ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿಗಳ ಮಧ್ಯದಲ್ಲೊಂದು ಸಂತೆಯ ಮಾಡಿ...

Last Updated 18 ಸೆಪ್ಟೆಂಬರ್ 2011, 12:05 IST
ಅಕ್ಷರ ಗಾತ್ರ

ಪುರಾಣ ಪ್ರಸಿದ್ಧ ಹೊಳೆಹೊನ್ನೂರು ಸಂತೆ ಜಾಗದ ಕೊರತೆಯಿಂದ ಹಲವಾರು ಕಚೇರಿಗಳ ಮಧ್ಯೆ ನಡೆಯುವಂತಹ ದುಃಸ್ಥಿತಿ ತಲುಪಿದೆ. ಸಂತೆ ನಡೆಯುವ ಸ್ಥಳದಲ್ಲೇ, ಸಮುದಾಯ ಆರೋಗ್ಯ ಕೇಂದ್ರ, ಪಶುವೈದ್ಯ ಆಸ್ಪತ್ರೆ, ಪೊಲೀಸ್ ಠಾಣೆ, ಗ್ರಾಮ ಪಂಚಾಯ್ತಿ ಕಾರ್ಯಾಲಯ, ನೆಮ್ಮದಿ ಕೇಂದ್ರ, ಕೃಷಿ ಇಲಾಖೆ... -ಹೀಗೆ ಎಲ್ಲಾ ಇಲಾಖೆಗಳು ಕಾರ್ಯ ನಿರ್ವಹಿಸುತ್ತವೆ.

ಹಿನ್ನೆಲೆ: ತನ್ನದೇ ಆದ ಹಿನ್ನೆಲೆಯನ್ನೊಳಗೊಂಡ ಹೊಳೆಹೊನ್ನೂರು ಸಂತೆ ಆರಂಭವಾಗಿದ್ದು, ದ್ವಾರ ಸಮುದ್ರ ಆಳಿದ ಹೊಯ್ಸಳರ ರಾಜ ಒಂದನೇ ವಿನಯಾದಿತ್ಯನ ಕಾಲದಿಂದ ಪ್ರತಿ ಶನಿವಾರ ನಡೆಯುತ್ತಿರುವ ಸಂತೆ ಈಗ ಕಚೇರಿಗಳ ಗೊಂದಲದ ಗೂಡಾಗಿದ್ದರೂ, ಈ ಮಧ್ಯೆ ಸಂತೆ ಮಾತ್ರ ಯಾವುದೇ ಗೋಜಿಲ್ಲದೇ ಜೋರಾಗಿ ಸಾಗುತ್ತಿದೆ.

ಸ್ಥಳ ನಿಗದಿಗೆ ವಿಳಂಬ: ಅಂದಿನಿಂದ ಈ ಸಂತೆ ಸುತ್ತ-ಮುತ್ತಲ ಸುಮಾರು 23 ಗ್ರಾಮಗಳಿಗೆ ವ್ಯಾಪಾರ ಕೇಂದ್ರ ಬಿಂದು. ಇದರ ಅಭಿವೃದ್ಧಿಗೆ ಹಲವಾರು ಹೋರಾಟಗಳ ನಂತರ ರೂ 12 ಲಕ್ಷ ಅನುದಾನವೇನೋ ಬಂತು. ಆದರೆ, ಗ್ರಾ.ಪಂ. ಮತ್ತು ಜನ ಪ್ರತಿನಿಧಿಗಳು ಸೂಕ್ತ ಸ್ಥಳ ನಿಗದಿಪಡಿಸುವಲ್ಲಿ ತೋರಿಸುತ್ತಿರುವ ವಿಳಂಬ ಧೋರಣೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಮದ ಮುಖಂಡ ಉಪ್ಪಾರಕೇರಿ ಆರ್. ನಂಜುಂಡಪ್ಪ.

ರೋಗಕ್ಕೆ ಆಮಂತ್ರಣ:
ಈ ಮಧ್ಯೆ ಬೇಸಿಗೆಯಲ್ಲಿ ಸುಡುಬಿಸಿಲಿನ ಜತೆ ದೂಳು ಆವರಿಸಿದರೆ, ಮಳೆಗಾಲದಲ್ಲಿ ಕೆಸರು, ಕೊಳೆತ ತರಕಾರಿ ದುರ್ವಾಸನೆ ಮೂಗು ಕಟುತ್ತದೆ. ವ್ಯಾಪಾರಿಗಳು ಸ್ಥಳದ ಆಭಾವದಿಂದ ರಸ್ತೆಯಲ್ಲಿ ವ್ಯಾಪಾರ ಮಾಡುವ ಸ್ಥಿತಿ ಬಂದಿದೆ.

ಗ್ರಾ.ಪಂ. ಮಾತ್ರ ಪಟ್ಟಣದ ಯಾವ ಮೂಲೆಯಲ್ಲಿ ವ್ಯಾಪಾರ ಮಾಡಿದರೂ ತೆರಿಗೆ ವಸೂಲಿ ಮಾಡುವುದನ್ನು ಮರೆತಿಲ್ಲ. ಆದರೆ, ಸ್ವಚ್ಛತೆ ಬಗ್ಗೆ ಕೇಳುವಂತಿಲ್ಲ. ಸುತ್ತಲಿನ ಕಚೇರಿಗಳು ಮತ್ತು ನಿವಾಸಿಗಳಿಗೆ ಉಳಿದ ತರಕಾರಿ, ಪೇಪರ್, ಪ್ಲಾಸ್ಟಿಕ್ ಹರಡಿದ್ದು ರೋಗಗಳ ಹರಡುವಿಕೆಗೆ ಎಡೆಮಾಡಿಕೊಟ್ಟಿದೆ ಎಂದು ದೂರುತ್ತಾರೆ ಹೊಳೆಹೊನ್ನೂರು ತಾಲ್ಲೂಕು ಹೋರಾಟ ಸಮಿತಿಯ ಕಾರ್ಯದರ್ಶಿ ಜಾಕಿ ವೇಂಕಟೇಶ್.

 ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೂಕ್ತ ಸ್ಥಳಕ್ಕೆ ವರ್ಗಾಯಿಸುವ ಭರವಸೆ ನೀಡಿದ್ದರೂ, ಇದುವರೆಗೆ ಈಡೆರಿಲ್ಲ. ಮುಂದಾದರೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮದಲ್ಲಿ ಅತಿ ಹೆಚ್ಚು ವಿವಿಧ ತರಕಾರಿ ಬೆಳೆಯುತ್ತಿರುವುದರಿಂದ ಪ್ರತ್ಯೇಕ ವ್ಯಾಪಾರ ಮಳಿಗೆಗಳ ಜತೆ ಮೂಲಸೌಕರ್ಯ, ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ಇತರೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಗ್ರಾಮದ ಯುವ ಮುಖಂಡ ಕನ್ಯಾಲಾಲ್ ಅವರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT