7

ಮಾಗಡಿಯ ಐಸಿರಿ ಸೋಮೇಶ್ವರಸ್ವಾಮಿ ದೇವಾಲಯ

Published:
Updated:
ಮಾಗಡಿ ಪಟ್ಟಣದ ಸೋಮೇಶ್ವರಸ್ವಾಮಿ ದೇವಾಲಯ

ಮಾಗಡಿ: ನಾಡಪ್ರಭು, ಗೌಡಕುಲ ಭೂಷಣ ಕೆಂಪೇಗೌಡರ ನೆಲೆವೀಡು ನಮ್ಮ ಮಾಗಡಿ. ಗಂಗವಾಡಿ ಪ್ರಾಂತ್ಯಕ್ಕೆ ಸೇರಿರುವ ಅರೆಮಲೆನಾಡು. ಕೆರೆ ಗೋಕಟ್ಟೆ, ಕಲ್ಯಾಣಿ, ಗುಡಿಗೋಪುರ, ಅರವಟಿಗೆ, ಅನ್ನದಾನ, ಪರಿಸರ ಸಂರಕ್ಷಣೆಯ ಹೊಣೆಯನ್ನು ಬಹಳ ಹಿಂದೆಯೇ ಕೆಂಪೇಗೌಡರ ವಂಶಜರು ಮಾಡಿಕೊಂಡು ಬಂದಿರುವ ಮಹತ್ವ ಭೂಮಿ ಈ ಮಾಗಡಿ.

ಸಾಧು ಸಂತರ, ಅನ್ನದಾತ ರೈತರ ಜನಪದ ಪರಂಪರೆಯನ್ನು ಸಕಲಚರಾಚರ ಜೀವಿಜಂತುಗಳಿಗೆ ಬೇಕಾದ ಆಹಾರ ಪರಿಕರಗಳನ್ನು ಒಳಗೊಂಡು ಸಾವನದುರ್ಗ, ಭೈರವನ ದುರ್ಗ, ಹುತ್ರಿದುರ್ಗ, ಹುಲಿಯೂರು ದುರ್ಗ, ಹುಲಿಕಲ್‌ ದುರ್ಗದಲ್ಲಿನ ವನಸಂಪತ್ತು ಬೆಳೆಸಲು ಶ್ರಮಿಸಿದವರು ಕೆಂಪೇಗೌಡರು ಮತ್ತು ಅವರ ವಂಶಸ್ಥರು. ಮಾಗಡಿ ಸೀಮೆಯಲ್ಲಿ ಚಾರಿತ್ರಿಕ, ಜನಪದೀಯ, ಧಾರ್ಮಿಕ, ಆದಿವಾಸಿಗಳಿಗೆ ಮತ್ತು ಸಸ್ಯಸಂಕುಲ, ಜೀವಿಸಂಕುಲಗಳ ಬೆಳೆವಣಿಗೆಗೆ ಕೆಂಪೇಗೌಡರ ವಂಶಜರ ಕಾಣಿಕೆ ಅನನ್ಯವಾದುದು.

ಇಂತಹ ಮಾಗಡಿಯ ಐಸಿರಿ ಸೋಮೇಶ್ವರ ಸ್ವಾಮಿ ದೇಗುಲ. ಈ ದೇವಾಲಯದಲ್ಲಿರುವ ಅದ್ಬುತ ಶಿಲ್ಪಕಲಾಕೃತಿಗಳು. ಉಬ್ಬುಚಿತ್ರಗಳ ಸೌಂದರ್ಯ ಅನನ್ಯವಾದುದು. ವಿಜಯನಗರ ಸಾಮ್ರಾಜ್ಯದ ಗಡಿಯಾಗಿದ್ದ ಮಹಾಗಡಿಯೇ ಮಾಗಡಿ. ಈ ಮಾಗಡಿಯಲ್ಲಿ ಕ್ರಿ.ಶ.1712ರಲ್ಲಿ ಇಮ್ಮಡಿ ಕೆಂಪೇಗೌಡ ಹನುಮಾಪುರದ ಶಿಲ್ಪಿ ಮುನಿಯಾಭೋವಿ ಮತ್ತು ತಂಡದ ಶಿಲ್ಪಿಗಳಿಂದ ಸ್ಥಳೀಯವಾಗಿ ದೊರೆಯುತ್ತಿದ್ದ ಕೆಂಪುಮಿಶ್ರಿತ ಕಲ್ಲನ್ನು ಬಳಸಿ ಈ ದೇವಾಲಯವನ್ನು ನಿರ್ಮಿಸಿದರು ಎಂದು ದೇವಾಲಯದ ಗರ್ಭ ಗೃಹದಲ್ಲಿರುವ ಶಾಸನ ತಿಳಿಸಿದೆ.

ಗಗನಧಾರ್ಯರ ಪ್ರೇರಣೆಯಿಂದಾಗಿ ಇಮ್ಮಡಿ ಕೆಂಪೇಗೌಡ ಲಿಂಗಧಾರಣೆ ಮಾಡಿಸಿಕೊಂಡು ಮಾಗಡಿ ತಾಲ್ಲೂಕಿನಲ್ಲಿ 66 ವಿರಕ್ತ ಮಠಗಳನ್ನು, ಗುಡಿ, ಗೋಪುರಗಳನ್ನು ನಿರ್ಮಿಸಿರುವ ಬಗ್ಗೆ 'ನಿರಂಜನ ವಂಶರತ್ನಾಕರ' ಕೃತಿ ತಿಳಿಸಿದೆ. ಮಾಗಡಿ ಐಸಿರಿ ಸೋಮೇಶ್ವರ ದೇವಾಲಯದ ಪೌಳಿಯೊಳಗೆ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇಮ್ಮಡಿಕೆಂಪೇಗೌಡರ ಹಜಾರಗಳಿವೆ. ಪರಶುರಾಮ, ಸತ್ಯನಾರಾಯಣಸ್ವಾಮಿ, ಭ್ರಮರಾಂಭಿಕೆ ಅಮ್ಮನವರ ದೇಗುಲಗಳಿವೆ. ಹಂಪಿಯಲ್ಲಿನ ವಿರೂಪಾಕ್ಷ ದೇಗುಲದ ಮುಂದೆ ಇರುವಂತಹ ನೃತ್ಯ ಮಂಟಪವಿದೆ. ಪೌಳಿ ಗೋಡೆಯ ನಾಲ್ಕು ದಿಕ್ಕಿನಲ್ಲಿ ಮತ್ತು ಹಜಾರದ ಮೇಲೆ ಚಿತ್ರಾಲಂಕೃತ ಗೋಪುರಗಳಿವೆ. ಒರಟು ಕಲ್ಲಿನಲ್ಲೂ ಶಿಲ್ಪಿ ಚತುರತೆಯಿಂದ ಗಿರಿಜಾಕಲ್ಯಾಣದ ಚಿತ್ರಗಳನ್ನು ಚಿತ್ರಿಸಿದ್ದಾನೆ.

ದೇಗುಲದ ದಕ್ಷಿಣ ದ್ವಾರದ ಮೇಲಿದ್ದ ರಾಯಗೋಪುರ ಶಿಥಿಲವಾಗಿದ್ದ ಕಾರಣ ಇತ್ತೀಚೆಗೆ ಪ್ರಾಚ್ಯವಸ್ತು ಇಲಾಖೆ ವತಿಯಿಂದ ನೂತನ ರಾಯಗೋಪುರವನ್ನು ನಿರ್ಮಿಸಲಾಗಿದೆ. ಸೋಮೇಶ್ವರ ದೇವಾಲಯ ಬೃಹತ್‌ ಬಂಡೆಯ ಮೇಲೆ ನಿರ್ಮಾಣಗೊಂಡಿದ್ದು ನೋಡಲು ನಯನ ಮನೋಹರವಾಗಿದೆ. ದೇವಾಲಯದ ನೈಋತ್ಯ ದಿಕ್ಕಿನಲ್ಲಿರುವ ಬೆಟ್ಟದ ಮೇಲೆ ಇಮ್ಮಡಿ ಕೆಂಪೇಗೌಡರ ಕಾವಲು ಗೋಪುರ ಮತ್ತು ನಂದಿ ಇದೆ. ಕೆಂಪೇಗೌಡರ ಗೋಪುರ ಶಿಥಿಲವಾಗಿದ್ದು ದುರಸ್ತಿ ಮಾಡಿಸ ಬೇಕಿದೆ.

ಬೆಟ್ಟದ ಕೆಳಗೆ ಇದ್ದ ಕಲಾತ್ಮಕ ಕಲ್ಯಾಣಿ ಮತ್ತು ಅರೆಶಂಕರ ಶರಣ ಮಠ ಇಂದು ಶಿಥಿಲವಾಗಿವೆ. ಹಿಂದೆ ಜಾತ್ರಾ ಸಮಯದಲ್ಲಿ ಇದೇ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದಾಗ ಉತ್ಸವ ಮೂರ್ತಿ ಮುಳುಗಿತ್ತು. ಆಗಿನಿಂದ ರಾಸುಗಳ ಜಾತ್ರೆ ನಿಲ್ಲಿಸಲಾಗಿದೆ' ಎನ್ನುತ್ತಾರೆ ಆಗಮಿಕ ವಿದ್ವಾನ್ ಕೆ.ಎನ್,ಗೋಪಾಲ ದೀಕ್ಷಿತ್.

ಆಡಳಿತ: ಇಮ್ಮಡಿ ಕೆಂಪೇಗೌಡ ಕೃಷಿಯಾಧಾರಿತ ಚಟುವಟಿಕೆಗಳ ಜೊತೆಗೆ ಜನಪದ ಕಲೆ, ಸಾಹಿತ್ಯ, ಸಂಗೀತ, ಆದಿವಾಸಿಗಳ ನೃತ್ಯ, ನಾಟಕಗಳಿಗೆ ಉದಾರ ದೇಣಿಗೆ ನೀಡುತ್ತಿದ್ದರು. ಅದಕ್ಕೆ ಸಾಕ್ಷಿಯಾಗಿ ಸೋಮೇಶ್ವರಸ್ವಾಮಿ ದೇಗುಲದ ಭಿತ್ತಿ ಚಿತ್ರಗಳಲ್ಲಿ ಕುರುಹುಗಳಿವೆ.
ಏಕಾಂಬರ ದೀಕ್ಷಿತನೆಂಬ ಕವಿ ತನ್ನ ‘ವೀರಭದ್ರ ವಿಜಯ’ ಕೃತಿಯಲ್ಲಿ ಸೋಮೇಶ್ವರ ಸ್ವಾಮಿಯ ದೇವಾಲಯದ ಬಗ್ಗೆ ವರ್ಣನೆ ಮಾಡಿದ್ದಾನೆ. ಇಮ್ಮಡಿ ಕೆಂಪೇಗೌಡರು ಬ್ರಾಹ್ಮಣರಿಗೆ ದಾನ ದತ್ತಿ ನೀಡಿದ್ದ ಬಗ್ಗೆ ಮಾಹಿತಿಗಳಿವೆ. ದೇಗುಲದ ಭೂಮಿ ಉಳಿಸಿಕೊಳ್ಳಲು ಮುಜರಾಯಿ ಇಲಾಖೆ ಮುಂದಾಗಬೇಕಿದೆ. ಭಕ್ತರ ಪಾಲಿಗೆ ಭವರೋಗ ನಿವಾರಕನಂತಿರುವ ಸೋಮೇಶ್ವರಸ್ವಾಮಿ ದೇಗುಲಕ್ಕೆ ಸೂಕ್ತ ರಕ್ಷಣೆ ನೀಡುವ ಅಗತ್ಯವಿದೆ.

ಬೆಂಗಳೂರಿನಿಂದ ತಿಪ್ಪಗೊಂಡನಹಳ್ಳಿ ಮಾರ್ಗವಾಗಿ ಮಾಗಡಿಗೆ ಸರ್ಕಾರಿ ಮತ್ತು ಖಾಸಗಿ ಬಸ್ ವ್ಯವಸ್ಥೆಯಿದೆ. ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಮಾಗಡಿ ತಲುಪಬಹುದು. ಸೋಮೇಶ್ವರ ಸ್ವಾಮಿ ಸೇವಾ ಟ್ರಸ್ಟ್‌ ವತಿಯಿಂದ ಸಾಮೂಹಿಕ ಅನ್ನದಾನ ದೇವಾಲಯದ ಮುಂದೆ ನಡೆಯಲಿದೆ.
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !