ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ: ಇನ್ನೂ ಸಾವಿರ ಅರ್ಜಿ ಬಾಕಿ!

ಈವರೆಗೆ ಶೇ 93ರಷ್ಟು ರೈತರಿಂದ ಅರ್ಜಿ ಸಲ್ಲಿಕೆ
Last Updated 11 ಜನವರಿ 2019, 13:38 IST
ಅಕ್ಷರ ಗಾತ್ರ

ರಾಮನಗರ: ಸಾಲ ಮನ್ನಾ ಯೋಜನೆಗೆ ಅರ್ಹವಾಗಿರುವ ರೈತರ ಅರ್ಜಿ ಸಲ್ಲಿಕೆ ಅವಧಿಯು ಮುಗಿದಿದ್ದು, ಇನ್ನೂ ಒಂದೂವರೆ ಸಾವಿರದಷ್ಟು ರೈತರು ಹಾಗೆಯೇ ಉಳಿದುಕೊಂಡಿದ್ದಾರೆ!

ರೈತರು ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದ ₨2 ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಮನ್ನಾದ ಲಾಭ ಪಡೆಯಲು ರೈತರು ತಾವು ಸಾಲ ಪಡೆದ ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಸೂಚಿಸಿತ್ತು. ಇದೇ ತಿಂಗಳ 5ರಂದೇ ಈ ಅರ್ಜಿ ಸಲ್ಲಿಕೆ ಅವಧಿ ಮುಗಿದಿದೆ. ಆದಾಗ್ಯೂ ಈಗಲೂ ಬ್ಯಾಂಕುಗಳು ರೈತರ ಅರ್ಜಿ ಸ್ವೀಕರಿಸುತ್ತಿವೆ.

ಜಿಲ್ಲೆಯಲ್ಲಿ 2.7 ಲಕ್ಷ ರೈತ ಕುಟುಂಬಗಳು ಇವೆ. ಇವರಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದ 11 ಸಾವಿರದಷ್ಟು ರೈತರಿಗೆ ಸರ್ಕಾರದ ಸಾಲ ಮನ್ನಾ ಪ್ರಯೋಜನ ದೊರೆಯುತ್ತಿದೆ. ಇವರಲ್ಲಿ ಈವರೆಗೆ 9500ಕ್ಕೂ ಹೆಚ್ಚು ರೈತರು ಅರ್ಜಿ ತುಂಬಿರುವುದಾಗಿ ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಾರೆ. ಉಳಿದ ಒಂದೂವರೆ ಸಾವಿರ ರೈತರು ಬಾಕಿ ಉಳಿದುಕೊಂಡಿದ್ದಾರೆ.

ಕೆಲವು ರೈತರು ಎರಡು–ಮೂರು ಬ್ಯಾಂಕುಗಳಲ್ಲಿ ಕೃಷಿ ಸಾಲ ಪಡೆದಿದ್ದಾರೆ. ಅಂತಹವರು ಗರಿಷ್ಠ ಸಾಲ ಇರುವ ಕಡೆಗೆ ಮನ್ನಾಕ್ಕೆ ಅರ್ಜಿ ಸಲ್ಲಿಸಿರುವ ಸಾಧ್ಯತೆ ಇದೆ. ಇಂತಹ ರೈತರನ್ನು ಕಳೆದರೂ ಇನ್ನೂ ಕನಿಷ್ಠ 600–700 ರೈತರು ಸಾಲಮನ್ನಾ ಲಾಭದಿಂದ ವಂಚಿತವಾಗುವ ಸಾಧ್ಯತೆ ಇದೆ.

ಅರ್ಜಿ ಸಲ್ಲಿಸುವ ವೇಳೆ ರೈತರಿಂದ ಆಧಾರ್, ಪಹಣಿ ಮೊದಲಾದ ದಾಖಲೆಗಳನ್ನು ಕೇಳುತ್ತಿದ್ದು, ಅವುಗಳನ್ನು ಒದಗಿಸಲು ರೈತರು ಹರಸಾಹಸ ಪಟ್ಟಿದ್ದಾರೆ. ಇದರಿಂದಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ವಿಳಂಬಗೊಂಡಿತ್ತು. ಕಡೆಯ ದಿನಗಳಲ್ಲಿ ಈ ಕಾರ್ಯವು ಚುರುಕು ಪಡೆದುಕೊಂಡಿದೆ. ಕೆಲವು ಬ್ಯಾಂಕುಗಳು ತಮ್ಮಲ್ಲಿ ಕೃಷಿ ಸಾಲ ಪಡೆದ ರೈತರಿಗೆ ದೂರವಾಣಿ ಕರೆ ಮಾಡಿ ಅರ್ಜಿ ತುಂಬಿಸಿಕೊಂಡಿವೆ.

ಹಂತಹಂತವಾಗಿ ಮನ್ನಾ?: ಸದ್ಯ ಅರ್ಜಿ ಸಲ್ಲಿಸಿದ ರೈತರ ಪೈಕಿ ಸರ್ಕಾರವು ಹಂತಹಂತವಾಗಿ ಸಾಲ ಮನ್ನಾ ಮಾಡುವ ಸಾಧ್ಯತೆ ಇದೆ. ಜನವರಿ ಅಂತ್ಯಕ್ಕೆ ಸಾಲ ಮನ್ನಾ ಪ್ರಕ್ರಿಯೆಯನ್ನೇ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಅಷ್ಟು ಅವಧಿಯೊಳಗೆ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ರೈತರಿಗೆ ಋಣಮುಕ್ತ ಪ್ರಮಾಣಪತ್ರ ದೊರೆಯುವುದು ಅನುಮಾನವಾಗಿದೆ.

**
ನೂರಾರು ಅರ್ಜಿ ತಿರಸ್ಕೃತ
ಸಾಲ ಮನ್ನಾಕ್ಕೆ ಸಲ್ಲಿಕೆಯಾದ ಅರ್ಜಿಗಳ ಪೈಕಿ ಒಂದು ಸಾವಿರದಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ ಎನ್ನಲಾಗಿದೆ.

ಸರ್ಕಾರವು ಕೇವಲ ಕೃಷಿ ಸಾಲ ಮಾತ್ರ ಮನ್ನಾ ಮಾಡಿದೆ. ಆದರೆ ಕೆಲವು ರೈತರು ಕೃಷಿಯೇತರ ಸಾಲವನ್ನೂ ಮುಂದಿಟ್ಟುಕೊಂಡು ಅರ್ಜಿ ಸಲ್ಲಿಸಿದ್ದಾರೆ. ಇಂತಹ ಅರ್ಜಿಗಳನ್ನು ಪರಿಶೀಲನೆ ವೇಳೆ ಬ್ಯಾಂಕ್‌ ಅಧಿಕಾರಿಗಳು ತಿರಸ್ಕೃತಗೊಳಿಸುತ್ತಿದ್ದಾರೆ. ಸರ್ಕಾರಕ್ಕೆ ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರಿಗೆ ಸಾಲಮನ್ನಾ ಲಾಭ ದೊರೆಯುವ ಸಾಧ್ಯತೆ ಕಡಿಮೆ ಇದೆ.

**
ಸಾಲ ಮನ್ನಾ ಅರ್ಜಿ ಸ್ವೀಕಾರ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈವರೆಗೆ ಶೇ 93ರಷ್ಟು ಅರ್ಹ ರೈತರು ಅರ್ಜಿ ಸಲ್ಲಿಸಿದ್ದಾರೆ
– ಸುಹಾಸ್ ಜೋಶಿ, ಲೀಡ್ ಬ್ಯಾಂಕ್‌ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT