ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ. ಪಂ.ಅಧ್ಯಕ್ಷರಿಂದ ಭೂಮಿ ಒತ್ತುವರಿ

ಬಿಜೆಪಿ ಮುಖಂಡ ಟಿ.ಡಿ.ಮೇಘರಾಜ್‌ ಆರೋಪ
Last Updated 19 ಏಪ್ರಿಲ್ 2017, 3:37 IST
ಅಕ್ಷರ ಗಾತ್ರ
ಸಾಗರ: ‘ಇಲ್ಲಿನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರು ಸುಮಾರು 200 ಎಕರೆಗೂ ಹೆಚ್ಚಿನ ಕಂದಾಯ, ಅರಣ್ಯ ಹಾಗೂ ಕೆಪಿಸಿಗೆ ಸೇರಿದ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ’ ಎಂದು  ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ.ಮೇಘರಾಜ್‌ ಆರೋಪಿಸಿದರು. 
 
‘ತಾಲ್ಲೂಕಿನ ಯಡಜಿಗಳಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಡ ಮಳ್ಳ ಗ್ರಾಮದಲ್ಲಿ ಸುಮಾರು 50 ಎಕರೆ, ಹುಲ್ಕೋಡು ಗ್ರಾಮದಲ್ಲಿ ಸುಮಾರು 20 ಎಕರೆ, ಮಂಡವಳ್ಳಿ ಗ್ರಾಮದಲ್ಲಿ ತಮ್ಮ ಬಂಧುವಿನ ಹೆಸರಿನಲ್ಲಿ ಜಂಬಿಟ್ಟಿಗೆ ಕ್ವಾರೆ, ಮರಡವಳ್ಳಿ ಗ್ರಾಮದಲ್ಲಿ ಕೆಪಿಸಿಗೆ ಸೇರಿದ ಪ್ರದೇಶದಲ್ಲಿ ಅಕ್ರಮ ಕೆರೆ ನಿರ್ಮಾಣ, ದೇವಾಸ ಗ್ರಾಮದಲ್ಲಿ 20 ಎಕರೆ ಒತ್ತುವರಿ ಮಾಡಲಾಗಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
 
‘ಅಕ್ರಮ ಒತ್ತುವರಿಯನ್ನು ಉಳಿಸಿಕೊಳ್ಳುವ ಸಲುವಾಗಿ ಕಸ್ತೂರಿರಂಗನ್‌ ವರದಿ ವಿರುದ್ಧ ಹೋರಾಟದ ಹೆಸರಿನಲ್ಲಿ ಜನರನ್ನು ಸಂಘಟಿಸುವ ಹುನ್ನಾರವನ್ನು ಹಕ್ರೆ ನಡೆಸಿದ್ದಾರೆ ಎಂಬ ಹೇಳಿಕೆಗೆ ಬಿಜೆಪಿ ಬದ್ಧವಾಗಿದೆ.
 
ಈ ಹೇಳಿಕೆ ನೀಡಿದ ನಂತರ ಜನರನ್ನು ಹಾದಿ ತಪ್ಪಿಸಲು ನಾನು ತುಮ್ರಿಕೊಪ್ಪ ಗ್ರಾಮದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿರುವುದಾಗಿ ಹಕ್ರೆ ಹೇಳಿಕೆ ನೀಡಿದ್ದಾರೆ. ಇದನ್ನು ಅವರು ಸಾಬೀತುಪಡಿಸದೆ ಇದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು. 
 
‘ಸದಾ ಪ್ರಚಾರದಲ್ಲಿ ಇರಲು ಬಯಸುವ ಕಾರಣಕ್ಕಾಗಿ ಕೆಲವು ಮುಖಂಡರ ವಿರುದ್ಧ ಆರೋಪ ಮಾಡು ವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಅವರ ಅಕ್ರಮಗಳ ವಿರುದ್ಧ ದಾಖಲೆ ಸಮೇತ ಬಿಜೆಪಿ ಸ್ಥಳೀಯ ಘಟಕ ಹೋರಾಟ ನಡೆಸಲಿದೆ’ ಎಂದರು. 
 
‘ಕಾಂಗ್ರೆಸ್‌ ಮುಖಂಡರ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಕಾಲದಲ್ಲಿ ಕಸ್ತೂರಿರಂಗನ್‌ ವರದಿಗೆ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಿಲ್ಲ. ಈ ತಪ್ಪನ್ನು ಮುಚ್ಚಿಕೊಳ್ಳಲು ಹೋರಾಟ ಮಾಡುತ್ತಿದೆ.
 
ಸಂಸದ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ಬಿಜೆಪಿ ಮುಖಂಡರು ಕಸ್ತೂರಿರಂಗನ್‌ ವರದಿ ಜಾರಿ ವಿರೋಧಿಸಿ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ.  ಈ ಸಂಬಂಧ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ’ ಎಂದರು. 
 
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸನ್ನ ಕೆರೆಕೈ, ನಗರ ಘಟಕದ ಅಧ್ಯಕ್ಷ ಆರ್‌.ಶ್ರೀನಿವಾಸ್‌, ಜಿಲ್ಲಾ ಪಂಚಾಯ್ತಿ ಸದಸ್ಯ ರಾಜಶೇಖರ ಗಾಳಿಪುರ, ಮಾಜಿ ಉಪಾಧ್ಯಕ್ಷ ಭೀಮನೇರಿ ಶಿವಪ್ಪ, ಪಕ್ಷದ ಪ್ರಮುಖರಾದ ಕಲಸೆ ಚಂದ್ರಪ್ಪ, ಕೆ.ಆರ್‌.ಗಣೇಶ್‌ಪ್ರಸಾದ್‌, ಚಂದ್ರಶೇಖರ ಅದರಂತೆ, ಗಣಪತಿ ಮಂಡಗಳಲೆ, ಬಿ.ಮೋಹನ್‌ ಇದ್ದರು.  
***
ಬಿಜೆಪಿ ಮುಖಂಡರಿಂದ ಭೂ ಕಬಳಿಕೆ: ಹಕ್ರೆ
ಸಾಗರ:   ಬಿಜೆಪಿ ಮುಖಂಡರಾದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಟಿ.ಡಿ.ಮೇಘರಾಜ್‌ ಅವರಿಂದ ಭೂ ಕಬಳಿಕೆ ನಡೆದು ಅಕ್ರಮ ಲೇಔಟ್‌ಗೆ ಬೆಂಬಲ ದೊರಕಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದರು.

‘ಬೇಳೂರು ಹಾಗೂ ಮೇಘರಾಜ್‌ ಅವರು ಅಧಿಕಾರದಲ್ಲಿದ್ದಾಗ ನಡೆಸಿರುವ ಅಕ್ರಮಗಳನ್ನು ಧಾರಾವಾಹಿ ರೂಪದಲ್ಲಿ ಜನರ ಮುಂದೆ ತೆರೆದಿಡುತ್ತೇನೆ’ ಎಂದು ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಸ್ತೂರಿರಂಗನ್‌ ವರದಿ ಜಾರಿ ವಿರೋಧಿಸಿ ಈಚೆಗೆ ನಡೆದ ಪಾದಯಾತ್ರೆಯಿಂದ ಬಿಜೆಪಿ ಮುಖಂಡರಲ್ಲಿ ನಡುಕ ಹುಟ್ಟಿದೆ. ಪಕ್ಷಾತೀತವಾಗಿ ನಡೆದ ಈ ಜನಪರ ಚಳವಳಿಯಲ್ಲಿ ಭಾಗವಹಿಸದೇ   ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಬಿಜೆಪಿ ಮುಖಂಡರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದರು.

‘ಗೋಪಾಲಕೃಷ್ಣ   ಶಾಸಕರಾಗಿದ್ದಾಗ ಶರಾವತಿ ಹಿನ್ನೀರಿನಿಂದ ನಗರಕ್ಕೆ ಕುಡಿಯುವ ನೀರು ತರುವ ಯೋಜನೆಯ ಹಾಗೂ ಒಳಚರಂಡಿ ಯೋಜನೆಯ ಗುತ್ತಿಗೆದಾರರಿಗೆ ಹಣ ನೀಡಲು ಒತ್ತಾಯಪಡಿಸಿದ ಕಾರಣ ಆ ಯೋಜನೆಗಳ ಅನುಷ್ಠಾನ ವಿಳಂಬವಾಯಿತು. ರೈತರಿಂದ ಕಡಿಮೆ ಬೆಲೆಗೆ ಕೃಷಿಭೂಮಿ ಖರೀದಿಸಿ ಅಕ್ರಮ ಲೇಔಟ್‌ ನಿರ್ಮಿಸಿ ಲಕ್ಷಾಂತರ ರೂಪಾಯಿಗೆ ಅಕ್ರಮವಾಗಿ ನಿವೇಶನ ಮಾರಾಟ ಮಾಡುವ ಮೂಲಕ ಬೇಳೂರು ಲಾಭ ಗಳಿಸಿದ್ದಾರೆ’ ಎಂದು ದೂರಿದರು.

ತಾಲ್ಲೂಕಿನ ತುಮ್ರಿಕೊಪ್ಪ ಗ್ರಾಮದಲ್ಲಿ ಬಿಜೆಪಿ ಮುಖಂಡ ಟಿ.ಡಿ.ಮೇಘರಾಜ್‌, ‘100 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ. ಈ ಪ್ರದೇಶ ಕೂಡ ಕಸ್ತೂರಿರಂಗನ್‌ ವರದಿ ವ್ಯಾಪ್ತಿಗೆ ಬರುತ್ತದೆ. ಬಿಜೆಪಿ ಮುಖಂಡರು ಹೇಳುವಂತೆ ಭೂಮಿಯ ಅಕ್ರಮ ಒತ್ತುವರಿ ತೆರವು ಆಗಬೇಕು ಅಂತಾದರೆ ಆ ಕೆಲಸ ತುಮ್ರಿಕೊಪ್ಪ ಗ್ರಾಮದಿಂದಲೇ ಆಗಲಿ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕಾಗೋಡು ಅಣ್ಣಪ್ಪ, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಲ್‌.ಟಿ.ತಿಮ್ಮಪ್ಪ, ಗಣಪತಿ ಹೆನಗೆರೆ, ನಾಗರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT