ಮಂಗಳವಾರ, ಏಪ್ರಿಲ್ 20, 2021
23 °C
ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಸಿಬ್ಬಂದಿಗೆ ತರಬೇತಿ * ಮೊದಲ ಹಂತದಲ್ಲಿ 30 ಮಂದಿ ಆಯ್ಕೆ

ಬೊಜ್ಜು ಇಳಿಕೆಗೆ ಯೋಗದತ್ತ ಪೊಲೀಸರು

ಬಾಬುಗೌಡ ರೋಡಗಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೆಲಸಕ್ಕೆ ಅಡೆತಡೆ ಉಂಟು ಮಾಡುವ ಬೊಜ್ಜನ್ನು ಕರಗಿಸಲು ವಿಜಯಪುರ ಜಿಲ್ಲಾ ಪೊಲೀಸ್‌ ಇಲಾಖೆ ಯೋಗಾಸನಕ್ಕೆ ಮೊರೆ ಹೋಗಿದೆ.

ಕೆಲಸದ ಒತ್ತಡ ನಿವಾರಣೆ, ಅತಿಯಾದ ತೂಕ ಹೊಂದಿರುವ ನೌಕರರಿಗೆ ಅವಶ್ಯಕ ತರಬೇತಿ ನೀಡಿ ಸದೃಢ ದೇಹ ರೂಪಿಸುವ ಉದ್ದೇಶದಿಂದ ಆರಂಭಗೊಂಡಿರುವ ತರಬೇತಿ ಶಿಬಿರ ನಿರಂತರ 21 ದಿನ ನಡೆಯಲಿದೆ. ಯೋಗಾಸನ, ಕ್ರೀಡೆಗಳು, ಉಪನ್ಯಾಸ ಮತ್ತಿತರ ರೂಪದಲ್ಲಿ ವಿಶೇಷ ಉಪಯೋಗಕಾರಿ ಸಲಹೆ, ಸೂಚನೆಗಳನ್ನು ನೀಡಲಾಗುತ್ತಿದೆ.

‘ಎತ್ತರಕ್ಕೆ ಅನುಗುಣವಾಗಿ ಇರಬೇಕಿದ್ದ ತೂಕಕ್ಕಿಂತ ಹೆಚ್ಚಿರುವ 60 ಸಿಬ್ಬಂದಿಯನ್ನು ಗುರುತಿಸಲಾಗಿತ್ತು. ಈ ಪೈಕಿ ಮೊದಲ ಹಂತದಲ್ಲಿ 30 ಜನರನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ. 21 ದಿನ ನಿರಂತರವಾಗಿ ಶಿಬಿರ ನಡೆಯಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಿಗ್ಗೆ 4.30ಕ್ಕೆ ಒಂದು ಗ್ಲಾಸ್ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಸೇವಿಸುತ್ತಾರೆ. 5.30ರಿಂದ 8.30ರವರೆಗೆ ಯೋಗಾಸನ ಮಾಡುತ್ತಾರೆ. 10.30ರಿಂದ ಮಧ್ಯಾಹ್ನ 1.30ರವರೆಗೆ ನುರಿತ ತಜ್ಞರಿಂದ ಆಹಾರ ಸೇವನೆ, ಒತ್ತಡ ನಿವಾರಣೆ, ಪ್ರಥಮ ಚಿಕಿತ್ಸೆ ಹಾಗೂ ಇಲಾಖೆಯ ಕೆಲಸದ ಕುರಿತು ಉಪನ್ಯಾಸ ನೀಡಲಾಗುತ್ತದೆ. 3.30ರಿಂದ ಸಂಜೆ 6.30ರವರೆಗೆ ವಾಲಿಬಾಲ್‌, ಫುಟ್‌ಬಾಲ್‌, ಥ್ರೋಬಾಲ್‌, ರಗ್‌ಬಿ ಆಡಿಸಲಾಗುತ್ತಿದೆ. ನಂತರ ದಿನಗಳಲ್ಲಿ ಸ್ವಿಮ್ಮಿಂಗ್‌, ಸೈಕ್ಲಿಂಗ್‌ಗೆ ಅವಕಾಶ ಮಾಡಿಕೊಡಲಾಗುವುದು’ ಎಂದು ಹೇಳಿದರು.

‘ತೂಕ ಹೆಚ್ಚಿರುವ ಕಾರಣ ಸರಳವಾಗಿ ಏಳಲು–ಕುಳಿತುಕೊಳ್ಳಲು ಕಷ್ಟವಾಗುತ್ತದೆ. ನಡೆದಾಡುವಾಗ ಆಯಾಸವಾಗುತ್ತದೆ. ಇದಕ್ಕೆ ಪರಿಹಾರವಾಗಿ ಇಲಾಖೆಯಿಂದ ಯೋಗಾಸನ ಶಿಬಿರ ಆಯೋಜಿಸಿರುವುದು ನಮ್ಮಂತವರಿಗೆ ತುಂಬಾ ಸಹಕಾರಿಯಾಗಿದೆ. ಶಿಬಿರಕ್ಕೆ ಆಯ್ಕೆ ಆಗಿರುವ ನಾವೆಲ್ಲ ಅತ್ಯಂತ ಖುಷಿಯಿಂದ ಬಂದಿದ್ದು, ತರಬೇತಿಯಲ್ಲಿ ನೀಡುವ ಟಿಪ್ಸ್‌ಗಳನ್ನು ಸರಿಯಾಗಿ ಪಾಲಿಸುವ ಮೂಲಕ ದೇಹದ ತೂಕ ಇಳಿಸಿಕೊಳ್ಳುತ್ತೇವೆ’ ಎಂದು ತರಬೇತಿ ಪಡೆಯುತ್ತಿರುವ ಪೊಲೀಸ್‌ ಸಿಬ್ಬಂದಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.