ಬುಧವಾರ, ನವೆಂಬರ್ 25, 2020
25 °C
ತುಮಕೂರು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಎಚ್ಚರಿಕೆ

ಬಹಿರಂಗ ಪ್ರಚಾರ ನಡೆಸಿದರೆ ಕ್ರಮ: ತುಮಕೂರು ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಶಿರಾ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರ ಮುಕ್ತಾಯವಾಗಿದೆ. ಯಾವುದೇ ರಾಜಕೀಯ ಪಕ್ಷಗಳು, ಉಮೇದುವಾರರು, ಕಾರ್ಯಕರ್ತರು ಅಥವಾ ಇತರರು ಬಹಿರಂಗ ಚುನಾವಣಾ ಪ್ರಚಾರ ನಡೆಸಕೂಡದು. ಬಹಿರಂಗ ಪ್ರಚಾರ ಕೈಗೊಂಡಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಎಚ್ಚರಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹೊರಗಿನ ಕಾರ್ಯಕರ್ತರು, ಮುಖಂಡರು ಕ್ಷೇತ್ರ ಬಿಡುವಂತೆ ಆದೇಶಿಸಲಾಗಿದೆ. ನ.3ರಂದು  ಮತದಾನಕ್ಕೆ 330 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನ.3ರ ಮಧ್ಯರಾತ್ರಿ 12ರವರೆಗೆ ಶಿರಾ ಕ್ಷೇತ್ರದಲ್ಲಿ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಆದೇಶವು ನವೆಂಬರ್ 3ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6
ಗಂಟೆಯವರೆಗೆ ನಡೆಯಲಿರುವ ಮತದಾನ ಕೇಂದ್ರಗಳ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು
ತಿಳಿಸಿದರು.

ಕೋವಿಡ್-19 ನೀತಿ ಸಂಹಿತೆ ಉಲ್ಲಂಘನೆ ಮಾಡಿದ 19 ಪ್ರಕರಣಗಳನ್ನು ದಾಖಲಿಸಲಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿವೆ. ಇವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ನಂತರ ಮತದಾರರಿಗೆ ಒಂದು ಕೈಗವಸು ನೀಡಲಾಗುವುದು. ಕೋವಿಡ್ ಸೋಂಕಿತರು/ಶಂಕಿತರ ಮತದಾನಕ್ಕಾಗಿ ಮತದಾನದ ಅವಧಿಯ ಕೊನೆಯ 1 ಗಂಟೆ ಮೀಸಲಿಡಲಾಗಿದೆ. ಇದಕ್ಕಾಗಿ ಮತಗಟ್ಟೆಯ ಸಿಬ್ಬಂದಿಗಳಿಗೆ ಪಿ.ಪಿ ಕಿಟ್‍ಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಮತದಾನದ ನಂತರ ಮತ ಯಂತ್ರಗಳನ್ನು ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಾಪಿಸಿರುವ ಎಣಿಕಾ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದರು. ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಕಾರಣ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಚುನಾವಣಾ ಕರ್ತವ್ಯ ನಿರ್ವಹಿಸಿರುವ ಅಧಿಕಾರಿ, ಸಿಬ್ಬಂದಿ ಹಾಗೂ ತಾಲ್ಲೂಕಿನ ಶೇ 20ರಷ್ಟು ಮಂದಿಗೆ ನ.4ರ ನಂತರ ಕೋವಿಡ್ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಚುನಾವಣಾ ಶಾಖೆಯ ಸಿಬ್ಬಂದಿ ನಾಗಭೂಷಣ್‌, ಮಂಜುನಾಥ್ ಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು