ಶಿರಾಳಕೊಪ್ಪ: ಶತಮಾನಗಳ ಕಾಲ ಗತವೈಭವದಿಂದ ವಹಿವಾಟು ನಡೆಸಲು ವೇದಿಕೆ ಕಲ್ಪಿಸಿದ್ದ ಪಟ್ಟಣದ ಜಾನುವಾರು ಸಂತೆ ಈಗ ಅವಸಾನದ ಅಂಚಿಗೆ ತಲುಪಿದೆ.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಕೊಂಡಿಯಾಗಿರುವ ಪಟ್ಟಣದ ಸಂತೆಗೆ ಹಾಸನ, ಗಂಡಸಿ, ಮಧುಗಿರಿ, ಚಿಂತಾಮಣಿ, ಚಿಕ್ಕಬಳ್ಳಾಪುರ ಸೇರಿ ಆಂಧ್ರಪ್ರದೇಶದ ಇಂಧೂಪುರ, ವಿಧುರಾಶ್ವಥ ಹಾಗೂ ಇತರ ರಾಜ್ಯಗಳಿಂದಲೂ ವ್ಯಾಪಾರಸ್ಥರು ಸಾವಿರಾರು ಎತ್ತುಗಳನ್ನು ತಂದು ಮಾರುತ್ತಿದ್ದರು.
ಹಿಂದೆ ಪಟ್ಟಣದ ಹೃದಯ ಭಾಗವಾಗಿದ್ದ ಗಾಂಧಿ ನಗರದ ಹತ್ತು ಎಕರೆ ಪ್ರದೇಶಲ್ಲಿ ದನದ ಸಂತೆ ನಡೆಯುತ್ತಿತ್ತು. ನಂತರ ಅದನ್ನು ಹಿರೇಕೆರೂರು ರಸ್ತೆಯ ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಆ ಬಳಿಕ ತಡಗಣಿ ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲಾಯಿತು.
ಬಯಲು ಸೀಮೆ ಹಾಗೂ ಮಲೆನಾಡಿನ ಕೃಷಿ ಭೂಮಿಯಲ್ಲಿ ಉಳುಮೆ ಮಾಡಲು ಅಗತ್ಯವಿರುವ ಎತ್ತುಗಳು ಈ ಮಾರುಕಟ್ಟೆಯಲ್ಲಿ ಲಭಿಸುತ್ತಿದ್ದವು. ಪ್ರತಿವಾರ ಜಾತ್ರೆಯಂತೆ ಈ ಸಂತೆ ನಡೆಯುತ್ತಿತ್ತು. ಈ ಜಾನುವಾರು ಸಂತೆಯಿಂದಾಗಿ ಹೋಟೆಲ್ ಮಾಲೀಕರು, ಜಾನುವಾರು ಪರಿಕರಗಳ ಮಾರಾಟಗಾರರು, ದಲ್ಲಾಳಿಗಳು, ಹಮಾಲರು, ವಾಹನ ಮಾಲೀಕರು, ಕೃಷಿಕರು ಸೇರಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿದ್ದವು. ಈಗ ಅವರೆಲ್ಲಾ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.
ಇಲ್ಲಿನ ಎತ್ತುಗಳ ಪ್ರದರ್ಶನ ವೀಕ್ಷಿಸಲು ಜನ ಸಾಗರವೇ ಹರಿದು ಬರುತ್ತಿತ್ತು. 1970ರಲ್ಲಿ ಒಂದು ಜೊತೆ ಉತ್ತಮ ತಳಿಯ ಎತ್ತಿಗೆ ₹ 800ರಿಂದ ₹ 900 ಬೆಲೆ ಇತ್ತು. ಕಾಲಾನಂತರ ಎತ್ತುಗಳ ದರ ಏರುತ್ತಲೇ ಸಾಗಿದೆ. ಸಂತೆಯಲ್ಲಿ ಅಮೃತ್ ಮಹಲ್ (ಡಾಗ್ ಎತ್ತು), ಹಳ್ಳಿಕಾರ್, ಜಾತಿ ಹೋರಿ, ಅಮರಾವತಿ, ಗೋಷಿ, ಕಗ್ಗ ಹೋರಿ ಸೇರಿ ವಿವಿಧ ತಳಿಯ ಜಾನುವಾರುಗಳ ವ್ಯಾಪಾರ ನಡೆಯುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಯಾಂತ್ರಿಕ ಕೃಷಿ ವ್ಯಾಪಕವಾಗುತ್ತಿದೆ. ಯಾಂತ್ರಿಕ ಕೃಷಿಯ ಬೆಳವಣಿಗೆ, ತಾಂತ್ರಿಕ ಪ್ರಗತಿ ಮತ್ತು ನಗರೀಕರಣದ ಪರಿಣಾಮ ಜಾನುವಾರುಗಳ ಅವಶ್ಯಕತೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಸಂತೆಯ ವೈಭವವೂ ಕ್ಷೀಣಗೊಂಡಿದೆ.
ಸಂತೆಯ ಪುನಃಶ್ಚೇತನಕ್ಕೆ ಸರ್ಕಾರ ಮುಂದಾಗಬೇಕು. ಸ್ಥಳೀಯ ಆಡಳಿತವು ಎತ್ತುಗಳನ್ನು ಮಾರಾಟ ಮಾಡಲು ರೈತರಿಗೆ ಪ್ರೋತ್ಸಾಹ ನೀಡಬೇಕು ಎನ್ನುವುದು ನಾಗರಿಕರ ಅಪೇಕ್ಷೆಯಾಗಿದೆ.
‘ಇಲ್ಲಿ ನಡೆಯುತ್ತಿದ್ದ ಎತ್ತಿನ ಸಂತೆಯಿಂದ ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದರು. ಹಿಂದೆ ಈ ಸಂತೆಯು ಭಾನುವಾರ, ಸೋಮವಾರ ಜಾತ್ರೆಯಂತೆ ನಡೆಯುತ್ತಿತ್ತು. ಈಗ ವ್ಯಾಪಾರ ಸಂಪೂರ್ಣ ಕುಸಿದಿದ್ದು, ಪುನಃಶ್ಚೇತನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಪುರಸಭೆ ಸದಸ್ಯ ತಡಗಣಿ ರಾಜಣ್ಣ ಒತ್ತಾಯಿಸಿದರು.
‘ಯಾರಾದರು ತಡಗಣಿ ಎತ್ತಿನ ಸಂತೆಯಲ್ಲಿ ತಪ್ಪಿಸಿಕೊಂಡ್ರೆ ಹುಡುಕುವುದಕ್ಕೆ 2 ತಾಸು ಬೇಕಾಗುತ್ತಿತ್ತು. ಎತ್ತುಗಳನ್ನು ನೋಡಲು ನಾವು ಸಂತೆಗೆ ಹೋಗುತ್ತಿದ್ದೆವು. ಈಗ ಮಾರುಕಟ್ಟೆ ನೋಡಿದರೆ ಸಂಕಟವಾಗುತ್ತದೆ. ಮುಂದಿನ ಪೀಳಿಗೆಗೆ ಎತ್ತುಗಳನ್ನು ಫೋಟೊದಲ್ಲಿಯೇ ತೋರಿಸಬೇಕಾಗಬಹುದೇನೋ’ ಎಂದು ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪ್ಯಾಟಿ ಈರಪ್ಪ ಬೇಸರ ವ್ಯಕ್ತಪಡಿಸಿದರು.
ಎತ್ತಿನ ವ್ಯಾಪಾರದ ವೈಶಿಷ್ಟ್ಯ
ಎತ್ತಿನ ಸಂತೆಯಲ್ಲಿ 9X9 13X13 ಅಳತೆಯ ಆಯಾ ತೆಗೆದು ಚಪ್ಪರ ಹಾಕಲಾಗುತ್ತಿತ್ತು. ಚಪ್ಪರದ ಮಧ್ಯದಲ್ಲಿ ಎತ್ತುಗಳನ್ನು ಕಟ್ಟಿ ಸುತ್ತಲು ಮೇವು ಜೋಡಿಸಿ ಮುಂದೆ ವ್ಯಾಪಾರಿಗಳು ಜಮಖಾನ ಹಾಸಿಕೊಂಡು ಕುಳಿತುಕೊಳ್ಳುತ್ತಿದ್ದರು. ಎತ್ತಿನ ಕೊರಳಿಗೆ ಕರಿ ಬಣ್ಣದ ದಂಡೆಯನ್ನು ಕಟ್ಟಿ ಕುರಿಯ ಕೋಡು ಹಾಗೂ ದೃಷ್ಟಿ ಕಾಯಿ ಕಟ್ಟುತ್ತಿದ್ದರು. ಖರೀದಿಸುವ ವ್ಯಕ್ತಿ ಹಾಗೂ ಮಾರುವ ವ್ಯಕ್ತಿ ಟವೆಲ್ ಕೆಳಗೆ ಕೈ ಹಾಕಿ ಬೆರಳುಗಳನ್ನು ಮುಟ್ಟುವ ಮೂಲಕ ದರವನ್ನು ನಿಗದಿ ಮಾಡುತ್ತಿದ್ದರು. ಎಷ್ಟು ಸಾರಿ ಮುಟ್ಟುತ್ತಾರೆ ಎಷ್ಟು ಬೆರಳು ಮುಟ್ಟುತ್ತಾರೆ ಅನ್ನುವುದರ ಮೇಲೆ ದರ ನಿಗದಿ ಆಗುತ್ತಿತ್ತು. ಇದು ವ್ಯಾಪಾರಿಗಳ ಗುಪ್ತ ಸಂಕೇತವಾಗಿತ್ತು. ಈಗಲೂ ಕೆಲವು ಕಡೆ ಹೀಗೆ ವ್ಯಾಪಾರ ನಡೆಯುವುದುಂಟು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.