ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಮೀಕ್ಷೆ: 5ನೇ ಸ್ಥಾನದಲ್ಲಿ ಶಿವಮೊಗ್ಗ ಜಿಲ್ಲೆ

Last Updated 26 ಅಕ್ಟೋಬರ್ 2017, 10:59 IST
ಅಕ್ಷರ ಗಾತ್ರ

ಶಿವಮೊಗ್ಗ: ಬೆಳೆ ಸಮೀಕ್ಷೆ ಕಾರ್ಯದಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ. ಬೆಳೆ ಸಮೀಕ್ಷೆ ಕಾರ್ಯ ತ್ವರಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಬೆಳೆ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ಕಾಗಿ 441 ಕಂದಾಯ ಸಿಬ್ಬಂದಿ  ನಿಯೋಜಿಸಲಾಗಿದೆ. ಒಟ್ಟು 1,615 ಗ್ರಾಮಗಳ ವ್ಯಾಪ್ತಿಯ 4,97,541 ಎಕರೆ ಜಮೀನುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ನಿಗದಿತ ಅವಧಿಯ ಒಳಗೆ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಸಾಗರ ಹಾಗೂ ಭದ್ರಾವತಿ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿದೆ. ಇದುವರೆಗೆ 53,606 ಎಕರೆ ಜಮೀನುಗಳಲ್ಲಿ ಮಾತ್ರ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಶೇ 10ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಪ್ರತಿ ದಿನ ಕೈಗೊಂಡಿರುವ ಬೆಳೆ ಸಮೀಕ್ಷೆ ಕಾರ್ಯದ ಪ್ರಗತಿಯನ್ನು ಆಯಾ ತಹಶೀಲ್ದಾರರು ಪರಿಶೀಲಿಸಬೇಕು. ಹೋಬಳಿಮಟ್ಟದಲ್ಲಿ ಕಂದಾಯ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳಿಂದ ಮಾಹಿತಿ ಪಡೆದು ಸಮೀಕ್ಷೆ ಕಾರ್ಯ ತ್ವರಿತಗೊಳಿಸಬೇಕು. ಕೃಷಿ ಹಾಗೂ ತೋಟಗಾರಿಕಾ ಇಲಾಖಾ ಅಧಿಕಾರಿಗಳನ್ನೂ ಸಮೀಕ್ಷೆ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಜಮೀನಿಗೆ ಖುದ್ದಾಗಿ ಭೇಟಿ ನೀಡಿ  ತಪ್ಪಿಲ್ಲದಂತೆ ಮಾಹಿತಿ  ಒದಗಿಸಬೇಕು ಎಂದರು.

ಗ್ರಾಮ ಲೆಕ್ಕಿಗರಿಗೆ ಬೆಳೆ ಸಮೀಕ್ಷೆಯ ಗುರಿ ನಿಗದಿಪಡಿಸಲಾಗಿದೆ. ಗುರಿ ಸಾಧಿಸಲು ವಿಫಲರಾಗುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಅತಿ ಕಡಿಮೆ ಬೆಳೆ ಸಮೀಕ್ಷೆ  ಮಾಡಿರುವ ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರ ವೇತನ ತಡೆಹಿಡಿಯುವಂತೆ ಸೂಚಿಸಲಾಗಿದೆ ಎಂದು ವಿವರ ನೀಡಿದರು.

ಬೆಳೆ ಸಮೀಕ್ಷೆಯ ಪ್ರಥಮ ಹಂತದಲ್ಲಿ ರೈತರ ಸರ್ವೆ ಸಂಖ್ಯೆ, ಆಧಾರ ಸಂಖ್ಯೆ, ಮೊಬೈಲ್ ಸಂಖ್ಯೆ, ರೈತರ ಹೆಸರು ಮತ್ತು ಜಮೀನಿನ ಛಾಯಾಚಿತ್ರವನ್ನು ಬೆಳೆ ಸಮೀಕ್ಷೆ ತಂತ್ರಜ್ಞಾನದಲ್ಲಿ ಶೇಖರಿಸಬೇಕು. ಇದರಿಂದಾಗಿ ಆರ್‌ಟಿಸಿ ಕೈಯಲ್ಲಿ ಬರೆಯುವ ಕಾರ್ಯ ಇರುವುದಿಲ್ಲ. ಮುಂದಿನ ಹಂತದಲ್ಲಿ ಆಧಾರ ಸಂಖ್ಯೆ ಪರಿಶೀಲಿಸುವ ಕಾರ್ಯ ಕೈಗೊಳ್ಳಲಾಗುವುದು. ಬೆಳೆ ಸಮೀಕ್ಷೆ ಅತ್ಯಂತ ಮಹತ್ವಪೂರ್ಣವಾದ ಕಾರ್ಯಕ್ರಮ. ಇದರಿಂದ ಬೆಳೆ ಹಾನಿ ಸಂಭವಿಸಿದ ವೇಳೆ ಬೆಳೆ, ವ್ಯಾಪ್ತಿ ಇತ್ಯಾದಿಗಳ ಕುರಿತು ನಿಖರ ಮಾಹಿತಿ ಸುಲಭದಲ್ಲಿ ದೊರೆಯಲಿದೆ ಎಂದರು.

ಕಂದಾಯ ಅಧಿಕಾರಿಗಳು ತಾಲ್ಲೂಕು ಕೇಂದ್ರಸ್ಥಾನದಲ್ಲಿ ವಾಸವಿರದೆ ಜಿಲ್ಲಾಕೇಂದ್ರದಿಂದ ಪ್ರತಿನಿತ್ಯ ಓಡಾಡುತ್ತಿರುವ ಕುರಿತು ದೂರುಗಳು ಬಂದಿವೆ. ಎಲ್ಲಾ ಕಂದಾಯ ಅಧಿಕಾರಿಗಳು ಕಡ್ಡಾಯವಾಗಿ ತಾಲ್ಲೂಕು ಕೇಂದ್ರದಲ್ಲಿ ವಾಸವಿರಬೇಕು. ಕೇಂದ್ರಸ್ಥಾನದಲ್ಲಿರದ ಕಂದಾಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT