ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರಿಕೆ ನೀಡಿದರೂ ಮೂಡದ ಜಾಗ್ರತೆ

Last Updated 8 ಡಿಸೆಂಬರ್ 2021, 4:57 IST
ಅಕ್ಷರ ಗಾತ್ರ

ತುಮಕೂರು: ಶಾಲಾ, ಕಾಲೇಜುಗಳು, ವಸತಿ ನಿಲಯಗಳು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ನಿಯಮ ಪಾಲನೆಗೆ ಕಟ್ಟುನಿಟ್ಟಿನ ಆದೇಶವಿದ್ದರೂ ಅದರ ಪಾಲನೆಗೆ ವಿದ್ಯಾರ್ಥಿಗಳು ಆಸಕ್ತಿ ತೋರದಿರುವುದು
ಕಂಡುಬಂತು.

ಮಂಗಳವಾರ ‘ಪ್ರಜಾವಾಣಿ’ ಹಲವು ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗಳಿಗೆ ಭೇಟಿನೀಡಿದ ಸಮಯದಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿದ್ದವು.

ಮುಕ್ತವಾಗಿ ಸುತ್ತಾಡಿಕೊಂಡು, ಕಾಲೇಜು ಹತ್ತಿರ ಬಂದ ಕೂಡಲೇ ಮಾಸ್ಕ್ ಧರಿಸುತ್ತಿದ್ದರು. ಒಂದೇ ಬೆಂಚ್‌ನಲ್ಲಿ ನಾಲ್ಕೈದು ಜನರನ್ನು ಕೂರಿಸಿ ಬೋಧನೆ ಮಾಡುತ್ತಿರುವುದು, ಸ್ಯಾನಿಟೈಸರ್ ಬಳಕೆ ಕಣ್ಮರೆಯಾಗಿರುವುದು ನಗರದ ಹಲವು ಶಾಲಾ, ಕಾಲೇಜುಗಳಲ್ಲಿ ಕಂಡ ಬಂದ ದೃಶ್ಯಗಳು.

ಪ್ರಮುಖ ವಿದ್ಯಾ ಸಂಸ್ಥೆಗಳು, ಕೆಲವೇ ಕೆಲವು ಖಾಸಗಿ‌ ಶಾಲೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಲಾ, ಕಾಲೇಜುಗಳಲ್ಲಿ ಕೋವಿಡ್ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ತರಗತಿಗಳಲ್ಲಿ ಮಾಸ್ಕ್ ಧರಿಸಿ ಶಿಸ್ತಿನಿಂದ ಪಾಠ ಕೇಳುವ ಮಕ್ಕಳು ಹೊರ ಬಂದ ಮೇಲೆ ಮಾಸ್ಕ್ ತೆಗೆದು ಓಡಾಡುತ್ತಿದ್ದಾರೆ.

ಶಾಲಾ, ಕಾಲೇಜು ಮಕ್ಕಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ‌. ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಎಷ್ಟೇ ಪ್ರಯತ್ನ ನಡೆದರೂ, ಜಿಲ್ಲಾ ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಸರ್ಕಾರಿ ಕಾಲೇಜುಗಳಲ್ಲಂತೂ ಕೋವಿಡ್ ಸಂಪೂರ್ಣವಾಗಿ ಮಾಯವಾಗಿದೆ ಎಂಬ ಆಲೋಚನೆಯಲ್ಲಿ ಇದ್ದಂತೆ ಕಾಣುತ್ತಿದೆ. ನಗರದ ಸಾರ್ವಜನಿಕ ಸ್ಥಳಗಳಲ್ಲೂ ಮುಂಜಾಗ್ರತಾ ಕ್ರಮಗಳನ್ನು ಅಷ್ಟಾಗಿ ಪಾಲಿಸುತ್ತಿಲ್ಲ.

ಸ್ವಚ್ಛತೆಗೆ ಆದ್ಯತೆ: ನಗರದ ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪ್ರತಿ ದಿನ ಕೊಠಡಿಗಳ ಸ್ವಚ್ಛತೆ, ಸ್ಯಾನಿಟೈಸರ್ ವಿತರಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ಕೊಠಡಿಗೆ 4ರಿಂದ 6 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಿ, ಅಂತರ ಕಾಪಾಡುವ ಕೆಲಸ ಮಾಡಲಾಗುತ್ತಿದೆ. ಹಾಸ್ಟೆಲ್‌ಗೆ ಪ್ರವೇಶ ನೀಡುವ ಮುನ್ನ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಪಡೆಯಲಾಗಿದೆ. ವಿದ್ಯಾರ್ಥಿ ನಿಲಯದ ಅಡುಗೆ ಸಿಬ್ಬಂದಿ ಸೇರಿದಂತೆ ಎಲ್ಲರೂ ಕೋವಿಡ್ ಲಸಿಕೆ
ಪಡೆದುಕೊಂಡಿದ್ದಾರೆ.

ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಬೇರೆಯವರಿಗೆ ನಿರ್ಬಂಧ ವಿಧಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿರುವ ನಿರ್ಲಕ್ಷ್ಯ‌ ಭಾವನೆ ಮುಂದುವರೆದರೆ ಹಿಂದಿನ ಪರಿಸ್ಥಿತಿ ಮರುಕಳಿಸಬಹುದು ಎಂದು ಪ್ರಾಧ್ಯಾಪಕರೊಬ್ಬರು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ಬೆಂಚ್‌ಗೆ ನಾಲ್ಕೈದು ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ. ಬಿಷಪ್ ಸಾರ್ಜಂಟ್ ಶಾಲೆಯಲ್ಲಿ ಮಾಸ್ಕ್ ಧರಿಸಿ, ಅಂತರ ಕಾಪಾಡುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿಕ್ಷಕರೇ ಮುಂದೆ ನಿಂತು ನಿಯಮ ಪಾಲನೆ ಮಾಡುತ್ತಿದ್ದು ಕಂಡುಬಂತು.

ನಗರ ಸಾರಿಗೆ ಬಸ್‌ಗಳಲ್ಲಿ ಸದಾ ಜನಸಂದಣಿ.ನಿಂತು ಕೊಳ್ಳಲೂ ಜಾಗ ಇರುವುದಿಲ್ಲ. ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಹಲವರು ಮಾಸ್ಕ್ ಧರಿಸುವುದಿಲ್ಲ. ಈ ರೀತಿಯಾದರೆ
ಕೋವಿಡ್ ಬರದೆ ಇನ್ನೇನು ಎಂದು ಪ್ರಯಾಣಿಕ ಮಲ್ಲಿಕಾರ್ಜುನ್ ಪ್ರಶ್ನಿಸಿದರು.

ಮಾಸ್ಕ್ ಮಾಯ

ಕಾಲೇಜಿನಲ್ಲಿ ಎಲ್ಲರೂ ಮಾಸ್ಕ್ ಧರಿಸುವುದಿಲ್ಲ. ಒಂದೇ ಬೆಂಚ್‌ನಲ್ಲಿ ನಾಲ್ಕೈದು ಜನರಿಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ. ಕೋವಿಡ್ ಬರುವ ಭಯ ಶುರುವಾಗಿದೆ.

ವಿದ್ಯಾರ್ಥಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು


ಆತಂಕ ಕಾಡುತ್ತಿದೆ

ಭೌತಿಕ ತರಗತಿಗಳು ನಡೆಯುತ್ತಿರುವುದರಿಂದ ಕಲಿಯಲು ಒಳ್ಳೆಯ ಅವಕಾಶ. ಮತ್ತೆ ಲಾಕ್‌ಡೌನ್ ಮಾಡಿದರೆ ಕಷ್ಟಕರವಾಗಲಿದೆ. ಈಗಾಗಲೇ ಅರ್ಧ ಕಾಲೇಜು ಜೀವನ ಲಾಕ್‌ಡೌನ್ ಮಧ್ಯೆಯೇ ಕಳೆದು ಹೋಗಿದೆ. ಒಂದಿಷ್ಟು ದಿನ ಮಾಸ್ಕ್, ಸ್ಯಾನಿಟೈಸರ್ ಬಳಸುವುದು ಉತ್ತಮ.

ವೆಂಕಟೇಶ್, ವಿದ್ಯಾರ್ಥಿ

ನಿಯಮ ಕಟ್ಟುನಿಟ್ಟು

ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ಸ್ಯಾನಿಟೈಸರ್ ಬಳಕೆ ಮಾಡಲಾಗುತ್ತಿದೆ. ತರಗತಿಗಳಲ್ಲಿ ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಿ ಹಾ
ಜರಾಗುವಂತೆ ಸೂಚಿಸಲಾಗಿದೆ. ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗಿದೆ.

ವಸಂತ್, ವಿದ್ಯಾರ್ಥಿ, ವಾಲ್ಮೀಕಿ ಐಟಿಐ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT