ಬೀದಿಗಿಳಿದ ವಿದ್ಯಾರ್ಥಿಗಳು – ರಂಪಾಟ

7
ಶೌಚಾಲಯ ಬಳಕೆ ವಿಷಯಕ್ಕೆ ಉಭಯ ಶಾಲೆ ಮುಖ್ಯ ಶಿಕ್ಷಕರ ನಡುವೆ ಮನಸ್ತಾಪ

ಬೀದಿಗಿಳಿದ ವಿದ್ಯಾರ್ಥಿಗಳು – ರಂಪಾಟ

Published:
Updated:
ಮಾಗಡಿ ಜಿಕೆಬಿಎಂಎಸ್‌ಗೆ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಬೀಗ ಹಾಕಿರುವುದು

ಮಾಗಡಿ: ಪಟ್ಟಣದ ಜಿಕೆಬಿಎಂಎಸ್‌ (ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆ) ಆವರಣದಲ್ಲಿ ಇರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯನ್ನು ಬೇರೆಡೆಗೆ ವರ್ಗಾಯಿಸುವಂತೆ ಆಗ್ರಹಿಸಿ ಸೋಮವಾರ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲೆ ಮುಖ್ಯದ್ವಾರಕ್ಕೆ ಬೀಗ ಹಾಕಿ ಪ್ರತಿಭಟಿಸಿದರು. ಇದನ್ನು ಖಂಡಿಸಿ ಬೆಳಿಗ್ಗೆ 9ಗಂಟೆಯಿಂದ 10.30ರವರೆಗೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳು ಕೂಡ ಪ್ರತಿಭಟನೆ ನಡೆಸಿದರು.

ಹಿನ್ನೆಲೆ: ಕಲ್ಯಾಬಾಗಿಲು ಬಳಿ ಇದ್ದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯನ್ನು ಕಳೆದ 4ವರ್ಷಗಳ ಹಿಂದೆ ಜಿಕೆಬಿಎಂಎಸ್‌ ಆವರಣಕ್ಕೆ ಸ್ಥಳಾಂತರಿಸಲಾಯಿತು. ಎರಡು ಶಾಲೆ ವಿದ್ಯಾರ್ಥಿಗಳು 4ವರ್ಷಗಳಿಂದಲೂ ಒಂದೇ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಬಂದರೂ ಯಾವುದೇ ಸಮಸ್ಯೆಗಳು ಇರಲಿಲ್ಲ. ಶೌಚಾಲಯ ಬಳಕೆ ಮತ್ತು ನೀರಿನ ತೊಟ್ಟಿ ಸ್ವಚ್ಛಗೊಳಿಸುವ ಮತ್ತು ಇತರೆ ಸಣ್ಣಪುಟ್ಟ ವಿಷಯಗಳಲ್ಲಿ ಇಬ್ಬರು ಮುಖ್ಯ ಶಿಕ್ಷಕರಲ್ಲಿ ಮನಸ್ತಾಪ ಉಂಟಾಯಿತು.

ಸರ್ಕಾರಿ ಪ್ರೌಢಶಾಲೆಗೆ ಬೇಕಾದ ಕಂಪ್ಯೂಟರ್‌ಗಾಗಿ ಮತ್ತೊಂದು ಕೊಠಡಿ ಬೇಕು ಎಂದು ಮೇಲಧಿಕಾರಿಗಳು ಜಿಕೆಬಿಎಂಎಸ್‌ ಮುಖ್ಯ ಶಿಕ್ಷಕರಿಗೆ ತಿಳಿಸಿದರು. ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಬೇರಡೆಗೆ ವರ್ಗಾಯಿಸಬೇಕು ಎಂದು ಬಿಇಒ ಅವರ ಗಮನಕ್ಕೆ ತರಲಾಗಿತ್ತು.

ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹೊರವಲಯಕ್ಕೆ ವರ್ಗಾಯಿಸಲು ಸಮಯಬೇಕು. ಎರಡು ಸರ್ಕಾರಿ ಶಾಲೆಗಳೇ ಆಗಿರುವುದರಿಂದ ಪರಸ್ಪರ ಸಹಮತದಿಂದ ಹೋಗುವಂತೆ ಬಿಇಒ ಸಿದ್ದೇಶ್ವರ.ಎಸ್‌.ಸೂಚನೆ ನೀಡಿದ್ದರು. ಸೋಮವಾರ ಬೆಳಿಗ್ಗೆ ಪ್ರೌಢಶಾಲೆ ಮಕ್ಕಳಿಗೆ ವಿಶೇಷ ತರಗತಿ ನಡೆಯಬೇಕಿತ್ತು. ಶಾಲೆ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆಗೆ ನಿಂತವರನ್ನು ಕಂಡು ವಿದ್ಯಾರ್ಥಿಗಳು ಕಂಗಾಲಾದರು.

ಎರಡು ಶಾಲಾಭಿವೃದ್ಧಿ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತ ‍ಪ‍ರಿಣಾಮ ಪರಿಸ್ಥಿತಿ ರಂಪಾಟವಾಯಿತು. ಉಭಯ ಶಾಲಾಭಿವೃದ್ಧಿ ಸಮಿತಿ ಸದಸ್ಯರ ನಡುವೆ ಪರಸ್ಪರ ವಾಗ್ವಾದವೂ ನಡೆಯಿತು. ಜಿಕೆಬಿಂಎಸ್‌ ಮಕ್ಕಳು ಕೊಠಡಿಗೆ ತೆರಳಿದರು. ಆದರೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಬಾಲಕಿಯರು ತೊಂದರೆಯಾಗುತ್ತಿದೆ ಸಮಸ್ಯೆ ಬಗೆಹರಿಯುವವರೆಗೆ ಕೊಠಡಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಕೆಂಪೇಗೌಡ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್‌.ಲೋಕೇಶ್‌, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಪಿ.ರೇಣುಕಾರಾಧ್ಯ, ಶಿಕ್ಷಕ ಎಂ,ಎನ್‌.ಚಂದ್ರಶೇಖರ್‌, ಜಿಕೆಬಿಎಂಎಸ್‌ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜು, ಸದಸ್ಯರಾದ ಜಯಪ್ರಕಾಶ್‌,ರಮೇಶ್‌, ಪುಷ್ಪಾವತಿ,ಆನಂದ್‌, ಶೋಭಾ, ಜಯಲಕ್ಷ್ಮೀ, ಸಾಕಮ್ಮ, ನೀಲಮ್ಮ ಮತ್ತು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಂಜುನಾಥ, ಸದಸ್ಯರಾದ ಗೌರಮ್ಮ, ರೇಷ್ಮಾಭಾನು ಇದ್ದರು.

ಬಿಇಒ ಸಂಧಾನ ಸಭೆ‌

ಎರಡು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳೊಂದಿಗೆ ಬಿಇಒ ಸಿದ್ದೇಶ್ವರ.ಎಸ್‌.ಸಂಧಾನ ಸಭೆ ನಡೆಸಿದರು. ಎರಡು ಸಮಿತಿಗಳ ಸಮಸ್ಯೆ ಆಲಿಸಿದರು. ನಂತರ ಮಾತನಾಡಿದ ಅವರು, ಇನ್ನೂ 3ತಿಂಗಳ ಒಳಗೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ನೂತನ ಕಟ್ಟಡ ನಿರ್ಮಿಸಲಾಗುವುದು. ಮಕ್ಕಳ ಹಿತದೃಷ್ಟಿಯಿಂದ ಮೊದಲಿದ್ದಂತೆ ಜಿಕೆಬಿಎಂಎಸ್‌ ಆವರಣದಲ್ಲಿಯೇ ಎರಡು ಶಾಲೆಗಳು ನಡೆಯಬೇಕು ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !