ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನ ಗಾಡಿ, ಟ್ರ್ಯಾಕ್ಟರ್, ಟಿಲ್ಲರ್‌ ಕಾರುಬಾರು!

Last Updated 27 ಸೆಪ್ಟೆಂಬರ್ 2017, 9:07 IST
ಅಕ್ಷರ ಗಾತ್ರ

ಶಿವಮೊಗ್ಗ: ಎತ್ತಿನ ಗಾಡಿ, ಟ್ರ್ಯಾಕ್ಟರ್, ಟಿಲ್ಲರ್‌ಗಳಲ್ಲಿ ಹಸಿರು ಶಾಲು ಧರಿಸಿದ ರೈತರು ಮಂಗಳವಾರ ಬೃಹತ್ ಮೆರವಣಿಗೆ ನಡೆಸಿದರು. ಇದು ಯಾವುದೋ ಪ್ರತಿಭಟನಾ ಮೆರವಣಿಗೆಯಲ್ಲ. ಮಹಾನಗರ ಪಾಲಿಕೆ ಆಯೋಜಿಸಿದ್ದ ರೈತ ದಸರಾ ಕಾರ್ಯಕ್ರಮ. ರೈತರು ಅಶೋಕ ವೃತ್ತದಿಂದ ಕುವೆಂಪು ರಂಗಮಂದಿರದವರೆಗೆ ಮೆರವಣಿಗೆ ನಡೆಸಿದರು.

ರಂಗಮಂದಿರದ ಆವರಣ ಎತ್ತಿನಗಾಡಿ, ಟ್ರ್ಯಾಕ್ಟರ್, ಟಿಲ್ಲರ್‌ಗಳಿಂದ ತುಂಬಿತ್ತು, ಪಾಲಿಕೆ ಸದಸ್ಯರು ಪಂಚೆ, ಹಸಿರು ಶಲ್ಯ ಧರಿಸಿದ್ದರು. ಅಲ್ಲಿ ಭಾಗಶಃ ಹಳ್ಳಿಯ ವಾತಾವರಣವೇ ಸೃಷ್ಟಿಯಾಗಿತ್ತು. ರೈತ ದಸರಾ ಅಂಗವಾಗಿ ಪಾಲಿಕೆ ಕುವೆಂಪು ರಂಗಮಂದಿರದ ಆವರಣದಲ್ಲಿ ರೈತರಿಗೆ ಉಪಯೋಗವಾಗುವ ಕೃಷಿ ವಸ್ತು ಪ್ರದರ್ಶನವನ್ನು ಪಶು ವೈದ್ಯಕೀಯ ಮಹಾವಿದ್ಯಾಲಯ ಆಯೋಜಿಸಿತ್ತು.

ವಿವಿಧ ಗೊಬ್ಬರಗಳ ಪ್ರದರ್ಶನ, ಕೃಷಿ ಚಟುವಟಿಕೆಗಳಿಗೆ ಅಗತ್ಯ ಇರುವ ಸಲಕರಣೆಗಳು, ಮೋಟಾರ್‌, ಔಷಧ ಸಿಂಪಡಿಸುವ ಸಲಕರಣೆಗಳ ಪ್ರದರ್ಶನ, ಬೇರೆ ಬೇರೆ ಕಂಪೆನಿಗಳ ಬೀಜಗಳ, ವಿಶೇಷವಾಗಿ ಹಸು, ಎಮ್ಮೆಗಳ ಸಂರಕ್ಷಿಸಿದ ಯಕೃತ್, ಹೃದಯ, ಮೂತ್ರಪಿಂಡ, ಶ್ವಾಸಕೋಶ, ಮೆದುಳು, ಗರ್ಭಕೋಶಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.

ಕೋಳಿ ಮನೆಯ ಮಾದರಿ, ಕೋಳಿಗಳ ನೀರುಣಿಸುವಿಕೆ ಮಾದರಿ, ಕೋಳಿಗಳ ಫೀಡರ್, ಹಸುಗಳಿಗೆ ಯಾವ ರೀತಿಯ ಆಹಾರ ನೀಡಿದರೆ ಅಧಿಕ ಹಾಲು ನೀಡುತ್ತದೆ ಎಂಬ ಮಾಹಿತಿಯನ್ನು ರೈತರು ಪಡೆದುಕೊಂಡರು. ಆನೆಯ ಹಿಂಗಾಲು ಮೂಳೆ, ಕುದುರೆ ತೊಡೆ ಮೂಳೆ, ನಾಯಿ ತೊಡೆ ಮೂಳೆ, ಹಸುಗಳಿಗೆ ಹಾಕುವ ಆಂಗ್ಲ ಅಕ್ಷರಗಳು,
ಸಂಖ್ಯೆಗಳ ಮುದ್ರೆಗಳು, ಓಲೆ ಹಾಕುವುದು, ಹಾಲು ಕರೆಯುವ ಪಾತ್ರೆಗಳು ಪ್ರದರ್ಶನದಲ್ಲಿ ಕಂಡುಬಂದವು. ಕಾಲೇಜಿನ ಸಹ ಪ್ರಾಧ್ಯಾಪಕರೇ ಖುದ್ದು ಪ್ರದರ್ಶನದಲ್ಲಿ ಇದ್ದರು. ರೈತರಿಗೆ ಅಗತ್ಯ ಮಾಹಿತಿ ನೀಡಿದರು. ರೈತರು ಸಹ ಆಸಕ್ತಿಯಿಂದ ಪ್ರದರ್ಶನ ವೀಕ್ಷಿಸಿದರು.

ರೈತರ ಜೀವನ ಕಳವಳಕಾರಿ:ಅತಿವೃಷ್ಟಿ, ಅನಾವೃಷ್ಟಿ ಪರಿಣಾಮ ರೈತರ ಜೀವನ ನಷ್ಟದಲ್ಲೇ ಸಾಗುತ್ತಿದೆ ಎಂದು ಪ್ರಗತಿ ಪರ ರೈತ ಮಹಿಳೆ ಆಶಾ ಶೇಷಾದ್ರಿ ಕಳವಳ ವ್ಯಕ್ತಪಡಿಸಿದರು. ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ರೈತ ದಸರಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲವೆಡೆ ಮಳೆ ಇಲ್ಲದೇ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಹಲವು ಕಡೆ ಮಳೆ ಹಾನಿ ಉಂಟುಮಾಡುತ್ತಿದೆ. ಇದರಿಂದಾಗಿ ಕೃಷಿ ಕ್ಷೇತ್ರಕ್ಕೆ ಪೆಟ್ಟು ಬಿದ್ದಿದೆ. ರೈತರು ಕಂಗಾಲಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಮೊದಲು ಮಹಿಳೆಯರೇ ಕೃಷಿ ಚಟುವಟಿಕೆ ಆರಂಭಿಸಿದರು. ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ದೊಡ್ಡದು, ಆದರೆ, ಇಂದು ಪುರುಷ ಪ್ರಧಾನವಾಗಿ ಕೃಷಿ ಬಿಂಬಿಸಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆ ಗೌಣವಾಗಿದ್ದಾಳೆ. ಅವಳನ್ನು ಗುರುತಿಸುವ ಕೆಲಸವಾಗಬೇಕು ಎಂದರು.

ಇಂದು ಹಳ್ಳಿಯ ಯುವಕರು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಹೀಗೇ ಆದರೆ, ಮುಂದಿನ 20 ವರ್ಷಗಳಲ್ಲಿ ಆಹಾರದ ಸಮಸ್ಯೆ ತಲೆದೋರಲಿದೆ. ಸರ್ಕಾರ ಹಳ್ಳಿಗಳಲ್ಲಿ ಸೌಲಭ್ಯ ನೀಡುವ ಮೂಲಕ ಯುವಕ, ಯುವತಿಯರು ಹಳ್ಳಿಗಳಲ್ಲಿಯೇ ಉಳಿಯುವಂತೆ ಮಾಡಬೇಕಿದೆ ಎಂದು ಆಗ್ರಹಿಸಿದರು.

ಬಸವ ಕೇಂದ್ರ ಮರುಳ ಸಿದ್ದ ಸ್ವಾಮೀಜಿ ಮಾತನಾಡಿ, ಹಿಂದೆ ರೈತರು ಮಳೆಗೊಂದು ಬೆಳೆ ಬೆಳೆಯುತ್ತಿದ್ದರು, ಆದರೆ, ಈಚೆಗೆ ಮಳೆ ಬಂದ ನಂತರ ಬೆಳೆ ಕುರಿತು ಚಿಂತಿಸುವಂತಾಗಿದೆ ಎಂದರು.

ರೈತರ ಸಾಲ ಮನ್ನಾ ಮಾಡುವ ಕುರಿತು ಎಲ್ಲರೂ ಹೋರಾಡುತ್ತಿದ್ದಾರೆ, ಆದರೆ, ರೈತರು ಬೆಳೆದ ಉತ್ಪನ್ನಗಳಿಗೆ ತಾವೇ ದರ ನಿಗದಿ ಮಾಡುವ ಅಧಿಕಾರ ನೀಡುವ, ವೈಜ್ಞಾನಿಕ ಬೆಳೆ ಬೆಳೆಯುವ ಕುರಿತು ಹೋರಾಟ ನೆಡೆಸುತ್ತಿಲ್ಲ. ಇಂತಹ ಹೋರಾಟ ಮಾಡಿದಾಗ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ ಎಂದು ಸಲಹೆ ನೀಡಿದರು.

ಸಾಲ ಮಾಡಿ ಅನ್ಯ ದೇಶಕ್ಕೆ ಹೋಗಿ ಐಷಾರಾಮಿ ಜೀವನ ನಡೆಸುವವರು ಈ ಸಮಾಜದಲ್ಲಿದ್ದಾರೆ, ಆದರೆ, ವಿಷ ಕುಡಿದು ಸಾಯುವ ರೈತರ ಪರಿಸ್ಥಿತಿಗೆ ಕಾರಣ ಯಾರು ಎಂದು ಚಿಂತಿಸುವ ಅಗತ್ಯವಿದೆ ಎಂದು ಕುಟುಕಿದರು.

‘ರೈತರು ವೃತ್ತಿಯ ಬಗ್ಗೆ ಕೀಳರಿಮೆ ಇಟ್ಟುಕೊಂಡರೆ ಸಮಾಜ ಅವರನ್ನು ತುಳಿಯುತ್ತದೆ. ಹೆಮ್ಮೆಯಿಂದ ನಾನು ರೈತ ಕಾಯಕ ಮಾಡುತ್ತಿದ್ದೇನೆ’ ಎಂದು ಹೇಳುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಬಿ.ಪಾಟೀಲ್ ಉಪನ್ಯಾಸ ನೀಡಿದರು. ಮೇಯರ್ ಏಳುಮಲೈ,
ಪಾಲಿಕೆ ಆಯುಕ್ತ ಮುಲ್ಲೈಮುಹಿಲನ್, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ರಾಜಶೇಖರ್, ಎಚ್.ಸಿ. ಯೋಗೀಶ್, ಪಾಲಾಕ್ಷಿ, ನಾಗರಾಜ್ ಕಂಕಾರಿ, ಮಾಲತೇಶ್, ‘ಕಾಡಾ’ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಜ್ಯೋತಿ ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT