ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನಲ್ಲಿ ಬಸವ ಜಯಂತಿ; ಎಲ್ಲೆಡೆ ಬೆಳಗಿದ ಬಸವನ ಬೆಳಗು

ರಾಜಕೀಯ ಪಕ್ಷಗಳು, ಸಂಘ–ಸಂಸ್ಥೆಗಳಿಂದ ಸರಳವಾಗಿ ಬಸವೇಶ್ವರ ಜಯಂತಿ ಆಚರಣೆ
Last Updated 26 ಏಪ್ರಿಲ್ 2020, 16:54 IST
ಅಕ್ಷರ ಗಾತ್ರ

ತುಮಕೂರು: ನಗರದ ಬಸವಾಭಿಮಾನಿಗಳು ಭಾನುವಾರ ಬಸವ ಜಯಂತಿಯನ್ನು ಸರಳವಾಗಿ ಮನೆಗಳಲ್ಲೇ ಆಚರಿಸಿದರು.

ರಾಜಕೀಯ ಪಕ್ಷಗಳ ಕಚೇರಿ, ಸಂಘ–ಸಂಸ್ಥೆಗಳ ಒಳಾಂಗಣದಲ್ಲಿಯೂ ಸಾಂಕೇತಿಕವಾಗಿ ಜಯಂತಿ ನಡೆಯಿತು.

ಲಿಂಗಾಯತ/ವೀರಶೈವ ಸಮುದಾಯದವರು ಮನೆಗಳಲ್ಲಿ ಬೆಳಿಗ್ಗೆ ಲಿಂಗಪೂಜೆಯ ಬಳಿಕ, ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ವಚನಗಳನ್ನು ವಾಚಿಸುವ ಮೂಲಕ ಜಯಂತಿಗೆ ಚಿಂತನಾ ತತ್ವಗಳ ಮೆರುಗು ತುಂಬಿದರು.

ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 15 ಜನ ಮಾತ್ರ ಭಾಗವಹಿಸಿದ್ದರು. ಅಂತರ ಕಾಯ್ದುಕೊಂಡು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ವೀರಶೈವ ಸಮಾಜದಿಂದ ನಡೆಯುತ್ತಿರುವ ದಾಸೋಹದಲ್ಲಿ 5,000 ಆಹಾರ ಪೊಟ್ಟಣಗಳಲ್ಲಿ ಸಿಹಿಬೂಂದಿ ಹಂಚಲಾಯಿತು.

ಕಲ್ಯಾಣ ಸಮಾಜದ ಹರಿಕಾರ: ಸರ್ವೋದಯ ತತ್ವವನ್ನು ಶತಮಾನಗಳ ಹಿಂದೆಯೇ ಪ್ರತಿಪಾದಿಸಿದ ಬಸವೇಶ್ವರರು ಕಲ್ಯಾಣ ಸಮಾಜದ ಹರಿಕಾರರು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ವೈ.ಎಸ್.ಸಿದ್ದೇಗೌಡ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾನಿಲಯದ ಬಸವೇಶ್ವರ ಅಧ್ಯಯನ ಕೇಂದ್ರದಿಂದ ನಡೆದ ಜಯಂತಿಯಲ್ಲಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಶರಣರ ಚಿಂತನೆಗಳು ನಮಗೆ ದಾರಿದೀಪವಾಗಬೇಕು. ಜಾತಿ ಭಾವನೆ, ಸೋಮಾರಿತನ, ಅಸಡ್ಡೆಯಿಂದ ಹೊರಬಂದು ಅಭಿವೃದ್ಧಿಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.

ಬಸವೇಶ್ವರ ಅಧ್ಯಯನ ಪೀಠದ ನಿರ್ದೇಶಕ ಡಿ.ವಿ.ಪರಮಶಿವಮೂರ್ತಿ ವಚನಗಳನ್ನು ವಾಚಿಸಿದರು.ಕುಲಸಚಿವ ಕೆ.ಎನ್.ಗಂಗಾನಾಯಕ್, ಪರೀಕ್ಷಾಂಗ ಕುಲಸಚಿವ ಎಂ.ಕೊಟ್ರೇಶ್ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಕಚೇರಿಯಲ್ಲಿ ಬಸವೇಶ್ವರ ಭಾವಚಿತ್ರ ಪೂಜಿಸಲಾಯಿತು. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಚ್.ಎಸ್.ರುದ್ರೇಶ್, ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಜಿಲ್ಲಾ ಘಟಕದ ಅಧ್ಯಕ್ಷ ಸುಮುಖ್ ಕೊಂಡವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾತೇಗೌಡ, ಸೋಮಶೇಖರ್, ಸತೀಶ್, ನೂರುಲ್ಲಾ, ಸಲ್ಮಾನ್ ಇದ್ದರು.

ತುಮಕೂರಿನ ಸ್ವಾಭಿಮಾನ ಜನಮತ ಚಾರಿಟಬಲ್‌ ಟ್ರಸ್ಟ್‌ನಿಂದ ಅಶೋಕನಗರದಲ್ಲಿ ಜಯಂತಿ ಹಮ್ಮಿಕೊಳ್ಳಲಾಗಿತ್ತು.

ಹೆಬ್ಬೂರು: ಅಂಬೇಡ್ಕರ್ ಭವನದಲ್ಲಿ ಹೆಬ್ಬೂರಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷ, ಸದಸ್ಯರು ಹಾಗೂ ಅಧಿಕಾರಿಗಳು, ಹಾಗೂ ಉಪ–ತಹಶೀಲ್ದಾರ್ ಭೂಮೇಶ್ ನಾಯಕ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ದೇಣಿಗೆ: ಜಯಂತಿ ಪ್ರಯುಕ್ತ ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ವೀರಶೈವ ಸಮಾಜದ ದಾಸೋಹ ಕಾರ್ಯಕ್ಕೆ ₹12,000 ದೇಣಿಗೆ ನೀಡಲಾಯಿತು.

*

ಜಿಲ್ಲಾಡಳಿತದಿಂದ ಸರಳ ಕಾರ್ಯಕ್ರಮ

ಜಿಲ್ಲಾಡಳಿತದಿಂದ ಬಸವಣ್ಣರ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಸವೇಶ್ವರ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಅವರು ಪುಷ್ಪಾರ್ಚನೆ ಮಾಡಿದರು.

ಬಸವಣ್ಣ ಅವರ ‘ಅರಿವೇ ಗುರು’ ಎಂಬ ವಚನವು ಪ್ರಸಕ್ತ ದಿನಗಳಲ್ಲಿ ತುಂಬಾ ಉಪಯುಕ್ತವಾಗಿದೆ. ಕೊರೊನಾ ತಡೆಗಟ್ಟಲು ಅರಿವು ಬಹುಮುಖ್ಯವಾಗಿದೆ. ಎಲ್ಲರೂ ಅರಿವಿನಿಂದ ಹೆಜ್ಜೆ ಇಟ್ಟರೆ ಇಂತಹ ಸೋಂಕು ತಡೆಗಟ್ಟಬಹುದು ಎಂದರು.

ಉಪವಿಭಾಗಾಧಿಕಾರಿ ಅಜಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ ಹಾಜರಿದ್ದರು.

*

ಬಸವಣ್ಣ ಹೇಳಿದಂತೆ ನಡೆಯುತ್ತಿದ್ದೇವೆಯೇ?

ಸಕಲ ಜೀವಿಗಳಿಗೆ ಲೇಸನು ಬಯಸುವ, ಜನರ ಕಾಯಕ ಚಳವಳಿಗೆ ಮಹತ್ವ ನೀಡಿದ ಬಸವಣ್ಣನನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಬಸವಣ್ಣ ಹೇಳಿರುವುದು ಒಂದಾದರೆ ನಾವು ಆಚರಿಸುವುದು ಮತ್ತೊಂದಾಗಿದೆ ಎಂದು ಪರಿಸರ ಹೋರಾಟಗಾರ ಸಿ.ಯತಿರಾಜು ಹೇಳಿದರು.

ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಸಮುದಾಯ, ಸಿಐಟಿಯು ಮತ್ತು ಜನಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಬಸವ ಜಯಂತಿಯಲ್ಲಿ ಅವರು ಮಾತನಾಡಿದರು.

ಇಂದು ಧರ್ಮಗಳ ಅಪಮೌಲ್ಯೀಕರಣ ನಡೆಯುತ್ತಿದೆ. ಮತ, ಧರ್ಮಕ್ಕಿಂತ ಪಂಥವಾದ ಜಾಸ್ತಿಯಾಗುತ್ತಿದೆ. ಜನರನ್ನು ವಿಭಜಿಸಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ಪಂಡಿತ್ ಜವಾಹರ್, ಸ್ಲಂ ಜನಾಂದೋಲ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಸಮುದಾಯದ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT