ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಪೀಳಿಗೆಗೆ ಜಲಮೂಲ ಸಂರಕ್ಷಿಸಿ

ಶಿಕಾರಿಪುರ: ಅಂತರರಾಷ್ಟ್ರೀಯ ಜಲದಿನ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಬಿ.ಸಿ.ಚಂದ್ರಶೇಖರ್‌
Last Updated 23 ಮಾರ್ಚ್ 2017, 5:15 IST
ಅಕ್ಷರ ಗಾತ್ರ

ಶಿಕಾರಿಪುರ: ‘ಮುಂದಿನ ಪೀಳಿಗೆಗೆ ನೀರಿನ ಮೂಲವನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ’ ಎಂದು ಜೆಎಂಎಫ್‌ ನ್ಯಾಯಾಲಯ ನ್ಯಾಯಾಧೀಶ ಬಿ.ಸಿ. ಚಂದ್ರಶೇಖರ್‌ ಸಲಹೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಪಂಚಾಯ್ತಿ, ಕಂದಾಯ ಇಲಾಖೆ,
ವಕೀಲರ ಸಂಘ, ಅಭಿಯೋಜನೆ ಇಲಾಖೆ ಹಾಗೂ ಪುರಸಭೆ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಜಲದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯನ ಜೀವನದಲ್ಲಿ ಕುಡಿಯುವ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಮನುಷ್ಯನ ಸ್ವಾರ್ಥ ಹಾಗೂ ನಿರ್ಲಕ್ಷ್ಯದಿಂದ ನೀರಿನ ಮೂಲಗಳು ಬತ್ತಿ ಹೋಗುತ್ತಿವೆ. ಮನುಷ್ಯ ಸ್ವಾರ್ಥಕ್ಕಾಗಿ ಕಾಡು ನಾಶ ಮಾಡಿರುವುದರಿಂದ ಮಳೆ ಪ್ರಮಾಣ ಕಡಿಮೆಯಾಗಿ ಬರಗಾಲ ಆವರಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಬರುವ ಮುನ್ನವೇ ನಾಗರಿಕರು ಎಚ್ಚೆತ್ತಕೊಂಡು ನೀರಿನ ಅಪವ್ಯಯವನ್ನು ತಡೆಗಟ್ಟಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದ ಅವರು, ಪಟ್ಟಣದಲ್ಲಿ ಕೆಲವರು ಕುಡಿಯುವ ನೀರು ಪೋಲು ಮಾಡುತ್ತಿದ್ದಾರೆ. ನೀರುಪೋಲು ಮಾಡುವವರ ವಿರುದ್ಧ ಪುರಸಭೆ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.

ಜೆಎಂಎಫ್‌ ನ್ಯಾಯಾಲಯ ಹೆಚ್ಚುವರಿ ನ್ಯಾಯಾಧೀಶ ಫಾರುಖ್ ಝಾರೆ ಮಾತನಾಡಿ, ‘ನೀರಿನ ಮೂಲ ಇದ್ದಲ್ಲಿ ಮಾತ್ರ ಮನುಷ್ಯನ ನಾಗರಿಕತೆ ಬೆಳೆದಿದೆ. ನೀರಿನ ದುರ್ಬಳಕೆಯನ್ನು ಮನುಷ್ಯ ನಿಲ್ಲಿಸಬೇಕು. ಯುವ ಸಮುದಾಯ ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ನೀರಿನ ಪ್ರಾಮುಖ್ಯತೆ ಹಾಗೂ ಸದ್ಬಳಕೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

ನೀರಿನ ಸಂರಕ್ಷಣೆ ಹಾಗೂ ಸಾರ್ವಜನಿಕರ ಪಾತ್ರ ವಿಷಯ ಕುರಿತು ತಹಶೀಲ್ದಾರ್‌ ಬಿ.ಶಿವಕುಮಾರ್‌ ಮಾತನಾಡಿ, ‘ಸಕಲ ಜೀವರಾಶಿಗಳಿಗೆ ನೀರಿನ ಅಗತ್ಯತೆ ಇದೆ. ನೀರಿನ ಮಹತ್ವದ ಬಗ್ಗೆ ಅರಿವಿಲ್ಲದೆ ಮನುಷ್ಯ ನೀರು ಪೋಲು ಮಾಡುತ್ತಿದ್ದಾನೆ. ಪೋಷಕರು ಮನೆಯಲ್ಲಿ ಮಕ್ಕಳಿಗೆ ನೀರಿನ ಮಹತ್ವ
ವನ್ನು ತಿಳಿಸುವ ಕಾರ್ಯ ಮಾಡಬೇಕು’ ಎಂದು ಸಲಹೆ ನೀಡಿದರು.

ನೀರನ್ನು ಉತ್ಪಾದಿಸಲು ಸಾಧ್ಯವಿಲ್ಲ. ಮಳೆ ಬಂದರೆ ಮಾತ್ರ ದೊರೆಯುತ್ತದೆ. ರೈತರು ನೀರಿನ ಸಂರಕ್ಷಣೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಮಳೆ ನೀರಿನ ಲಭ್ಯತೆಗೆ ತಕ್ಕಂತೆ ಬೆಳೆ ಬೆಳೆಯಬೇಕು. ಬರಗಾಲದ ಸಂದರ್ಭದಲ್ಲಿ ಭತ್ತ,ಶುಂಠಿ, ಅಡಿಕೆ ಬೆಳೆ ಬೆಳೆಯಬಾರದು ಎಂದು ಕಿವಿಮಾತು ಹೇಳಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎ.ಪರಮೇಶ್ವರಪ್ಪ, ಇಒ ಆನಂದ ಕುಮಾರ್‌, ಪುರಸಭೆ ಅಧ್ಯಕ್ಷೆ ರೂಪಕಲಾ ಎಸ್‌.ಹೆಗಡೆ, ಆರೋಗ್ಯ ನಿರೀಕ್ಷಕ ರಾಜ್‌ಕುಮಾರ್‌, ಸರ್ಕಾರಿ ವಕೀಲ ದಾದಾಪೀರ್‌ ಬಾನುವಳ್ಳಿ, ವಕೀಲರಾದ ಚಂದ್ರಪ್ಪ, ಆರ್‌.ಎಚ್‌. ಕೊಟ್ರೇಶಪ್ಪ, ವಿನಯಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT