ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡದ ರಂಗನಾಥಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ

Last Updated 17 ಡಿಸೆಂಬರ್ 2018, 12:39 IST
ಅಕ್ಷರ ಗಾತ್ರ

ಮಾಗಡಿ: ಮಾದಿಗೊಂಡನಹಳ್ಳಿ ಗುಡ್ಡದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಡಿ.18ರಂದು ಬೆಳಿಗ್ಗೆ 5.30ರಿಂದ ಸಂಜೆ 6ರವರೆಗೆ ವೈಕುಂಠ ಏಕಾದಶಿ ಅಂಗವಾಗಿ ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ರಂಗನಾಥ ಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ವೀರಪ್ಪ ತಿಳಿಸಿದರು.

ಈ ದೇವಾಲಯದಲ್ಲಿ ನಿತ್ಯೋತ್ಸವ, ಮಾಸೋತ್ಸವ, ಪಕ್ಷೋತ್ಸವಗಳು ನಡೆಯುತ್ತವೆ. ಶ್ರಾವಣ, ಸಂಕ್ರಾಂತಿ ಮಾಸೋತ್ಸವಗಳು ನಡೆಯಲಿವೆ. 108 ಎಡೆಸೇವೆ, ಯುಗಾದಿ ಹಬ್ಬದಲ್ಲಿ ಒಂದು ವಾರ ಕಾಲ ಬೃಹತ್‌ ಜಾತ್ರೆ ನಡೆಯಲಿದೆ. ಧನುರ್ಮಾಸದಲ್ಲಿ ಕೊಠಾರೋತ್ಸವ ನಡೆಯುತ್ತದೆ. ಗುಡ್ಡದ ರಂಗನಾಥಸ್ವಾಮಿ ದೇವಾಲಯದಿಂದ ಉತ್ತರಕ್ಕೆ ಶಿವಗಂಗೆ, ಪಶ್ಚಿಮಕ್ಕೆ ಹುತ್ತರಿದುರ್ಗ, ವಾಯುವ್ಯಕ್ಕೆ ಭೈರವನದುರ್ಗ, ದಕ್ಷಿಣಕ್ಕೆ ಕಲ್ಯಾದ ಬೆಟ್ಟ, ಪೂರ್ವಕ್ಕೆ ಸೋಲೂರಿನ ಯಲ್ಲಮ್ಮದೇವಿ ಗುಡ್ಡಗಳ ದೇಗುಲವಿದೆ.

ಗುಡ್ಡದ ರಂಗನಾಥಸ್ವಾಮಿಗೆ ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಗಳಿಂದ ಭಕ್ತರ ದಂಡೇ ಹರಿದು ಬರಲಿದೆ. ವೈಕುಂಠ ಏಕಾದಶಿ ಅಂಗವಾಗಿ ಸೀಗೆಕುಪ್ಪೆ ವರಲಕ್ಷ್ಮಿ ರಾಮರಾಜ್‌ ಭಕ್ತರಿಗೆ ಲಡ್ಡುಪ್ರಸಾದ ವಿತರಿಸಲಿದ್ದಾರೆ. ಅನ್ನಪೂರ್ಣ ಅಶ್ವಥ್‌ ಕುಟುಂಬದವರು ಭವ್ಯವಾದ ಹೂವಿನ ಸ್ವಾಗರ ಕಮಾನು ನಿರ್ಮಿಸಿದ್ದಾರೆ. ವೇಣುಗೋಪಾಲ್‌ ತಂಡದವರಿಂದ ನಾದನಮನ ನಾದಸ್ವರ ಸೇವೆ ನಡೆಯಲಿದೆ. ಟ್ರಸ್ಟಿನ ವತಿಯಿಂದ ದೇವರ ದರ್ಶನ ನೀಡುವ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಗುವುದು.

ಭಕ್ತರ ನೆರವನೊಂದಿಗೆ ಟ್ರಸ್ಟಿನ ವತಿಯಿಂದ ದೇವಾಲಯದ ಪಶ್ಚಿಮದ್ವಾರದ ಮುಂಭಾಗ ಬೃಹತ್‌ ರಾಯ ಗೋಪುರ ನಿರ್ಮಿಸಲಾಗಿದೆ. ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಶನಿವಾರ ಮತ್ತು ಭಾನುವಾರ ದಾಸೋಹದ ವ್ಯವಸ್ಥೆ ಇದೆ. ಮುಡಿಕೊಡುವವರಿಗೆ ಅನುಕೂಲ ಮಾಡಲಾಗಿದೆ. ಪುರಾಣ ಕಾಲದಿಂದಲೂ ಇರುವ ಪುಷ್ಕರ್ಣಿಯಲ್ಲಿ ಮಿಂದರೆ ಪುಣ್ಯಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ.

ಸ್ನಾನ ಮತ್ತು ಶೌಚಾಲಯಕ್ಕೆ ಪ್ರತ್ಯೇಕ ಅನುಕೂಲವಿದೆ. ದೇವಾಲಯದ ಬಳಿ ಉಳಿದುಕೊಳ್ಳಲು ಸೂಕ್ತ ಅನುಕೂಲಗಳಿವೆ ಎಂದು ಸೇವಾ ಟ್ರಸ್ಟಿನ ಕಾರ್ಯದರ್ಶಿ ಚಂದ್ರು ವಿವರಿಸಿದರು. ವೇದಾಗಮ ಪಂಡಿತರಿಂದ ವಿಧಿಬದ್ಧವಾಗಿ ಪೂಜಾದಿ ಉತ್ಸಗಳು ನಡೆಯಲಿವೆ. ದೇಗುಲದ ಬಸವಣ್ಣನಿಗೆ ವಿಶೇಷ ಪೂಜೆ ನಡೆಯಲಿದೆ.

ಸಂಪರ್ಕ: 9740320170

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT