ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ನಾಲ್ಕು ತಿಂಗಳಲ್ಲಿ 47 ಪೋಕ್ಸೊ ಪ್ರಕರಣಗಳು ದಾಖಲು

127 ಪ್ರಕರಣಗಳು ಬಾಕಿ
Published 18 ಆಗಸ್ಟ್ 2023, 14:39 IST
Last Updated 18 ಆಗಸ್ಟ್ 2023, 14:39 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 47 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದು, 127 ಪ್ರಕರಣಗಳು ಬಾಕಿ ಇವೆ. ಕೊರಟಗೆರೆ, ಮಧುಗಿರಿ, ಗುಬ್ಬಿ, ಕುಣಿಗಲ್‌ ತಾಲ್ಲೂಕುಗಳಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚಾಗಿ ನಡೆದಿವೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿಯ ಪರಿಶೀಲನಾ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಈ ಮಾಹಿತಿ ಹಂಚಿಕೊಂಡರು. ಪೋಕ್ಸೊ ಕಾಯ್ದೆ ಕುರಿತು ಅರಿವು ಮೂಡಿಸಲು ಜಿಲ್ಲೆಯ ಎಲ್ಲ ಶಾಲಾ–ಕಾಲೇಜುಗಳಲ್ಲಿ ನಾಮಫಲಕ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಉಪಕಾರ ಯೋಜನೆಯಡಿ 3 ಮಕ್ಕಳು, ಹೆಣ್ಣು ಮಕ್ಕಳ ಅನುಪಾಲನಾ ಗೃಹ ಯೋಜನೆಯಡಿ 6 ಮಕ್ಕಳು ದಾಖಲಾಗಿದ್ದಾರೆ. ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ 10 ಜನ ಫಲಾನುಭವಿಗಳು ಮಾಸಿಕ ₹3,500 ಧನ ಸಹಾಯ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಪ್ರತಿ ಶಾಲೆಯಲ್ಲಿ ಮೀನಾ ತಂಡ ರಚಿಸಿದ್ದು, ಇದರ ಮೂಲಕ ವಿದ್ಯಾರ್ಥಿಗಳಿಗೆ ಪೋಕ್ಸೊ ಹಾಗೂ ಬಾಲ್ಯ ವಿವಾಹ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಡಿಡಿಪಿಐ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಭಿಕ್ಷಾಟನೆ ಹೆಚ್ಚಾಗಿದ್ದು, ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡವರನ್ನು ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ‘ಜಿಲ್ಲೆಯಲ್ಲಿ ಪೋಕ್ಸೊ, ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ಶಾಲಾ–ಕಾಲೇಜು ಹಂತದಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಕೆಲವು ಶಿಕ್ಷಕರಿಗೆ ಪೋಕ್ಸೊ ಕಾಯ್ದೆ ಕುರಿತು ಸರಿಯಾದ ಮಾಹಿತಿ ಇಲ್ಲ. ಮೊದಲು ಶಿಕ್ಷಕರಿಗೆ ಕಾಯ್ದೆ ಬಗ್ಗೆ ತಿಳಿಸಬೇಕು’ ಎಂದರು.

ಡಿವೈಎಸ್‌ಪಿ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್‌.ಶ್ರೀಧರ್, ಡಿಎಚ್‍ಒ ಡಾ.ಡಿ.ಎನ್‌.ಮಂಜುನಾಥ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನುಷಾ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಗಂಗಪ್ಪ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT