ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ಯಾಳ ಬೆಟ್ಟದಲ್ಲಿ ಅಸಾದಿ ಪದಗಳ ಗಮ್ಮತ್ತು

Last Updated 22 ಸೆಪ್ಟೆಂಬರ್ 2019, 14:05 IST
ಅಕ್ಷರ ಗಾತ್ರ

ತುಮಕೂರು: ಅಲ್ಲಿ ಅಸಾದಿಗಳು ಅಂತರಗಟ್ಟೆ ಮಾರಮ್ಮನ ಪದಗಳನ್ನು ಹಾಡುತ್ತಿದ್ದರೆ ಜಿಲ್ಲೆಯ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಆ ಪದಗಳ ಅರ್ಥ ಮತ್ತು ಹೊಸ ಹೊಳಹುಗಳನ್ನು ಹೆಕ್ಕಿ ತೆಗೆಯುತ್ತಿದ್ದರು. ಅಸಾದಿಗಳ ಅಲಗೆಯ ಆರ್ಭಟ ಹೆಚ್ಚಿ ಪದಗಳು ಜೋರಾದಂತೆ ನೆರೆದಿದ್ದವರ ಉತ್ಸಾಹವೂ ಇಮ್ಮಡಿ ಆಗುತ್ತಿತ್ತು.

ಗುಬ್ಬಿ ತಾಲ್ಲೂಕು ಹತ್ಯಾಳ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ ಅಂತರಗಟ್ಟೆ ಅಮ್ಮನ ಅಸಾದಿಗಳಾದ ಅಂತರಗಟ್ಟೆ ರಾಜಣ್ಣ ಮತ್ತು ಆಸಂದಿ ರಾಜಣ್ಣ ತಮ್ಮ ಅಸಾದಿ ಪದಗಳನ್ನು ಮೈ ಮರೆತು ಹಾಡಿದರು. ಅಲ್ಲಿ ಮಾತಿಗಿಂತ ಅಸಾದಿ ಪದಗಳು ಹರಡಿದ್ದವು. ಅಸಾದಿಗಳ ಬಾಯಿಂದ ಹೊರಡುತ್ತಿದ್ದ ಪದಗಳು ಶೀಲ–ಅಶ್ಲೀಲಕ್ಕಿಂತ ಆಲೋಚನಾ ಕ್ರಮಗಳನ್ನು ಉದ್ದೀಪಿಸುತ್ತಿದ್ದವು.

ಅಸಾದಿ ಪದ ಆರಂಭಕ್ಕೂ ಮುನ್ನ ಮಾತನಾಡಿದ ಹಿರಿಯ ವಿಮರ್ಶಕ ನಟರಾಜ್ ಬೂದಾಳು, ‘ಅಸಾದಿ ಸಂಪ್ರದಾಯ ಶಾಕ್ತ ಆರಾಧನೆಯ ಒಂದು ಭಾಗ. ಶ್ರಮಧಾರೆಯ ಪಂಚಮಕಾರಗಳ ಆರಾಧನೆಯ ಒಂದು ಅಂಶವಾದ ಮೈಥುನವನ್ನು (ಮದ್ಯ, ಮತ್ಸ, ಮೈಥುನ, ಮಾಂಸ ಮತ್ತು ಮುದ್ರೆ) ಇವರು ಆರಾಧನೆಯ ಭಾಗವಾಗಿ ಬಳಸುತ್ತಾರೆ. ನಾವು ಆರಾಧಿಸುವ ಫಲವಂತಿಕೆಯು ಸಂಕೇತನಗಳನ್ನು ವೈಭವೀಕರಿಸಿ ಕಾವ್ಯಾತ್ಮಕವಾದ ರೂಪವನ್ನು ಕೊಡುತ್ತಾರೆ’ ಎಂದು

‘ಇವರು ಶ್ಲೀಲ ಅಶ್ಲೀಲಗಳನ್ನು ದಾಟಿದ ನಿಸರ್ಗ ಸಹಜ ಕ್ರಿಯೆಯೊಂದನ್ನು ಸಮೂಹಕ್ಕೆ ಮತ್ತು ತಾವು ಆರಾಧಿಸುವ ಸಂಕೇತಕ್ಕೆ ಅರ್ಪಿಸುತ್ತಾರೆ. ಇಲ್ಲಿ ಕಾವ್ಯ, ನಾದ, ಲಯ ಮತ್ತು ರಸದ ಉತ್ಕರ್ಷದ ಅವಸ್ಥೆಯೊಂದು ಏರ್ಪಡುತ್ತದೆ’ ಎಂದರು.

ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ‘ಅಸಾದಿಗಳಿಗೆ ಹಳೆಯದನ್ನು ಬಳಸಿ ಹೊಸದನ್ನು ಕಟ್ಟುವ ಶಕ್ತಿ ಇದೆ. ಇಂದಿನ ಕಾಲಕ್ಕೆ ತಕ್ಕುದಾದ ಪದಗಳನ್ನು ಕಟ್ಟಿ. ಅಸಾದಿ ಪದಗಳು ಹೊಸ ಹೊಳಹುಗಳನ್ನು ನೀಡುತ್ತವೆ. ಮತ್ತು ನಾವು ದೇವರು, ದೇವತೆಗಳ ಬಗ್ಗೆ ಅಂದುಕೊಂಡಿದ್ದಕ್ಕಿಂತ ಮತ್ತೊಂದು ಬಗೆಯನ್ನು ತೋರುತ್ತವೆ ಎಂದು ಹೇಳಿದರು.

ಲೇಖಕ ರಾಮಲಿಂಗಪ್ಪ ಟಿ.ಬೇಗೂರು, ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು, ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕುಂದೂರು ತಿಮ್ಮಯ್ಯ, ಉಜ್ಜಜ್ಜಿ ರಾಜಣ್ಣ, ಕಂಟಲಗೆರೆ ಗುರುಪ್ರಸಾದ್, ಭಗತ್ ಕುಂದೂರು, ಬಸವರಾಜು, ಯಶ್ವಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT