ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ಮೀಸಲಿಟ್ಟ ಅನುದಾನ ದುರ್ಬಳಕೆ

Last Updated 25 ಏಪ್ರಿಲ್ 2017, 5:01 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ದಲಿತರು ಒಗ್ಗೂಡಲು ವ್ಯವಸ್ಥೆ ಬಿಡುತ್ತಿಲ್ಲ. ಸ್ವಾತಂತ್ರ್ಯ ಲಭಿಸಿ 70 ವರ್ಷಗಳು ಸಂದರೂ ದಲಿತ ಕೇರಿಗಳು ಅಭಿವೃದ್ಧಿ ಹೊಂದಿಲ್ಲ’ ಎಂದು ಮಾಜಿ ಶಾಸಕ ಆರಗ ಜ್ಞಾನೇಂದ್ರ ವಿಷಾದಿಸಿದರು.

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸೋಮವಾರ ಬಿಜೆಪಿ ಎಸ್‌ಸಿ, ಎಸ್‌ಟಿ ಮೋರ್ಚಾ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಜಯಂತಿ, ಎಸ್‌ಸಿ, ಎಸ್‌ಟಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ದಲಿತ ಸಮುದಾಯದ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆ ಆಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಶಾಸಕ ಕಿಮ್ಮನೆ ರತ್ನಾಕರ ಅವರ ಬೆಂಬಲಿರು ದಲಿತರಿಗೆ ಮೀಸಲಿಟ್ಟ ಹಣವನ್ನು ದೋಚುತ್ತಿದ್ದಾರೆ’ ಎಂದು ಆರಗ ಆರೋಪಿಸಿದರು.

‘ದಲಿತ ಕೇರಿಗಳಿಗೆ ಅಡುಗೆ ಅನಿಲ ಸೌಲಭ್ಯ ಕಲ್ಪಿಸಲಾಗಿದೆ ಎಂಬ ನೆಪವೊಡ್ಡಿ ರಾಜ್ಯ ಸರ್ಕಾರ ಸೀಮೆಎಣ್ಣೆ ವಿತರಿಸುತ್ತಿಲ್ಲ. ಸಮುದಾಯದಲ್ಲಿ ಪ್ರತಿಭಾವಂತ  ವಿದ್ಯಾರ್ಥಿಗಳಿದ್ದರೂ ಸರ್ಕಾರದ ಸೌಲಭ್ಯದಿಂದ ವಂಚಿತರಾದ ಕಾರಣ ದಲಿತರ ಅಭಿವೃದ್ಧಿ ಸಾಧ್ಯವಾಗದೇ ಉಳಿಯುವಂತಾಗಿದೆ’ ಎಂದು ಟೀಕಿಸಿದರು.

‘ಎಸ್‌ಸಿ, ಎಸ್‌ಟಿ ಬಗರ್‌ಹುಕುಂ ಫಲಾನುಭವಿಗಳಿಗೆ ಹಕ್ಕುಪತ್ರ ಸಿಗುತ್ತಿಲ್ಲ.  ಸರ್ಕಾರದ ಅಭಿವೃದ್ಧಿ ಕೆಲಸಗಳು ನಾಮಕಾವಸ್ತೆಗೆ ಎನ್ನುವಂತಾಗಿದೆ. ದಲಿತ ಕೇರಿಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಕಬ್ಬಿಣದ ಸರಳು ಬಳಸದೇ ಸಿಮೆಂಟ್‌ ಹಾಕಿ ಕಳಪೆ ಕಾಮಗಾರಿ ಮಾಡಲಾಗಿದೆ.  ದಲಿತರು ಪ್ರಶ್ನೆ ಮಾಡುವುದಿಲ್ಲ ಎಂದು ಅಕ್ರಮ ಎಸಗಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರ ಪತ್ನಿ ಹಣ ಪಡೆದು ಕಾಮಗಾರಿ ಮಂಜೂರಿಗೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕಾಸರವಳ್ಳಿ ಶ್ರೀನಿವಾಸ್‌ ಮಾತನಾಡಿ, ‘ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ 9 ವರ್ಷದಿಂದ ಕಾಯಂ ಅಧಿಕಾರಿ ಇಲ್ಲ. ಇಲಾಖೆಯ ಎಲ್ಲ ಹುದ್ದೆಗಳು ಖಾಲಿ ಆಗಿವೆ. ದಲಿತರ ಅಭಿವೃದ್ಧಿಗೆ ಮೀಸಲಿದ್ದ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿ ಇಲ್ಲದಿರುವ ಬಗ್ಗೆ ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ ಪ್ರಶ್ನೆ ಮಾಡಿಲ್ಲ. ದಲಿತ ಕುಟುಂಬಗಳ ಬೇಡಿಕೆಗೆ ಸ್ಪಂದಿಸುವ ಕನಿಷ್ಠ ಕಳಕಳಿಯೂ ಅವರಿಗಿಲ್ಲ. ದಲಿತರ ಏಳಿಗೆ ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದರು.

ಶಿಕ್ಷಣ ತಜ್ಞ ಆರ್‌ಎಸ್‌ಎಸ್‌ ಪ್ರಮುಖ ಕೆ.ಎಂ.ಜಯಶೀಲ ಮಾತನಾಡಿ, ‘ಅಂಬೇಡ್ಕರ್‌ ಜೀವನ ದರ್ಶನ ಪಡೆಯುವುದು ಮುಖ್ಯ. ಅವರು ಕೇವಲ ಒಂದು ವರ್ಗದ ನಾಯಕರಲ್ಲ. ಅವರು ಎಲ್ಲರಿಗೂ ಆದರ್ಶ’ ಎಂದರು.

ಸಮಾರಂಭದಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕೃಷ್ಣಪ್ಪ ಮಾತನಾಡಿದರು.

ತಾಲ್ಲೂಕು ಎಸ್‌ಸಿ ಮೋರ್ಚಾ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್‌, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌, ತಾಲ್ಲೂಕು ಪಂಚಾಯ್ತಿ ಸದಸ್ಯೆ ಲಕ್ಷ್ಮಿ ಉಮೇಶ್‌, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೋಣಂದೂರು ಮೋಹನ್‌ ಶೆಟ್ಟಿ, ಗಿರೀಶ್‌ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT