ಗುರುವಾರ , ಜನವರಿ 30, 2020
20 °C
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ದೊಡ್ಡಗುಣಿ ಸಮೀಪ ಖಾಸಗಿ ಬಸ್– ಓಮ್ನಿ ನಡುವೆ ಡಿಕ್ಕಿ, ಹೊತ್ತಿ ಉರಿದ ವಾಹನಗಳು

ಬಸ್- ಕಾರು ಡಿಕ್ಕಿ ಮೂವರು ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ದೊಡ್ಡಗುಣಿ ಸಮೀಪ ಶನಿವಾರ ರಾತ್ರಿ ಖಾಸಗಿ ಬಸ್ ಹಾಗೂ ಮಾರುತಿ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ವಾಹನಗಳು ಭಸ್ಮವಾಗಿ, ಮೂವರು ಸಜೀವ ದಹನವಾದರು.

ಬೆಂಗಳೂರಿನಿಂದ ಶಿವಮೊಗ್ಗದ ಕಡೆ ಸಾಗುತ್ತಿದ್ದ ಶ್ರೀಶ ಟ್ರಾವೆಲ್ಸ್‌ ಖಾಸಗಿ ಬಸ್ ಎದುರಿನಿಂದ ಬರುತ್ತಿದ್ದ ಮಾರುತಿ ಓಮ್ನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ 2 ವಾಹನಗಳು ಹೊತ್ತಿ ಉರಿದಿವೆ. ಕಾರಿನಲ್ಲಿದ್ದ 7 ಜನರ ಪೈಕಿ ಮೂವರು ಸ್ಥಳದಲ್ಲಿಯೇ ಸುಟ್ಟು ಕರಕಲಾಗಿದ್ದಾರೆ. 4 ಮಂದಿಗೆ ಗಂಭೀರ ಗಾಯಗಳಾಗಿವೆ. ಒಬ್ಬರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಮೂವರು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ನಿಟ್ಟೂರಿಗೆ ಸಮೀಪದ ಎನ್‌.ಹೊಸಹಳ್ಳಿ ಗ್ರಾಮದ ವಸಂತಕುಮಾರ್ (55), ನರಸಮ್ಮ(60), ರಾಮಯ್ಯ(62) ಎಂದು ಗುರುತಿಸಲಾಗಿದೆ. ಬಸ್‌ನಲ್ಲಿ 45 ಮಂದಿ ಪ್ರಯಾಣಿಸುತ್ತಿದ್ದು, ಬೆಂಕಿ ತಗುಲಿದ ತಕ್ಷಣ ಕೆಳಗಿಳಿದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆಯ ವಿವರ: ಎನ್.ಹೊಸಹಳ್ಳಿಯ ನರಸಮ್ಮ ಅವರಿಗೆ ಶನಿವಾರ ರಾತ್ರಿ 2 ಗಂಟೆಯ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ನಿಟ್ಟೂರು ಆಸ್ಪತ್ರೆಗೆ ಮಾರುತಿ ಓಮ್ನಿಯಲ್ಲಿ ಕರೆದೊಯ್ಯುವ ವೇಳೆ ಅಪಘಾತ ಸಂಭವಿಸಿದೆ. ಅಪಘಾತ ನಡೆದ ಸ್ಥಳವು ಕೆಲಕಾಲ ಸಂಪೂರ್ಣ ಸ್ಮಶಾನದಂತಾಗಿತ್ತು. ಸುಟ್ಟು ಕರಕಲಾದ ಶವಗಳು, ವಾಹನಗಳು, ರಕ್ತಸಿಕ್ತ ದೇಹಗಳು ನೋಡುಗರ ಮನಕಲಕಿತು.

ಪ್ರತಿಕ್ರಿಯಿಸಿ (+)