ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರು ಪ್ರವಾಸಕ್ಕೆ; ಕಿರಿಯರು ಮೌಲ್ಯಮಾಪನಕ್ಕೆ

Last Updated 14 ಜನವರಿ 2011, 8:50 IST
ಅಕ್ಷರ ಗಾತ್ರ

ವಿಶೇಷ ವರದಿ
ಶಿವಮೊಗ್ಗ:
ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಬೇಕಾದ ಅಧ್ಯಾಪಕರು ಪ್ರವಾಸದಲ್ಲಿ; ಅರ್ಹರಲ್ಲದ ಅತಿಥಿ ಉಪನ್ಯಾಸಕರು ಮೌಲ್ಯಮಾಪನದ ಕೊಠಡಿಯಲ್ಲಿ!
- ಕುವೆಂಪು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಮೌಲ್ಯಮಾಪನದ ಪರಿ ಇದು. ಜ. 10ರಿಂದ ನಗರದ ಡಿವಿಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಹಾಗೂ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ವಿಷಯಗಳ ಮೌಲ್ಯಮಾಪನ ಕೇಂದ್ರಗಳಲ್ಲಿ ಸದ್ಯ ಇದೇ ವ್ಯವಸ್ಥೆ ಇದೆ.

ಪರೀಕ್ಷಾಂಗ ಕುಲಸಚಿವ ಆದೇಶದನ್ವಯ ಕನಿಷ್ಠ ಐದು ವರ್ಷದ ಬೋಧನಾ ಅನುಭವ ಇರುವವರು ಮಾತ್ರ ಪರೀಕ್ಷಾ ಮೌಲ್ಯಮಾಪನಕ್ಕೆ ಅರ್ಹರು. ಆದರೆ, ಈ ಎರಡೂ ಮೌಲ್ಯಮಾಪನ ಕೇಂದ್ರಗಳಲ್ಲಿ ಐದು ವರ್ಷದ ಬೋಧನಾ ಅನುಭವ ಇಲ್ಲದ ಅತಿಥಿ ಉಪನ್ಯಾಸಕರೇ ಹೆಚ್ಚಿದ್ದಾರೆ ಎಂದು ಕೆಲ ಅಧ್ಯಾಪಕರು ಆರೋಪಿಸಿದ್ದಾರೆ.

ತಿಂಗಳಿಗೆ ್ಙ 70ರಿಂದ 80 ಸಾವಿರ ಯುಜಿಸಿ ಸಂಬಳ ಎಣಿಸುವ ಹಿರಿಯ ಅಧ್ಯಾಪಕರು ಮನೆ, ಪ್ರವಾಸ ಹಾಗೂ ಸಾವಿರಾರು ರೂಪಾಯಿ ಸಿಗುವ ಸೆಮಿನಾರ್‌ಗಳಲ್ಲಿ ಕಾಲ ಕಳೆಯುತ್ತಿದ್ದರೆ, ಐದಾರು ಸಾವಿರ ವೇತನ ಪಡೆಯುವ ಅತಿಥಿ ಉಪನ್ಯಾಸಕರು ಮೌಲ್ಯಮಾಪನದಲ್ಲಿ ಮುಳುಗಿದ್ದಾರೆ.

ವಿಶ್ವವಿದ್ಯಾಲಯದ ವ್ಯಾಪ್ತಿಯ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಕಾಲೇಜುಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚಿನ ಬೋಧನಾ ಅನುಭವ ಹೊಂದಿದ ಮತ್ತು ವಿಶ್ವವಿದ್ಯಾಲಯವೇ ಸಿದ್ಧಪಡಿಸಿದ ಹಿರಿಯ ಅಧ್ಯಾಪಕರ ದೊಡ್ಡ ಪಟ್ಟಿ ಇದೆ. ಆದರೆ, ಇವರ್ಯಾರೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೌಲ್ಯಮಾಪನ ಮಾಡುತ್ತಿಲ್ಲ ಎಂಬ ದೂರುಗಳಿವೆ.

ಮೌಲ್ಯಮಾಪನಕ್ಕೆ ಯುಜಿಸಿ ಅಧ್ಯಾಪಕರು ಗೈರುಹಾಜರಾಗುವುದನ್ನು ಮನಗಂಡು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್‌ಗೋಪಾಲ್, ಮೌಲ್ಯಮಾಪನದ ಸಮಯದಲ್ಲಿ ಕಣ್ಮರೆಯಾಗುವ ಅಧ್ಯಾಪಕರ ಪಟ್ಟಿಯನ್ನು ವಿವಿ ಮೂಲಕ ಕಳುಹಿಸಿ ಕೊಡುವಂತೆ, ಅವರ ಮುಂಬಡ್ತಿ ಹಾಗೂ ವೇತನ ಕಡಿತಗೊಳಿಸುವ ಕ್ರಮ ಕೈಗೊಳ್ಳುವ ಆದೇಶವನ್ನು ಪ್ರತಿ ಕಾಲೇಜಿಗೆ ಕಳುಹಿಸಿಕೊಟ್ಟಿದ್ದಾರೆ. ಇಷ್ಟಾದರೂ ಹಿರಿಯ ಅಧ್ಯಾಪಕರು ಮೌಲ್ಯಮಾಪನಕ್ಕೆ ಕಳ್ಳಬೀಳುತ್ತಿರುವುದು ಯಾವ ಧೈರ್ಯದ ಮೇಲೆ ಎಂಬುದು ಮಾತ್ರ ನಿಗೂಢವಾಗಿದೆ.

ಬಹಳಷ್ಟು ಅತಿಥಿ ಉಪನ್ಯಾಸಕರು ಕೆಲಸಕ್ಕೆ ಸೇರಿ ಎರಡು-ಮೂರು ವರ್ಷಗಳೂ ಆಗಿಲ್ಲ. ಅಷ್ಟೇ ಅಲ್ಲ, ಅವರಿಗೆ ಮೌಲ್ಯಮಾಪನದ ಯಾವುದೇ ಆದೇಶವೂ ಇಲ್ಲ.ಅಷ್ಟಾದರೂ ಕೆಲವು ಅಧಿಕಾರಿಗಳ ಅಣತಿ ಮೇರೆಗೆ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂಬುದು ಹೆಸರು ಹೇಳಲಿಚ್ಛಿಸದ ಹಿರಿಯ ಅಧ್ಯಾಪಕರೊಬ್ಬರ ದೂರು.

ಯಾವುದೇ ವಿಷಯದ ಒಂದೇ ಭಾಗವನ್ನು ಇಡೀ ವರ್ಷ ಪಾಠ ಮಾಡಿದವರು ಅದರ ಜತೆಗಿರುವ ಮತ್ತೊಂದು ಭಾಗವನ್ನು ಕಣ್ಣೆತ್ತಿಯೂ ನೋಡಿರುವುದಿಲ್ಲ. ಇಂತಹವರಿಂದ ಗುಣಮಟ್ಟದ ಮೌಲ್ಯಮಾಪನವನ್ನು ವಿಶ್ವವಿದ್ಯಾಲಯ ಹೇಗೆ ನಿರೀಕ್ಷಿಸುತ್ತದೆ ಎಂಬುದು ಪ್ರಶ್ನೆಯಾಗಿದೆ. ಅಲ್ಲದೇ, ಇಂದು ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರ ಸೇರುತ್ತಿರುವ ಪದವಿ ಶಿಕ್ಷಣದಲ್ಲೇ ಒಂದು ಅಥವಾ ಅರ್ಧ ಅಂಕ ಕಡಿಮೆಯಾದರೂ ಉದ್ಯೋಗ ಅಥವಾ ಉನ್ನತ ವ್ಯಾಸಂಗಕ್ಕೆ ತೊಂದರೆಯಾಗುವುದು ಖಂಡಿತ.

ದಿನದ 6 ಗಂಟೆಯಲ್ಲಿ 30 ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಬೇಕಾಗಿರುವುದು ನಿಯಮ. ಆದರೆ, ಅತಿಥಿ ಉಪನ್ಯಾಸಕರು ಒಂದು ಗಂಟೆಯಲ್ಲಿ 15ಕ್ಕೂ ಹೆಚ್ಚು ಉತ್ತರಪತ್ರಿಕೆ ಮೌಲ್ಯಮಾಪನ ಮಾಡಿ ಹಿರಿಯಅಧ್ಯಾಪಕರನ್ನು ನಾಚಿಸುತ್ತಿರುವುದು ದಿನನಿತ್ಯದ ವಿದ್ಯಮಾನವಾಗಿದೆ.

ಆಶ್ಚರ್ಯ ಎಂದರೆ ಅತಿಥಿ ಉಪನ್ಯಾಸಕರಿಂದ ಮೌಲ್ಯಮಾಪನ ಮಾಡಿಸುತ್ತಿರುವ ವಿಶ್ವವಿದ್ಯಾಲಯಕ್ಕೆ ಇದರಿಂದ ನಷ್ಟವೇ ಹೊರತು ಲಾಭ ಇಲ್ಲ. ಹಿರಿಯ ಅಧ್ಯಾಪಕರಿಗೆ ದಿನಭತ್ಯೆ ್ಙ 400 ನೀಡಿ ಕೆಲಸ ಮಾಡಿಸಬಹುದಾದ ವಿಶ್ವವಿದ್ಯಾಲಯ, ಇದೇ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ದಿನಭತ್ಯೆ ್ಙ 440  ಮತ್ತು ಮೌಲ್ಯಮಾಪನ ಕಾರ್ಯಕ್ಕೆ ಉತ್ತರಪತ್ರಿಕೆ ಒಂದಕ್ಕ್ಙೆ 8 ಹೆಚ್ಚುವರಿಯಾಗಿ ನೀಡುತ್ತಿದೆ.

‘ಭಾಷಾ ವಿಷಯಗಳಲ್ಲಿ ಮೌಲ್ಯಮಾಪಕರ ಕೊರತೆ ಇದೆ. ಹಾಗಾಗಿ, ಮೂರು ವರ್ಷದ ಬೋಧನಾ ಅನುಭವ ಇರುವ ಅತಿಥಿ ಉಪನ್ಯಾಸಕರನ್ನೂ ಬಳಸಿಕೊಳ್ಳಲಾಗುತ್ತಿದೆ.ಸೆಮಿಸ್ಟರ್ ವ್ಯವಸ್ಥೆ ಇರುವುದರಿಂದ ಬೇರೆ ಫಲಿತಾಂಶ ನೀಡಬೇಕು. ಸರ್ಕಾರದ ಆದೇಶ ಇರುವುದರಿಂದ ಹಿರಿಯ ಉಪನ್ಯಾಸಕರಿಗೂ ಕಡ್ಡಾಯವಾಗಿ ಬಳಸಿಕೊಳ್ಳಲಾಗುತ್ತಿದೆ. ಕೆಲವರು ಸೆಮಿನಾರ್ ಸೇರಿದಂತೆ ಕೆಲವು ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುತ್ತಾರೆ. ಅಂತಹವರಿಗೆ ವಿನಾಯ್ತಿ ಕೊಡಲಾಗಿದೆ’ ಎನ್ನುತ್ತಾರೆ ಕುವೆಂಪು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ರಾಮೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT