ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಶ್ಚಿಮಘಟ್ಟಗಳು ಭೂಮಿಯ ವಜ್ರಕವಚ’

Last Updated 8 ಜನವರಿ 2019, 14:45 IST
ಅಕ್ಷರ ಗಾತ್ರ

ಶಿವಮೊಗ್ಗ:ಶಬ್ದ, ಜಲ, ವಾಯು ಮಾಲಿನ್ಯ ಹೆಚ್ಚಾದರೆ ಪರಿಸರ ನಾಶ ಖಂಡಿತ ಎಂದುಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ಪರಿಸರ ಎಂಜಿನಿಯರ್ ಬಿ.ಪಿ. ಮನುಕುಮಾರ್ ಆತಂಕ ವ್ಯಕ್ತಪಡಿಸಿದರು.

ಶುಭಮಂಗಳ ಸಮುದಾಯ ಭವನದಲ್ಲಿ ಸುತ್ತೂರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1059ನೇ ಜಯಂತಿ ಮಹೋತ್ಸವ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ‘ಪರಿಸರ: ಸಂರಕ್ಷಣೆಯ ಸವಾಲು ಮತ್ತು ಸಾಧ್ಯತೆಗಳು’ ಕುರಿತ ಅನುಭಾವ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪರಿಸರದ ವಿಷಯ ಇಂದು ಸುದ್ದಿ ಮತ್ತು ಚರ್ಚೆಗಳಲ್ಲಿ ಮಾತ್ರ ಉಳಿದುಕೊಂಡಿದೆ. ಆದರೆ, ಪರಿಸರ ಸಂರಕ್ಷಣೆಯು ಕಾರ್ಯಗತವಾಗಬೇಕಿದೆ. ಎಲ್ಲಾದೇಶಗಳು ಪರಿಸರದ ಉಳಿವಿಗೆ ಶ್ರಮಿಸಬೇಕು ಎಂದರು.

‘ಪಶ್ಚಿಮಘಟ್ಟ ಮತ್ತು ನದಿಗಳು' ವಿಷಯದ ಕುರಿತು ಮಾತನಾಡಿದ ವಿಜ್ಞಾನ ಲೇಖಕ ಡಾ.ಶೇಖರ್ ಗೌಳೇರ್, ‘ನಮ್ಮ ಬದುಕಿನ ಎಲ್ಲಾ ಮಜಲುಗಳಲ್ಲಿ ಪಶ್ಚಿಮಘಟ್ಟಗಳು ಪ್ರಾಮುಖ್ಯ ವಹಿಸಿವೆ. ಪಶ್ಚಿಮಘಟ್ಟಗಳು ಭೂಮಿಯ ಆಳದಲ್ಲಿ ಗಟ್ಟಿಯಾದ ಪದರವನ್ನು ಹೊಂದಿದ್ದು, ಇದನ್ನು ಭೂಮಿಯ ವಜ್ರಕವಚ ಎಂದು ಅರ್ಥೈಸಲಾಗುತ್ತದೆ’ ಎಂದು ಹೇಳಿದರು.

‘ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಸುಮಾರು 1,600 ಕಿ.ಮೀ.ಉದ್ದಕ್ಕೆ ಈ ಪಶ್ಚಿಮಘಟ್ಟ ವ್ಯಾಪಿಸಿದೆ. ಇಲ್ಲಿಅನೇಕನದಿಗಳು ಉಗಮವಾಗುತ್ತವೆ. ಹಲವು ಜೀವ ವೈವಿಧ್ಯ ಹೊಂದಿದೆ. ಇಲ್ಲಿರುವ ಸಸ್ಯ ಹಾಗೂ ಪ್ರಾಣಿಗಳ ಸಂಕುಲ ಇನ್ನೆಲ್ಲೂ ಕಾಣಸಿಗುವುದಿಲ್ಲ. ಶೇ 75ರಷ್ಟು ಮಳೆ ಪಶ್ಚಿಮಘಟ್ಟದಿಂದಲೇ ಬರುತ್ತದೆ. ಮನುಷ್ಯನ ಸಹಜ ಜೀವನಕ್ಕೆ ತನಗೆ ಅರಿವಿಲ್ಲದಂತೆ ಕಾಪಾಡುವ ಈ ಪರ್ವತ ಶ್ರೇಣಿ ಇದೀಗ ಮನುಷ್ಯನ ದುರಾಸೆಗೆ ಬಲಿಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಶ್ಚಿಮಘಟ್ಟದ ಉಳಿವಿಗೆ ಸರ್ಕಾರಗಳು ಸ್ಪಂದಿಸಬೇಕು. ಆದರೆ, ಸರ್ಕಾರದ ನಿರ್ಧಾರಗಳು ಮಾರಕವಾಗುತ್ತಿವೆ. ಬಹುಜನರು ಇಂತಹ ಕಾನೂನುಗಳನ್ನು ಪ್ರೇರೇಪಿಸುತ್ತಿರುವುದು ವಿಪರ್ಯಾಸ.ಬಗರ್‌ಹುಕುಂ ಎನ್ನುವುದು ಒಂದು ಕಳ್ಳತನದ ಕೃಷಿ. ಆದರೆ, ಈಗ ಅದು ಅಕ್ರಮವಾಗದೆ ಸಕ್ರಮವಾಗಿದೆ. ಬೇಲಿ ಹಾಕುವವನೇ ಹೊಲದೊಡೆಯ ಎಂಬಂತಾಗಿದೆ. ನಮ್ಮ ರಾಜಕಾರಣಿಗಳು ಬಗರ್‌ಹುಕುಂ ಅನ್ನು ಪ್ರೋತ್ಸಾಹಿಸುವ ಮೂಲಕ ಕಾಡಿನ ನಾಶಕ್ಕೆ ನೇರ ಕಾರಣವಾಗುತ್ತಿದ್ದಾರೆ. ಸುಮಾರು 1.5 ಲಕ್ಷ ಎಕರೆ ಕಾಡು ಈಗ ಕಣ್ಮರೆಯಾಗಿದೆ. ಪ್ರಾಣಿಗಳು ನಾಡಿಗೆ ಬರತೊಡಗಿವೆ. ಪ್ರಾಣಿ ಸಂಕುಲವೇ ನಾಶವಾಗುತ್ತಿದೆ. ಹೀಗೆ ಪಶ್ಚಿಮಘಟ್ಟ ನಿಧಾನವಾಗಿ ಕಡಿಮೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹಿಂದೆ ಗಂಗಾ ಸ್ನಾನ, ತುಂಗಾ ಪಾನ ಎಂದು ನಾಣ್ನುಡಿ ಇತ್ತು. ಆದರೆ, ಈಗ ಭಾರತದ ನದಿಗಳೆಲ್ಲವೂ ಕಲುಷಿತಗೊಂಡಿವೆ. ಗಂಗಾ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ. ತುಂಗಾ ನದಿಯ ನೀರು ನಾವಿಂದು ಶುದ್ಧೀಕರಿಸಿ ಕುಡಿಯುವ ಸ್ಥಿತಿಗೆ ತಲುಪಿದೆ’ ಬೇಸರ ವ್ಯಕ್ತಪಡಿಸಿದರು.

ಪಶ್ಚಿಮ ಘಟ್ಟಗಳು ಅನೇಕ ಸಾಹಿತಿಗಳಿಗೆ ಸಾಹಿತ್ಯ ಬರೆಯಲು ಪ್ರೇರಣೆ ನೀಡಿವೆ. ಇಂತಹ ಪಶ್ಚಿಮಘಟ್ಟದ ಪರಿಸರಕ್ಕೆ ಹಾಗೂ ಮನುಷ್ಯನಿಗೆ ಹಾನಿಯಾಗದಂತಹ ಯೋಜನೆಗಳು ಬರಬೇಕಾಗಿದೆ ಎಂದು ಹೇಳಿದರು.

ಡಾ.ಎಲ್.ಕೆ. ಶ್ರೀಪತಿ ನಗರೀಕರಣ ಮತ್ತು ಮಾಲಿನ್ಯ ನಿಯಂತ್ರಣ ಕುರಿತು, ‘ಭದ್ರತೆಯ ಭಾವದಿಂದ ಕಟ್ಟಿದ ನಗರಗಳು ಇಂದು ಅಭದ್ರತೆಯಿಂದ ಕೂಡಿವೆ. ಯೋಜನಾಬದ್ಧವಾಗಿ ಕಟ್ಟಿದ ಹರಪ್ಪ ಹಾಗೂ ಮಹೆಂಜಾದಾರೊ ನಾಗರಿಕತೆಯಲ್ಲಿ ಮಾಲಿನ್ಯ ನಿಯಂತ್ರಣ, ತ್ಯಾಜ್ಯ ವಿಲೇವಾರಿ, ರಸ್ತೆ ನಿರ್ಮಾಣ, ಭದ್ರತಾ ವ್ಯವಸ್ಥೆ ಇತ್ತು. ಇಂದಿನ ನಗರಗಳು ಇವೆಲ್ಲವುಗಳ ಸಮಸ್ಯೆಯಿಂದ ಕೂಡಿವೆ’ ಎಂದರು.

ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಪ್ರತಿದಿನ ಅನೇಕರು ವಲಸೆ ಬರುತ್ತಿದ್ದಾರೆ. ಇದರಿಂದ ನಗರೀಕರಣವಾಗುತ್ತಿದೆ. ಹಾಗಾಗಿ ಇಲ್ಲಿ ವಸತಿ, ನೀರು, ಆಹಾರ ಸೇರಿ ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಇವುಗಳನ್ನು ಹಾಗೂ ಮಾಲಿನ್ಯವನ್ನು ನಿಯಂತ್ರಣ ಮಾಡದಿದ್ದರೆ ಪರಿಸರದ ಮೇಲೆ ಆಗುವ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಡೆ ಸಂಸ್ಥಾನದ ಮಹಂತ ಸ್ವಾಮಿ, ವಿರಕ್ತ ಮಠದ ಸಿದ್ದೇಶ್ವರ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಪರಿಸರ ತಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT