ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿಯಿಂದ ರೈತರ ಸಂಪತ್ತು ವೃದ್ಧಿಸಲಿ

ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಆಶಯ
Last Updated 3 ಜನವರಿ 2020, 12:32 IST
ಅಕ್ಷರ ಗಾತ್ರ

ತಿಕೋಟಾ: ‘ಕೃಷ್ಣಾ ನದಿಯ ನೀರಿನಿಂದ ಈ ಭಾಗವು ಹಸಿರಾಗಲಿ, ನೀರಿನಿಂದ ನೆಲದ ಹಾಗೂ ರೈತನ ಸಂಪತ್ತು ಹೆಚ್ಚಳವಾಗಲಿ’ ಎಂದು ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಆಶಿಸಿದರು.

ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಶುಕ್ರವಾರ ಕೃಷ್ಣಾ ನದಿ ನೀರು ಹರಿಸಿರುವ ಪ್ರಯುಕ್ತ ಕೆರೆಗೆ ಗಂಗಾಪೂಜೆ, ಬಿಎಲ್‌ಡಿಇ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಎಂ.ಎ.ಪಾಟೀಲ ನೆನಪಿನಲ್ಲಿ ಆರೋಗ್ಯ ಕೇಂದ್ರದ ಶಂಕು ಸ್ಥಾಪನೆ, ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ನೇರವೆರಿಸಿ ಅವರು ಮಾತನಾಡಿದರು.

‘ಮಣ್ಣಿನಲ್ಲಿ ಸಂಪತ್ತು ಇದೆ, ಆಕಾಶದಲ್ಲಿ ಆಲೋಚನೆಗಳಿವೆ, ಸೂರ್ಯನ ಬೆಳಕಿನಲ್ಲಿ ಜೀವವಿದೆ, ಇಂತಹ ಜಗತ್ತಿನಲ್ಲಿ ಬಾಳುವುದೇ ವೈಭವ. ಈ ಭೂಮಿಯನ್ನು ಹಸಿರಾಗಿಸಬೇಕು, ಈ ನೆಲವನ್ನು ಹಸಿರಾಗಿಸಲು ನಿಮ್ಮ ಶಾಸಕ ಎಂ.ಬಿ.ಪಾಟೀಲ ಅವರು ಈ ಭಾಗಕ್ಕೆ ನೀರು ಹರಿಸಿದ್ದಾರೆ’ ಎಂದು ಶ್ಲಾಘಿಸಿದರು.

‘ಭೂಮಿಯ ಮೇಲೆ ಶಾಶ್ವತವಾದುದು ಯಾವುದೂ ಇಲ್ಲ. ಸುಂದರವಾಗಿ ಬದುಕಬೇಕು, ಸತ್ಯವನ್ನು ನುಡಿಯಬೇಕು, ಇದೇ ಶಾಶ್ವತವಾಗಿ ಉಳಿಯುವುದು’ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ನೀರಾವರಿ ಪ್ರಯೋಜನ ಪಡೆದು ಉತ್ತಮ ಬೆಳೆ ಬೆಳೆಯಿರಿ, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕೊಡಿ, ಸಮಾಜದಲ್ಲಿ ಸುಸಂಸ್ಕೃತ ಯುವಕರನ್ನು ಬೆಳೆಸಿ’ ಎಂದು ಹೇಳಿದರು. ೧೮ ವರ್ಷಗಳ ಹಿಂದೆ ಬಿಜ್ಜರಗಿಗೆ ಬಂದಿದ್ದನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.

ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ‘ಸಿದ್ಧೇಶ್ವರ ಶ್ರೀಗಳ ಪ್ರೇರಣೆಯಿಂದಾಗಿ ₹3,600 ಕೋಟಿ ವೆಚ್ಚದಲ್ಲಿ ಕಾಲುವೆಗಳ ಮೂಲಕ ನೀರು ಹರಿಸುವ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಇದರಿಂದ 1.30 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರಕಲಿದೆ’ ಎಂದು ಹೇಳಿದರು.

‘ನಾವು ಮಾಡಿದ ನೀರಾವರಿ ಯೊಜನೆಗಳಿಂದ 2020ರ ಈ ವರ್ಷದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಇದು ಇಡೀ ದೇಶದಲ್ಲಿಯೇ ಮಾದರಿಯಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಹಳ್ಳ ಕೊಳ್ಳಗಳು ಇನ್ನೂ ಹರಿಯುತ್ತಿದ್ದು, ಹಳೆ ಕೊಳವೆಬಾವಿ, ಬಾವಿಗಳು ಮರುಪೂರಣವಾಗಿವೆ’ ಎಂದರು.

ರವಿ ಬಿರಾದಾರ, ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಮಾತನಾಡಿದರು.

ಎಂ.ಎ.ಪಾಟೀಲ ಅವರ ಹೆಸರಿನಲ್ಲಿ ಬಿಎಲ್‌ಡಿಇ ಆರೋಗ್ಯ ವಿಸ್ತರಣಾ ಕೇಂದ್ರದ ಕಟ್ಟಡ ಕಟ್ಟಲು ಅವರ ಪುತ್ರರೆಲ್ಲರೂ ಸೇರಿ ಭೂದಾನ ಮಾಡಿದರು ಹಾಗೂ ವೇದಿಕೆಯಲ್ಲಿಯೇ ಶಾಸಕ ಎಂ.ಬಿ.ಪಾಟೀಲ ಅವರಿಗೆ ಭೂದಾನ ಪತ್ರವನ್ನು ನೀಡಿದರು.

ಬಿಜ್ಜರಗಿ ಗ್ರಾಮಸ್ಥರು ಎಂ.ಬಿ.ಪಾಟೀಲ ಹಾಗೂ ಆಶಾ ಪಾಟೀಲ ದಂಪತಿಗೆ ಬೆಳ್ಳಿಯ ಕಳಸವನ್ನು ಕಾಣಿಕೆಯಾಗಿ ನೀಡಿದರು.

ಮಹಾರಾಷ್ಟ್ರದ ಜತ್ತ ವಿಧಾನಸಭಾ ಕ್ಷೇತ್ರದ ಶಾಸಕ ವಿಕ್ರಂದಾದಾ ಸಾವಂತ, ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ಎ.ಎಂ.ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎಂ.ಮಸಳಿ, ನೀರಾವರಿ ನಿಗಮದ ಎಂಜಿನಿಯರ್ ಶಂಕರ ರಾಠೋಡ, ಸೋಮನಿಂಗ ಪಾಟೀಲ, ಅಶೋಕ ಸವದಿ, ಸಿದ್ದಗಿರಿ ಬಿರಾದಾರ, ಓಗೆಪ್ಪ ಪಾಟೀಲ, ಅನ್ನಪೂರ್ಣ ಮಸಳಿ, ಎಚ್.ಜಿ.ಪಾಟೀಲ, ಎಂ.ಎಸ್.ಲೋಣಿ, ಎಂ.ಜಿ.ಗುಣಕಿ ಇದ್ದರು.

ರವಿ ಬಿರಾದಾರ ಸ್ವಾಗತಿಸಿದರು. ರಾಘವೇಂದ್ರ ಕುಲಕರ್ಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT