‘ಸ್ಮಾರ್ಟ್‌’ ಮೋಹ: ಪಾಲಿಕೆ ಪ್ರವೇಶಕ್ಕೆ ಭಾರಿ ಹವಾ!

7
ಸ್ಥಳೀಯ ಆದಾಯ, ಎಲ್ಲಾ ಯೋಜನೆಗಳ ಅನುದಾನ ಸೇರಿದರೆ ₹ 2 ಸಾವಿರ ಕೋಟಿ ಮೊತ್ತ

‘ಸ್ಮಾರ್ಟ್‌’ ಮೋಹ: ಪಾಲಿಕೆ ಪ್ರವೇಶಕ್ಕೆ ಭಾರಿ ಹವಾ!

Published:
Updated:
Deccan Herald

ಶಿವಮೊಗ್ಗ: ‘ಸ್ಮಾರ್ಟ್ ಸಿಟಿ’ ಯೋಜನೆ ಅನುಷ್ಠಾನದಿಂದ ನಗರದ ಚಿತ್ರಣವೇ ಬದಲಾಗುವ ನಿರೀಕ್ಷೆ ಇದ್ದು, ‘ಸ್ಮಾರ್ಟ್‌’ ನಿಧಿಯ ಮೋಹದ ಫಲವಾಗಿ ಪಾಲಿಕೆ ಪ್ರವೇಶಿಸಲು ಹಳಬರು, ಹಾಲಿ ಸದಸ್ಯರು, ಹೊಸ ಮುಖಗಳ ಮಧ್ಯೆ ಭಾರಿ ಪೈಪೋಟಿ ನಡೆಯುತ್ತಿದೆ.

ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಹಿಂದೆ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಾಗಿದ್ದವರು ಈ ಬಾರಿ ಮತ್ತೆ ಕಣಕ್ಕೆ ಧುಮುಕ್ಕಿದ್ದಾರೆ. ಹಾಲಿ ಸದಸ್ಯರಲ್ಲಿ ಬಹುತೇಕರು ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೊಸ ಮುಖಗಳ ಭರಾಟೆಯೂ ಜೋರಾಗಿದೆ. ಉದ್ಯಮಿಗಳು, ನಿವೃತ್ತರು, ಸಾಹಿತಿಗಳು, ಪತ್ರಕರ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗೆ ಇಳಿಯಲು ಸಿದ್ಧತೆ ನಡೆಸುತ್ತಿದ್ದಾರೆ.

ನಗರ ಪಾಲಿಕೆ ರಚನೆಯಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು. ಪಾಲಿಕೆಯ ಆದಾಯದ ಮೂಲಗಳು ಹೆಚ್ಚಿವೆ. ವಿವಿಧ ತೆರಿಗೆಗಳ ಸಂಗ್ರಹದಿಂದ ₹ 94.26 ಕೋಟಿ, ಬಂಡವಾಳದ ಮೂಲಕ ₹ 62.44 ಕೋಟಿ, ಅನಿರೀಕ್ಷಿತ ಆದಾಯ ₹ 12.17 ಕೋಟಿ ಸೇರಿ ₹ 202 ಕೋಟಿ ವಾರ್ಷಿಕ ಆದಾಯ ನಿರೀಕ್ಷಿಸಲಾಗಿದೆ. ನಗರೋತ್ಥಾನದ ₹ 100 ಕೋಟಿ, ರಾಜ್ಯ ಹಣಕಾಸು ನಿಧಿಯಲ್ಲಿ ₹ 44.13 ಕೋಟಿ, ವಿಶೇಷ ನಿಧಿ ₹ 6.50 ಕೋಟಿ, ಅಮೃತ್‌ ಯೋಜನೆಯ ₹ 180.82 ಕೋಟಿ ಸೇರಿ ಸಾಕಷ್ಟು ಅನುದಾನ ಹರಿದು ಬಂದಿದೆ.

ಇಷ್ಟೆಲ್ಲಾ ಅನುದಾನ, ಆದಾಯದ ಜತೆಗೆ ಸ್ಮಾರ್ಟ್‌ಸಿಟಿ ಯೋಜನೆಯ ಗರಿ ದೊರೆತಿದೆ. ಐದು ವರ್ಷಗಳಲ್ಲಿ ಕೇಂದ್ರ ಹಾಗೂ ರಾಜ್ಯದ ನೀಡುವ ನೆರವು ಬರೋಬ್ಬರಿ ₹ 1 ಸಾವಿರ ಕೋಟಿ ಸಿಗಲಿದೆ. ಈಗಾಗಲೇ ಮೊದಲ ಹಂತದಲ್ಲಿ ₹ 206 ಕೋಟಿ ಬಿಡುಗಡೆಯಾಗಿದೆ. ಸ್ಮಾರ್ಟ್‌ಸಿಟಿ ಅನುಷ್ಠಾನಕ್ಕೆ ಕಂಪನಿ ಸ್ಥಾಪಿಸಲಾಗಿದೆ.

ಸ್ಮಾರ್ಟ್‌ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೆಶಕರ ನೇತೃತ್ವದ ಅಧಿಕಾರಿಗಳ ತಂಡ ₹ 10 ಕೋಟಿ ಯೋಜನೆಗೆ ಅನುಮೋದನೆ ನೀಡುವ ಅಧಿಕಾರ ಹೊಂದಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧ್ಯಕ್ಷತೆಯ 15 ಸದಸ್ಯರ ಸಮಿತಿ ₹ 50 ಕೋಟಿವರೆಗೆ ಅನುಮೋದನೆ ನೀಡುತ್ತದೆ. ಯಾವುದೇ ಕಾಮಗಾರಿ ಕೈಗೊಳ್ಳುವ ಮೊದಲು ಈ ಸಮಿತಿಯ ಅನುಮತಿ ಕಡ್ಡಾಯ. ಈ ಸಮಿತಿಯಲ್ಲಿ ಪಾಲಿಕೆ ಮೇಯರ್ ಸೇರಿದಂತೆ 6 ಮಂದಿ ನಾಮನಿರ್ದೇಶನ ಹೊಂದುತ್ತಾರೆ. ಅವರಲ್ಲಿ ಐವರು ಪಾಲಿಕೆ ಸದಸ್ಯರಿಗೆ ಅವಕಾಶ ಇರುತ್ತದೆ. ಹೀಗಾಗಿ, ಪಾಲಿಕೆ ಪ್ರವೇಶಿಸಿ, ಅಧಿಕಾರದ ಗದ್ದುಗೆ ಏರಿವ ಜತೆಗೆ, ‘ಸ್ಮಾರ್ಟ್‌ ಸಿಟಿ’ ಕಂಪೆನಿಯ ಉಸ್ತುವಾರಿ ಸಮಿತಿಯ ಸದಸ್ಯತ್ವ ಪಡೆಯಲು ಹವಣಿಕೆ ಆರಂಭವಾಗಿದೆ. ಪರಿಣಾಮ ಚುನಾವಣಾ ಕಣ ರಂಗೇರಿದೆ.  

ಕಾಂಗ್ರೆಸ್ ವಿಳಂಬ ತಂತ್ರ:

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡ ಬೆನ್ನಿಗೆ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಟಿಕೆಟ್‌ ಆಕಾಂಕ್ಷಿಗಳ ಅರ್ಜಿಗಳ ಪರಿಶೀಲನೆಯ ನೆಪದಲ್ಲಿ ಪಟ್ಟಿ ಬಿಡುಗಡೆ ವಿಳಂಬ ಮಾಡಿದೆ. ಹೆಚ್ಚು ಪೈಪೋಟಿ ಇಲ್ಲದ ವಾರ್ಡ್‌ಗಳ ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮಗೊಂಡಿದ್ದು, ತೀವ್ರ ಪೈಪೋಟಿ ಇರುವ ಭಾಗಗಳಲ್ಲಿ ಆಕಾಂಕ್ಷಿಗಳ ಮನವೊಲಿಸಲು ಪ್ರಯತ್ನಿಸಲಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಕೇವಲ 2 ದಿನ ಬಾಕಿ ಇದ್ದು, ಕೊನೆಯ ದಿನವೇ (ಆ. 20ರಂದು) ಎಲ್ಲರೂ ಒಟ್ಟಿಗೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಟಿಕೆಟ್‌ ಖಚಿತ ಎಂದು ನಂಬಿಕೊಂಡವರು ಈಗಾಗಲೇ ಪಕ್ಷದ ‘ಬಿ’ ಫಾರಂ ಹೊರತಾಗಿ ಒಂದು ಬಾರಿ ನಾಮಪತ್ರ ಸಲ್ಲಿಸಿದ್ದಾರೆ.

ಹೊಸ ಮುಖಗಳಿಗೆ ಜೆಡಿಎಸ್‌ ಮಣೆ:

ಜೆಡಿಎಸ್‌ ಎಲ್ಲ ಹಾಲಿ ಸದಸ್ಯರಿಗೂ ಟಿಕೆಟ್ ನೀಡಿದೆ (ಏಳುಮಲೈ ಬದಲು ಪತ್ನಿಗೆ ಟಿಕೆಟ್). ಉಳಿದ ವಾರ್ಡ್‌ಗಳಲ್ಲಿ ಬಹುತೇಕ ಹೊಸ ಮುಖಗಳಿಗೆ ಮಣೆ ಹಾಕಿದೆ. ಆದರೆ, ಪಟ್ಟಿ ಅಧಿಕೃತವಾಗಿ ಪ್ರಕಟಿಸಿಲ್ಲ. ಮೇಯರ್‌ ನಾಗರಾಜ ಕಂಕಾರಿ ಸೇರಿದಂತೆ ಸ್ಪರ್ಧೆಗೆ ಇಳಯಲು ಬಯಸಿದ ಕೆಲವರು ಈಗಾಗಲೇ ಒಂದು ಸುತ್ತು ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

ಎಲ್ಲ ಪಕ್ಷಗಳಿಗೂ ಮೊದಲು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿರುವ ಬಿಜೆಪಿಯಲ್ಲಿ ಭಿನ್ನಮತ ಸ್ಫೊಟಗೊಂಡಿದೆ. ಕಳೆದ ಬಾರಿ ಕೆಜೆಪಿ, ಬಿಜೆಪಿ ಎಂದು ಪರಸ್ಪರ ವಿರುದ್ಧ ಸ್ಪರ್ಧೆಗೆ ಇಳಿದಿದ್ದರು. ಎರಡೂ ಬಣ ಸೇರಿ 15 ಸದಸ್ಯರು ಆಯ್ಕೆಯಾಗಿದ್ದರು. ಎರಡೂ ಬಣ ಒಂದಾದ ನಂತರ 11 ಸದಸ್ಯರು ಉಳಿದಿದ್ದರು. ಈಗ ಅವರಲ್ಲಿ ಬಹುತೇಕ ಸದಸ್ಯರು ಮರು ಸ್ಪರ್ಧೆಗೆ ಬಿಜೆಪಿ ಟಿಕೆಟ್‌ ಬಯಸಿದ್ದರು. ಟಿಕೆಟ್‌ ಸಿಕ್ಕಿರುವುದು ಹಾಲಿ ಸದಸ್ಯರಲ್ಲಿ ಕೇವಲ ಮೂವರಿಗೆ.

ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ, ರೂಪಾ ಲಕ್ಷ್ಮಣ್ ಹೊರತುಪಡಿಸಿದರೆ ಉಳಿದ 8 ಸದಸ್ಯರಿಗೆ ಟಿಕೆಟ್ ತಪ್ಪಿದೆ. ಹಲವರು ಪಕ್ಷದ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಅರ್ಚನಾ ಬಳ್ಳೆಕೆರೆ, ಮೋಹನ್‌ ರೆಡ್ಡಿ, ಮಾಲತೇಶ್ ಸೇರಿದಂತೆ ಹಲವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಇದು ಒಂದು ರೀತಿ ಪರೋಕ್ಷವಾಗಿ ಕಳೆದ ಬಾರಿಯ ಕೆಜೆಪಿ, ಬಿಜೆಪಿ ಸ್ಪರ್ಧೆ ನೆನಪಿಸುತ್ತಿದೆ.

14 ನಾಮಪತ್ರ ಸಲ್ಲಿಕೆ; 31ಕ್ಕೇ ಚುನಾವಣೆ

ಪಾಲಿಕೆಯ ವಿವಿಧ ವಾರ್ಡ್‌ಗಳಿಂದ ಸ್ಪರ್ಧೆ ಬಯಸಿ ಇದುವರೆಗೆ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆ. 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾದರೂ, ಮೊದಲ ಎರಡು ದಿನ ಒಂದೂ ಸಲ್ಲಿಕೆಯಾಗಿರಲಿಲ್ಲ. ಆ. 15 ರಜೆ ಇತ್ತು. 16ರಂದು 14 ಸಲ್ಲಿಕೆಯಾಗಿದ್ದವು. ವಾಜಪೇಯಿ ನಿಧನದ ಕಾರಣ ಆ. 17ರಂದು ರಜೆ ಇತ್ತು. ಈಗ ಉಳಿದಿರುವುದು ಎರಡು ದಿನ ಮಾತ್ರ ( ಆ. 18 ಹಾಗೂ 20). ಎರಡು ದಿನದಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳೂ ಸೇರಿದಂತೆ 200ಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ಪಾಲಿಕೆ ಚುನಾವಣೆ ನಿಗದಿಯಂತೆ ಆ. 31ರಂದು ನಡೆಯಲಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !