ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ತ್ಯಾಜ್ಯ ನಿರ್ವಹಣೆ ಜಾಗೃತಿ ಅಗತ್ಯ

ಕರ್ನಾಟಕ ಕಾಲೇಜಿನಲ್ಲಿ ಕಾರ್ಯಾಗಾರ: ನಗರಸಭೆ ಆಯುಕ್ತ ಮನೋಹರ ಹೇಳಿಕೆ
Last Updated 27 ಮಾರ್ಚ್ 2018, 5:35 IST
ಅಕ್ಷರ ಗಾತ್ರ

ಬೀದರ್: ‘ಇ-ತ್ಯಾಜ್ಯದ ಬಗೆಗೆ ಜನಜಾಗೃತಿ ಮೂಡಿಸುವ ಅಗತ್ಯ ಇದೆ’ ಎಂದು ನಗರಸಭೆ ಆಯುಕ್ತ ಮನೋಹರ ಹೇಳಿದರು.

ಇ-ತ್ಯಾಜ್ಯ ನಿರ್ವಹಣೆ ಕುರಿತು ನಗರದ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಿರುವ ಮೂರು ದಿನಗಳ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಇ–ತ್ಯಾಜ್ಯ ನಿರ್ವಹಣೆ ಮಾಹಿತಿ ಕೊರತೆಯ ಕಾರಣ ಪರಿಸರ, ಜನರ ಆರೋಗ್ಯ ಹಾಗೂ ನೀರಿನ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ’ ಎಂದು ತಿಳಿಸಿದರು.

‘ವಿಶ್ವಸಂಸ್ಥೆಯ ವರದಿ ಪ್ರಕಾರ ಬಳಸಿ ಎಸೆದ ಫೋನ್, ಲ್ಯಾಪ್‌ಟಾಪ್, ಫ್ರಿಡ್ಜ್, ಟಿ.ವಿ.ಗಳಂಥ ಎಲೆಕ್ಟ್ರಾನಿಕ್ ಉಪ ಕರಣಗಳನ್ನು ಸೂಕ್ತವಾಗಿ ನಿರ್ವ ಹಣೆ ಮಾಡದಿದ್ದಲ್ಲಿ ಭವಿಷ್ಯದಲ್ಲಿ ಅಪಾಯ ಎದುರಾಗಲಿದೆ’ ಎಂದು ಹೇಳಿದರು.

‘ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಉತ್ಪಾದನೆ ಹೆಚ್ಚಿದೆ. ಆದರೆ, ಮರು ಬಳಕೆ ಪ್ರಮಾಣ ಕಡಿಮೆ ಇದೆ. ಇ-ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅನೇಕ ನಿಯಮಗಳನ್ನು ರೂಪಿಸಿ ಜಾರಿಗೊಳಿಸಿದೆ’ ಎಂದು ತಿಳಿಸಿದರು.

‘ಆಯಾ ಇಲಾಖೆಗಳು ಸಂಬಂಧಪಟ್ಟ ಮೇಲಧಿಕಾರಿಗೆ ಇ-ತ್ಯಾಜ್ಯದ ಮಾಹಿತಿ ಕೊಟ್ಟು ಅವುಗಳ ಮರು ಬಳಕೆಗೆ ಮುಂದಾಗಬೇಕು. ಹಾಗಾದರೆ ಮಾತ್ರ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಪರಿಸರ ಉಳಿಸಲು ಸಹ ಸಾಧ್ಯವಾಗಲಿದೆ’ ಎಂದು ಹೇಳಿದರು.

ನಾಂದೇಡ್‌ನ ಎಸ್‍ಆರ್‌ಟಿಎಂ ವಿಶ್ವವಿದ್ಯಾಲಯದ ಡಾ.ವಿಕಾಸ ಹುಂಬೆ ಮಾತನಾಡಿ, ‘ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 52 ಕೋಟಿ ಟನ್ ಇ-ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಲ್ಲಿ ಶೇಕಡ 12.5ರಷ್ಟು ಮಾತ್ರ ಮರು ಬಳಕೆಯಾಗುತ್ತಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಇ-ತ್ಯಾಜ್ಯದ ಪ್ರಮಾಣ ಹೆಚ್ಚುತ್ತ ಹೋಗುತ್ತಿದೆ. ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಇರುವ ಸೀಸ, ಕ್ಯಾಡ್ಮಿಯಂ, ಪಾದರಸದಂಥ ಲೋಹ ಗಳು ಪರಿಸರದ ಮೇಲೆ ವ್ಯತಿರಿಕ್ತ ಪರಿ ಣಾಮ ಬೀರುತ್ತವೆ’ ಎಂದು ಹೇಳಿದರು.

ಕಾಲೇಜಿನ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಪ್ರೊ.ರಾಜೇಂದ್ರ ಬಿರಾದಾರ ಮಾತನಾಡಿ, ‘ವಿಶ್ವದ 184 ರಾಷ್ಟ್ರಗಳಲ್ಲಿ ಇ-ತ್ಯಾಜ್ಯ ಸಂಗ್ರಹವಾಗುತ್ತಿದೆ. ಭಾರತ ದಲ್ಲಿ ಪ್ರತಿ ವ್ಯಕ್ತಿಯಿಂದ ವರ್ಷಕ್ಕೆ 3.7 ಕೆ.ಜಿ. ಇ-ತ್ಯಾಜ್ಯ ಸಂಗ್ರಹವಾಗುತ್ತಿದೆ. ಅದರ ಮರು ಬಳಕೆ ಪ್ರಮಾಣ ಶೇ 30ರಿಂದ 35ರಷ್ಟಿದೆ’ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಎಂ.ಎಸ್. ಪಾಟೀಲ ಮಾತನಾಡಿ, ‘ಮೊಬೈಲ್‌ನಿಂದ ಉಂಟಾಗುವ ದುಷ್ಪರಿಣಾಮಗಳ ಬಗೆಗೆ ಎಲ್ಲರೂ ಎಚ್ಚರ ವಹಿಸಬೇಕು. ಇದರಿಂದ ರಕ್ತಹೀನತೆ, ನಿಶ್ಯಕ್ತಿ, ನರಗಳ ದೌರ್ಬಲ್ಯ, ರಕ್ತದ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಸಂಯೋಜನಾಧಿಕಾರಿ ಪ್ರೊ.ಅಭಯಕುಮಾರ ಪಾಟೀಲ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀಕಾಂತ ದೊಡ್ಡಮನಿ, ಡಾ.ಮಲ್ಲಿಕಾರ್ಜುನ ಹಂಗರಗಿ, ಡಾ.ಯು.ಎಸ್. ಪಾಟೀಲ, ಡಾ.ಜಗನ್ನಾಥ ಹೆಬ್ಬಾಳೆ, ಸಚಿನ್ ವಿಶ್ವಕರ್ಮ, ಪ್ರೊ.ವೈಜಿನಾಥ ಚಿಕ್ಕಬಸೆ, ಪ್ರೊ.ಅನಿಲಕುಮಾರ ಚಿಕ್ಕಮನ್ನೂರ, ಪ್ರೊ.ವಿನೋದ ಕಾಳೇಕರ, ಪ್ರೊ.ರವಿಚಂದ್ರ, ಪ್ರೊ.ಎ.ಡಿ. ಶೆಟಕಾರ, ಪ್ರೊ.ಎಸ್.ಎಸ್. ಅಂಗಡಿ, ಪ್ರೊ.ಸೋಮನಾಥ ಬಿರಾದಾರ, ಪ್ರೊ.ರಮೇಶ ಇದ್ದರು. ಪ್ರೊ.ಭರತರಾಜ ನಿರೂಪಿಸಿದರು. ಪ್ರೊ.ಅಶೋಕ ಹುಡೇದ್ ವಂದಿಸಿದರು.

**

ಆಧುನಿಕ ಯುಗದಲ್ಲಿ ಹೊಸ ಮಾದರಿಯ ತಂತ್ರಜ್ಞಾನ ಒಳಗೊಂಡ ಉಪಕರಣಗಳ ಬಳಕೆ ಹೆಚ್ಚಾಗಿದೆ. ಇ-ತ್ಯಾಜ್ಯ ನಿರ್ವಹಣೆ ವಿಶ್ವಕ್ಕೇ ಸವಾಲಾಗಿ ಪರಿಣಮಿಸಿದೆ.

-ಮನೋಹರ, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT