ್ಟಬೇಕು ಎಂದು ಅವರು ಹೇಳಿದ್ದನ್ನು ಸದಾ ನೆನಪಿನಲ್ಲಿರಿಸಿಕೊಳ್ಳಬೇಕು ಎಂದರು.

‘ಶೋಷಿತ ಸಮುದಾಯಗಳು ಅಭಿವೃದ್ಧಿ ಹೊಂದಲು ಮೀಸಲಾತಿಯನ್ನು ಅಂಬೇಡ್ಕರ್‌ ನೀಡಿದ್ದಾರೆ. ದೇಶದಲ್ಲಿ ದೇವಸ್ಥಾನದ ಗಂಟೆ ಹೊಡೆಯುವುದಕ್ಕಿಂತ ಹೆಚ್ಚು ಶಾಲೆ ಗಂಟೆ ಹೊಡೆದರೆ ಮಾತ್ರ ದೇಶ ಮುಂದುವರಿಯುತ್ತದೆ. ದೇಶದ ಪ್ರಗತಿಯಲ್ಲಿ ವಿದ್ಯೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಸಂದೇಶ ಸಾರಿದ್ದರು’ ಸ್ಮರಿಸಿದರು.

‘ಅಂಬೇಡ್ಕರ್ ಅವರನ್ನು ಪೂಜಿಸುವ ಬದಲು ಅವರನ್ನು ಓದುವ ಅಗತ್ಯ ಇದೆ. ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಿ ಅವರನ್ನು ಪೂಜಿಸುವ ಬ್ರಾಹ್ಮಣ್ಯ ಪದ್ಧತಿಗೆ ನಾವು ಒಳಗಾಗಬಾರದು. ದೇಶದಲ್ಲಿ ಧರ್ಮ, ಧರ್ಮಗಳ ಮಧ್ಯೆ ಗಲಾಟೆ ಹಚ್ಚುವ ಕಾರ್ಯ ನಡೆಯುತ್ತಿದೆ. ಸಂವಿಧಾನ ವಿರೋಧಿ ಕೃತ್ಯಗಳು ಹೆಚ್ಚುತ್ತಿದ್ದು, ಸಂವಿಧಾನದ ಆಶಯಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

ಶಿವಮೊಗ್ಗ ನಿವೃತ್ತ ನ್ಯಾಯಾಧೀಶ ಸೆಲ್ವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಮಾರವಳ್ಳಿ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಪ್ರಾಧ್ಯಾಪಕ ಡಾ.ತಿಮ್ಮಪ್ಪ, ಉಪನ್ಯಾಸಕರಾದ ಸೋಮಶೇಖರ್ ಶಿಮೊಗ್ಗಿ, ಕಾಗಿನಲ್ಲಿ ನಾಗರಾಜ್, ಅರಿಸಿಣಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಕ್ಬಾಲ್, ದಲಿತ ನೌಕರರ ಸಂಘದ ಅಧ್ಯಕ್ಷ ಗುಡದಯ್ಯ, ಮುಖಂಡರಾದ ಬಸವರಾಜಪ್ಪ ರೋಟೆ, ನಿವೃತ್ತ ಶಿಕ್ಷಕ ಚಂದ್ರಪ್ಪ, ರಾಘವೇಂದ್ರ ನಾಯ್ಕ, ಚಂದ್ರಪ್ಪ, ವಕೀಲರಾದ ಚಂದ್ರಪ್ಪ, ರವಿಕುಮಾರ್, ಮಹಿಳಾ ಘಟಕ ಪದಾಧಿಕಾರಿಗಳಾದ ಚಂದ್ರಕಲಾ, ರೇಣುಕಮ್ಮ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು