ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯದ ನಡುವೆಯೂ ‘ಶ್ರೀನಿವಾಸ ವಿಜಯ’

ಅವಕಾಶ ತಪ್ಪಿಸಿಕೊಂಡ ರವಿಕುಮಾರ್‌ ಗೌಡ, ಮೂರನೇ ಸ್ಥಾನಕ್ಕೆ ಎನ್‌.ಶಿವಣ್ಣ
Last Updated 16 ಮೇ 2018, 10:05 IST
ಅಕ್ಷರ ಗಾತ್ರ

ಮಂಡ್ಯ: ಜೆಡಿಎಸ್‌ ಮುಖಂಡರ ಬಂಡಾಯದ ನಡುವೆಯೂ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಶ್ರೀನಿವಾಸ್‌ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ ವಿರುದ್ಧ ಕ್ಷೇತ್ರದಲ್ಲಿ ಇದ್ದ ಆಡಳಿತ ವಿರೋಧಿ ಅಲೆ ಅವರನ್ನು ಗೆಲುವಿನ ದಡ ಸೇರಿಸಿದೆ.

ಟಿಕೆಟ್‌ ಹಂಚಿಕೆ ವಿಚಾರ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಗ್ಗಂಟಾಗಿತ್ತು. 12ಕ್ಕೂ ಹೆಚ್ಚು ಮಂದಿ ಟಿಕೆಟ್‌ ಅಪೇಕ್ಷಿಸಿದ್ದರು. ಕಡೆಗೂ ಟಿಕೆಟ್‌ ಪಡೆಯಲು ಯಶಸ್ವಿಯಾದ ಎಂ.ಶ್ರೀನಿವಾಸ್‌ಗೆ ಮುಖಂಡರ ಬಂಡಾಯ ಕಂಗೆಡಿಸಿತ್ತು. ಐದು ರೂಪಾಯಿ ವೈದ್ಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಮತ್ತೊಬ್ಬ ಮುಖಂಡ ಎನ್‌.ಶಿವಣ್ಣ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಇದು ಶ್ರೀನಿವಾಸ್‌ಗೆ ನುಂಗಲಾಗದ ತುತ್ತಾಗಿತ್ತು. ಬಂಡಾಯದ ಬಿಸಿಯ ನಡುವೆಯೂ ಶ್ರೀನಿವಾಸ್‌ ಜಯಗಳಿಸಿದ್ದು ಮೂರನೇ ಬಾರಿ ಶಾಸಕರಾಗುವ ಅವಕಾಶ ಪಡೆದಿದ್ದಾರೆ.

ಶ್ರೀನಿವಾಸ್‌ ಅವರ ಸೌಮ್ಯ ಸ್ವಭಾವ ಮೊದಲಿನಿಂದಲೂ ಜನರ ಮೆಚ್ಚುಗೆ ಗಳಿಸಿದೆ. ಹೋರಾಟದ ಹಿನ್ನೆಲೆಯಿಂದ ಬಂದ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಇದು ಕೂಡ ಅವರ ಗೆಲುವಿನ ಮುಖ್ಯ ಕಾರಣ. ಸದಾ ಎಚ್‌.ಡಿ.ಕುಮಾರಸ್ವಾಮಿ ಮಂತ್ರ ಪಠಿಸುತ್ತಿದ್ದ ಅವರು ‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನನಗೆ ಬೆಂಬಲ ಕೊಡಿ’ ಎಂದೇ ಪ್ರಚಾರ ನಡೆಸುತ್ತಿದ್ದರು. ಅಳಿಯ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್‌.ಯೋಗೇಶ್‌ ಬೆಂಬಲದೊಂದಿಗೆ ಅಬ್ಬರದ ಪ್ರಚಾರ ನಡೆಸಿದ ಅವರು ವಿಜಯ ಪತಾಕೆ ಹಾರಿಸಿದ್ದಾರೆ.

ಅವಕಾಶ ತಪ್ಪಿಸಿಕೊಂಡ ಗಣಿಗ: 
ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದ ಗಣಿಗ ಪಿ ರವಿಕುಮಾರ್‌ ಶ್ರೀನಿವಾಸ್‌ ವಿರುದ್ಧ ಸೋಲೊಪ್ಪಿಕೊಂಡಿದ್ದಾರೆ. ಟಿಕೆಟ್‌ಗಾಗಿ ಅಬ್ಬರ ಸೃಷ್ಟಿಸಿದ್ದ ಅವರು ಪ‍್ರಚಾರ ಮಾಡುವಲ್ಲಿ ಹಿಂದೆ ಬಿದ್ದಿದ್ದರು. ‘ಶ್ರೀನಿವಾಸ್‌ಗೆ ವಯಸ್ಸಾಗಿದೆ, ಆರೋಗ್ಯ ಸರಿ ಇಲ್ಲ’ ಎಂಬ ವಿಷಯ ಕ್ಷೇತ್ರದೆಲ್ಲೆಡೆ ನಕಾರಾತ್ಮಕ ಭಾವ ಸೃಷ್ಟಿಸಿತ್ತು. ಇದು ರವಿಕುಮಾರ್‌ ಅವರಿಗೆ ದೊಡ್ಡ ಅವಕಾಶ ಸೃಷ್ಟಿಸಿತ್ತು.

ಆದರೆ ಅವರು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲಿಲ್ಲ. ಜೊತೆಗೆ ಕಾಂಗ್ರೆಸ್‌ ಹಿರಿಯ ಮುಖಂಡರ ಮುನಿಸು ಕೂಡ ರವಿಕುಮಾರ್‌ ಸೋಲಿಗೆ ಕಾರಣವಾಯಿತು. ಟಿಕೆಟ್‌ ಘೋಷಣೆಯಾದ ನಂತರ ಕಾಂಗ್ರೆಸ್‌ ಮುಖಂಡರು ಪ್ರಚಾರದಲ್ಲಿ ಭಾಗವಹಿಸದೇ ಇರುವುದು ಸೋಲಿಗೆ ಮುಖ್ಯ ಕಾರಣವಾಯಿತು.

ಚುನಾವಣೆ ಸ್ಪರ್ಧಿಸುವ ಕಾರಣದಿಂದಲೇ ರವಿಕುಮಾರ್‌ಗೌಡ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಿರುಪತಿ ದೇವಾಲಯದ ಮಾದರಿಯಲ್ಲಿ ಸೆಟ್‌ ಹಾಕಿ ‘ಶ್ರೀನಿವಾಸ ಕಲ್ಯಾಣ’ ಮಾಡಿ ವೈಭವ ಸೃಷ್ಟಿಸಿದ್ದರು. ಆದರೆ ಅದೀಗ ‘ಶ್ರೀನಿವಾಸ ವಿಜಯ’ವಾಗಿದೆ.

ಶಿವಣ್ಣಗೆ ಮೂರನೇ ಸ್ಥಾನ :
ಜಿಲ್ಲೆಯಲ್ಲಿ ಕಮಲ ಅರಳಿಸಲು ಭರವಸೆಯಾಗಿದ್ದ ಎನ್‌.ಶಿವಣ್ಣ 32,064 ಮತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ಹೋರಾಟದ ಮೂಲಕ ಟಿಕೆಟ್‌ ಗಳಿಸಿದ್ದ ಅವರು ಪ್ರಚಾರದಲ್ಲಿ ಎಲ್ಲಾ ಅಭ್ಯರ್ಥಿಗಳಿಗಿಂತಲೂ ಮುಂದಿದ್ದರು. ಸರಳ ಸ್ವಭಾವ, ಜನರ ಪ್ರೀತಿಯ ಮೂಲಕ ಅವರು ಗಮನ ಸೆಳೆದಿದ್ದರು. ಆದರೆ ಆ ಪ್ರೀತಿ ಮತವಾಗಿ ಪರಿವರ್ತನೆಯಾಗದ ಕಾರಣ ಶಿವಣ್ಣ ಸೋಲು ಅನುಭವಿಸಿದ್ದಾರೆ. ರಾಜ್ಯ ಮಟ್ಟದ ಹಲವು ಮುಖಂಡರು ಅವರ ಪರವಾಗಿ ಪ್ರಚಾರ ನಡೆಸಿ ಗಮನ ಸೆಳೆದಿದ್ದರು. ಆದರೆ ಅವರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಎಂಇಪಿಯಿಂದ ಸ್ಪರ್ಧೆ ಮಾಡಿದ್ದ ಕಾವೇರಿ ಶ್ರೇಯಾ 670 ಮತ ಪಡೆದು ಗಮನ ಸೆಳೆದಿದ್ದಾರೆ.

₹ 5 ವೈದ್ಯರಿಗೆ 10,564 ಮತ

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಐದು ರೂಪಾಯಿ ವೈದ್ಯ ಡಾ.ಎಸ್‌.ಸಿ.ಶಂಕರೇಗೌಡ 10,564 ಮತ ಗಳಿಸುವ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರು ಟಿಕೆಟ್‌ ಕೈತಪ್ಪಿದ ನಂತರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ತಮ್ಮದೇ ಆದ ಭಿನ್ನ ಶೈಲಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ಅವರು ಪ್ರಚಾರ ಸ್ಥಳದಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಿ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT