ಶನಿವಾರ, ಅಕ್ಟೋಬರ್ 1, 2022
20 °C
ಮಲ್ಲಸಮುದ್ರ ಗ್ರಾಮದ ಮೊಹರಂ ಮೆರವಣಿಗೆ ವೇಳೆ ಘಟನೆ

ಚಾಕು ಇರಿತ ಪ್ರಕರಣ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ತಾಲ್ಲೂಕಿನ ಮಲ್ಲಸಮುದ್ರದಲ್ಲಿ ಮೊಹರಂ ಮೆರವಣಿಗೆ ಸಂದರ್ಭದಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೂರು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು ತಿಳಿಸಿದರು.

ನಗರದ ಎಸ್‌ಪಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಘಟನೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಸೋಮು ಗುಡಿ, ಸಲ್ಮಾನ್‌, ಯಲ್ಲಪ್ಪ, ರಾಮಕೃಷ್ಣ, ಶಿವು, ದಯಾನಂದ್‌ ಈ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಸೋಮು, ಸಲ್ಮಾನ್‌ ಮತ್ತು ಯಲ್ಲಪ್ಪನನ್ನು ಬಂಧಿಸಲಾಗಿದೆ’ ಎಂದು ಅವರು ತಿಳಿಸಿದರು. 

‘ಬಂಧಿತರ ಪೈಕಿ ಸೋಮು ಗುಡಿ ಶ್ರೀರಾಮಸೇನೆ ಕಾರ್ಯಕರ್ತ ಎಂದು ತಿಳಿದು ಬಂದಿದೆ. ಆದರೆ, ಈ ಘಟನೆ ಕೋಮುದ್ವೇಷದಿಂದ ನಡೆದಂತೆ ಕಂಡು ಬಂದಿಲ್ಲ. ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಸ್ನೇಹಿತರಾದ ಯಲ್ಲಪ್ಪ ಮತ್ತು ಸಲ್ಮಾನ್‌ ತಮಾಷೆಯಿಂದ ತಳ್ಳಾಡುತ್ತಿದ್ದಾಗ, ಸಲ್ಮಾನ್‌ ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಕಾಲು ತುಳಿದಿದ್ದಾನೆ. ಆಗ ಜಗಳ ಪ್ರಾರಂಭವಾಗಿದ್ದು, ಯಲ್ಲಪ್ಪನ ನೆರವಿಗೆ ಬಂದ ಸೋಮು ಗುಡಿ ತೌಸಿಫ್‌ ಹೊಸಮನಿಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ತೌಸಿಫ್‌ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಮಂಗಳವಾರ ರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಆತ ಚೇತರಿಸಿಕೊಳ್ಳಲು ಇನ್ನೂ ಒಂದು ವಾರ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ತಿಳಿಸಿದರು. 

‘ಸಣ್ಣ ವಿಷಯಕ್ಕೆ ಇಷ್ಟು ದೊಡ್ಡ ಗಲಾಟೆ ಆಗಿದ್ದು ಯಾಕೆ? ಚಾಕು ಇರಿತ ಘಟನೆ ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಯಿತಾ? ಅಥವಾ ಹಳೆಯ ವೈಷಮ್ಯದಿಂದ ನಡೆದಿದೆಯೇ? ಈ ಆಯಾಮದಲ್ಲಿ ತನಿಖೆ ಮುಂದುವರಿದಿದೆ. ಘಟನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದರೆ ಅವರನ್ನೂ ಬಂಧಿಸಲಾಗುವುದು’ ಎಂದು ತಿಳಿಸಿದರು.

ಮಲ್ಲಸಮುದ್ರ ಗ್ರಾಮದಲ್ಲಿ ಮಂಗಳವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಹರಿದಾಡುವ ಯಾವುದೇ ಸುಳ್ಳು ವಿಷಯಗಳನ್ನು ಸಾರ್ವಜನಿಕರು ನಂಬಬಾರದು. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವುದನ್ನು ತಪ್ಪಿಸಿ, ಶಾಂತಿ ಕಾಪಾಡಲು ಸಾಧ್ಯವಾಗುತ್ತದೆ.
ಶಿವಪ್ರಕಾಶ್‌ ದೇವರಾಜು, ಎಸ್‌ಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು