ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೆ ಗೌರವಕ್ಕೆ ಅರ್ಹನಾಗುವ ಯತ್ನ: ಮಾಜಿ ಶಾಸಕ ವೈಎಸ್‌ವಿ ದತ್ತ ಅಭಿಪ್ರಾಯ

Last Updated 13 ಮಾರ್ಚ್ 2021, 3:48 IST
ಅಕ್ಷರ ಗಾತ್ರ

ಶಿರಾ: ‘ಜನಪದರ ಗೌರವ ಅಥವಾ ಗಣೆ ಗೌರವಕ್ಕೆ ನಾನು ಅರ್ಹನೊ, ಅಲ್ಲವೊ ಎನ್ನುವುದು ಗೊತ್ತಿಲ್ಲ. ಆದರೆ ಸ್ವೀಕರಿಸಿದ ನಂತರ ಮುಂದಿನ ದಿನಗಳಲ್ಲಿ ಇದಕ್ಕೆ ಅರ್ಹನಾಗುವುದಕ್ಕೆ ಪ್ರಯತ್ನಿಸುತ್ತೇನೆ’ ಎಂದು ಗಣೆ ಗೌರವ ಸ್ವೀಕರಿಸಿದ ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.

ತಾಲ್ಲೂಕಿನ ಗೌಡಗೆರೆ ಹೋಬಳಿ ಜುಂಜಪ್ಪನ ಗುಡ್ಡೆಯಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಗುರುವಾರ ರಾತ್ರಿ ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಶಿವೋತ್ಸವ ಕಾರ್ಯಕ್ರಮದಲ್ಲಿ ಗಣೆಗೌರವ ಸ್ವೀಕರಿಸಿ ಮಾತನಾಡಿದರು.

ರೈತ ಹೋರಾಟಗಾರ ಕಡಿದಾಳ್ ಶಾಮಣ್ಣ, ರಂಗಕರ್ಮಿ ಪ್ರಸನ್ನ ಅಂತಹ ಮಹಾನ್ ನಾಯಕರು ಸ್ವೀಕರಿಸಿದ ಗಣೆ ಗೌರವಕ್ಕೆ ಈ ಬಾರಿ ರಾಜಕಾರಣಿಯನ್ನು ಆಯ್ಕೆ ಮಾಡಿದ್ದೀರಿ. ಈ ಪ್ರಶಸ್ತಿಗೆ ನಾನು ಆರ್ಹನೇ ಎನ್ನುವ ಪ್ರಶ್ನೆ ಮೂಡುತ್ತಿದೆ. ರಾಜಕಾರಣದ ಕಲುಷಿತ ವಾತಾವರಣದಲ್ಲಿ ಯಾರು ಸಹ ನೂರರಷ್ಟು ಪ್ರಾಮಾಣಿಕವಾಗಿರಲು ಸಾಧ್ಯವಿಲ್ಲ. ಆದರೆ ಗರಿಷ್ಟ ಮಟ್ಟದಲ್ಲಿ ಪ್ರಾಮಾಣಿಕತೆ ಕಾಪಾಡಿಕೊಳ್ಳಬೇಕು ಎಂದರು.

ವಿಧಾನಸಭೆ ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದ ಪರಿಚಯವಿದೆ. ಪ್ರತಿ ಗ್ರಾಮವನ್ನು ಸುತ್ತಿದ್ದೇನೆ. ಹೋರಾಟದ ಮನೋಭಾವ ಇಲ್ಲಿನ ಜನರಲ್ಲಿದೆ ಎಂದರು.

‘ಜುಂಜಪ್ಪ ಸ್ವಾಮಿಯ ಮಹಿಮೆಯನ್ನು ಓದಿ ತಿಳಿದುಕೊಂಡಿದ್ದ ನನಗೆ ಬಹಳ ಕುತೂಹಲವಿತ್ತು. ಇಂದು ಜುಂಜಪ್ಪ ಸ್ವಾಮಿ ಸನ್ನಿಧಿಯಲ್ಲಿ ಗಣೆ ಗೌರವ ಪಡೆಯುತ್ತಿರುವುದು ಸಂತಸ ತಂದಿದೆ’ ಎಂದರು.

ಜಾನಪದ ಸಂಸ್ಕೃತಿ ಉಳಿಸುವುದು ಯುವಜನತೆಯ ಕರ್ತವ್ಯ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಕುರಿಯ ಹಾಲು ಕರೆಯುವ ಮೂಲಕ ಶಿವೋತ್ಸವಕ್ಕೆ ಚಾಲನೆ ನೀಡಲಾಯಿತು. ಶಿವೋತ್ಸವದ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ಕಾರ್ಯಕ್ರಮಕ್ಕೆ ಪದಗಾರ ಕೊರ್ಲೆ ತಿಮ್ಮಣ್ಣ ಜುಂಜಪ್ಪನ ಪದ ಹಾಡಿದರೆ ವಿಭೂತಿ ತಿಮ್ಮಣ್ಣ ಗಣೆ ವಾದನ ನುಡಿಸುವ ಮೂಲಕ ಸಾಥ್ ನೀಡಿದರು. ಪ್ರೊ.ಹೊನ್ನಗಾನಹಳ್ಳಿ ಕರಿಯಣ್ಣ ಜುಂಜಪ್ಪನ ಬಗ್ಗೆ ಜನಸಾಮಾನ್ಯರ ಆಡುಭಾಷೆಯಲ್ಲಿ ತಿಳಿಸಿದರು.

ಚಿತ್ರದುರ್ಗ ಜಿಲ್ಲೆ ಕಸಾಪ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಜುಂಜಪ್ಪನ ಪಶುಪಾಲನೆ ಕುರಿತು ಮಾತನಾಡಿದರು.

ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ರಂಗ ಸಮೂಹದವರು ವಾಮನ ಮಾಸ್ತ್ರ ರಚಿಸಿರುವ ಮಂಜು ಬಡಿಗೇರ ನಿರ್ದೇಶನದಲ್ಲಿ ‘ಸಂದೇಹ ಸಾಮ್ರಾಜ್ಯ’ ನಾಟಕ ಪ್ರದರ್ಶಿಸಿದರು.

ಭೂತಪ್ಪನಗುಡಿಯ ರಂಗಪ್ಪಸ್ವಾಮಿ ಮತ್ತು ತಂಡದವರು ತತ್ವಪದ ಭಜನಾ ಮೇಳ ಅಹೋರಾತ್ರಿ ಜರುಗಿತು.

ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ, ಗೋಮಾರದಹಳ್ಳಿ ಮಂಜುನಾಥ್, ರಂಗನಾಥ್, ಡಾ.ಡಿ.ಎಂ.ಗೌಡ, ಗಣೇಶ್, ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT