ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ 200 ಪ್ರಕರಣ; ಹೆಚ್ಚಿದ ಆತಂಕ

Last Updated 17 ಮಾರ್ಚ್ 2021, 3:56 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕೋವಿಡ್–19 ಪ್ರಸರಿಸುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ಕಳೆದ ಒಂದು ವಾರದಲ್ಲಿ 232 ಪ್ರಕರಣಗಳು ವರದಿಯಾಗಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.

ಕಳೆದ ಮೂರು– ನಾಲ್ಕು ತಿಂಗಳಲ್ಲಿ ದಿನಕ್ಕೆ ಸರಾಸರಿ 10ರಿಂದ 15 ಮಂದಿಗೆ ಸೋಂಕು ತಗುಲುವುದು ಕಂಡುಬರುತಿತ್ತು. ಆದರೆ ಒಂದು ವಾರದಲ್ಲಿ ಈ ಪ್ರಮಾಣ ಮೂರು ಪಟ್ಟು ಹೆಚ್ಚಳವಾಗಿದ್ದು, ದಿನಕ್ಕೆ ಸರಾಸರಿ 35ರಿಂದ 40 ಜನರಿಗೆ ಕೋವಿಡ್ ದೃಢಪಡುತ್ತಿದೆ. ಪ್ರತಿ ದಿನವೂ ಈ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಇಳಿಕೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ದಿನಗಳು ಕಳೆದಂತೆ ಏರಿಕೆಯತ್ತಲೇ ಮುಖಮಾಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿದೆ. ಅದರಲ್ಲಿ ತುಮಕೂರು ಜಿಲ್ಲೆ ಸಹ ಸ್ಥಾನ ಪಡೆದಿದೆ. ಸೋಂಕು ಹರಡುತ್ತಿರುವ ‘ಹಾಟ್ ಸ್ಪಾಟ್‌’ಗಳಲ್ಲಿ ಜಿಲ್ಲೆ ಮುಂಚೂಣಿಯಲ್ಲಿ ಇರುವುದು ಆತಂಕಕ್ಕೆ ಕಾರಣವಾಗಿದೆ. ವೇಗವಾಗಿ ಸೋಂಕು ಹರಡುತ್ತಿರುವ ಜಿಲ್ಲೆಗಳಿಗೆ ಕೇಂದ್ರ ತಂಡ ಎರಡು ವಾರಗಳ ಹಿಂದೆ ಭೇಟಿನೀಡಿ ಪರಿಶೀಲನೆ ನಡೆಸಿದೆ. ಕೋವಿಡ್ ಮೊದಲ ಅಲೆಯ ನಂತರ ಸೋಂಕು ಪ್ರಸರಿಸುವುದು ಸ್ವಲ್ಪ ಮಟ್ಟಿಗೆ ತಗ್ಗಿತ್ತು. ಆದರೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ನಿರೀಕ್ಷೆಯಷ್ಟು ಪ್ರಮಾಣದಲ್ಲಿ ಸೋಂಕು ಹರಡುವುದು ಕಡಿಮೆ ಆಗಿರಲಿಲ್ಲ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಲ್ಲೆಯ ಮೇಲೆ ಒಂದು ಕಣ್ಣಿಟ್ಟಿವೆ.

ಕೋವಿಡ್ ಎರಡನೇ ಅಲೆ ಆರಂಭವಾದ ನಂತರ ನಿಧಾನವಾಗಿ ವೇಗವನ್ನು ಪಡೆದುಕೊಂಡಿದೆ. ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದನ್ನು ಅಂಕಿ ಅಂಶಗಳೇ ದೃಢೀಕರಿಸುತ್ತವೆ. ಇದೇ ವೇಗ ಮುಂದುವರಿದರೆ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ವರದಿಯಾಗುತ್ತಿದ್ದ ಸಂಖ್ಯೆಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಈಗಿನಿಂದಲೇ ಎಚ್ಚರ ವಹಿಸಿದರೆ ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಾಸ್ಕ್ ಕಾಣುತ್ತಿಲ್ಲ: ಸೋಂಕು ಕಡಿಮೆಯಾಗುತ್ತಿದ್ದಂತೆ ಮುಖಕ್ಕೆ ಮಾಸ್ಕ್ ಧರಿಸುವುದನ್ನು ಜನರು ಮರೆತಂತೆ ಕಾಣುತ್ತಾರೆ. ಶಾಲಾ, ಕಾಲೇಜುಗಳಿಗೆ ಹೋಗುವ ಕೆಲವು ವಿದ್ಯಾರ್ಥಿ
ಗಳು ಅಲ್ಲಲ್ಲಿ ಮಾಸ್ಕ್ ಧರಿಸುವುದು ಕಂಡುಬರುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಸಂಚರಿಸುವುದನ್ನು ನೋಡಬಹುದಾಗಿದೆ.

ಹೋಟೆಲ್, ಅಂಗಡಿ, ಮಾಲ್, ಸಿನಿಮಾ ಮಂದಿರಗಳು, ಸರ್ಕಾರಿ ಕಚೇರಿಗಳಲ್ಲಿ ಈ ಹಿಂದೆ ಸ್ಯಾನಿಟೈಸರ್ ಬಳಕೆ ಕಂಡುಬರುತಿತ್ತು. ಈಗ ಬಹುತೇಕ ಕಡೆಗಳಲ್ಲಿ ಮರೆಯಾಗಿದೆ. ಕೆಲವೆಡೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಇದು ಮಾಯವಾಗಿದೆ.

ಕಾಣೆಯಾದ ಅಂತರ: ವ್ಯಕ್ತಿಗತ ಅಂತರವೂ ಕಂಡುಬರುತ್ತಿಲ್ಲ. ಜಾತ್ರೆ, ರಥೋತ್ಸವ, ಉತ್ಸವ, ಮದುವೆ, ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಒಂದೆಡೆ ಸೇರುವ ಸ್ಥಳಗಳಲ್ಲಿ ಒಬ್ಬರಿಗೊಬ್ಬರು ಅಂತರ ಪಾಲಿಸುತ್ತಿಲ್ಲ. ಜಾತ್ರೆ, ರಥೋತ್ಸವಗಳಲ್ಲಂತೂ ಜನರ ಗುಂಪು ಕಂಡುಬರುತ್ತಿದೆ. ಇದರಿಂದ ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ಸೋಂಕು ತಗಲುತ್ತಿದೆ.

ಕೊರೊನಾ ಸೋಂಕು ಹರಡದಂತೆ ಏನೆಲ್ಲ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸರ್ಕಾರ ಹೇಳಿತ್ತೊ ಅವೆಲ್ಲವೂ ಈಗ ಹಿಂದಕ್ಕೆ ಸರಿದಿವೆ. ಬಹುತೇಕರು ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ಸೋಂಕು ತೀವ್ರಗತಿಯಲ್ಲಿ ಪ್ರಸರಿಸಲು ಸಹಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT