ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಬೀನ್ಸ್ ಬೆಲೆ ಕೆ.ಜಿ ₹200!

ಸೊಪ್ಪು ದರ ದುಪ್ಪಟ್ಟು; ಕೋಳಿ, ಮೀನು ದುಬಾರಿ
Published 12 ಮೇ 2024, 5:46 IST
Last Updated 12 ಮೇ 2024, 5:46 IST
ಅಕ್ಷರ ಗಾತ್ರ

ತುಮಕೂರು: ಬೀನ್ಸ್ ಬೆಲೆ ಗಗನಮುಖಿಯಾಗಿದ್ದರೆ, ಸೊಪ್ಪು ಒಮ್ಮೆಲೆ ದುಪ್ಪಟ್ಟಾಗಿದ್ದು, ಕೋಳಿ, ಮೀನು ಮತ್ತೆ ಏರಿಕೆ ದಾಖಲಿಸಿದೆ. ಹಣ್ಣು, ಬೇಳೆ, ಧಾನ್ಯಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಬೀನ್ಸ್ ತುಟ್ಟಿ: ಹಿಂದಿನ ವಾರ ಇಳಿಕೆ ಕಂಡಿದ್ದ ಬೀನ್ಸ್ ಈ ವಾರ ಮತ್ತೆ ತುಟ್ಟಿಯಾಗಿದೆ. ಕೆ.ಜಿ ₹100–120ರಿಂದ ಒಮ್ಮೆಲೆ ಕೆ.ಜಿ ₹180–200ಕ್ಕೆ ಜಿಗಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹200 ದಾಟಿದ್ದು, ಜನರು ಅಡುಗೆಯಲ್ಲಿ ಬಳಸುವುದನ್ನೇ ಕಡಿಮೆ ಮಾಡಿದ್ದಾರೆ. ಸಾಕಷ್ಟು ಜನರು ಕೊಳ್ಳುವುದನ್ನೇ ನಿಲ್ಲಿಸಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಕೆ.ಜಿ ₹50–60 ಇತ್ತು. ಬೇಸಿಗೆ ಬಿಸಿಲ ಝಳಕ್ಕೆ ಬೀನ್ಸ್ ಗಿಡ ಒಣಗುತ್ತಿದ್ದು, ಹೊಸದಾಗಿ ಗಿಡ ನೆಟ್ಟರೂ ತಾಪಮಾನದಿಂದ ಬದುಕಿ ಉಳಿಯುತ್ತಿಲ್ಲ. ಈಗಷ್ಟೇ ಮಳೆಯ ಮುನ್ಸೂಚನೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ವಾತಾವರಣದಲ್ಲಿ ಉಷ್ಣಾಂಶ ಕಡಿಮೆಯಾದರೆ ಮಾತ್ರ ಗಿಡ ರಕ್ಷಿಸಿಕೊಳ್ಳಬಹುದು. ಇನ್ನೂ ಕೆಲವು ದಿನಗಳ ಕಾಲ ಬೆಲೆ ತಗ್ಗುವ ಸೂಚನೆ ಕಾಣುತ್ತಿಲ್ಲ.

ಹಸಿರು ಮೆಣಸಿನಕಾಯಿ ಮತ್ತಷ್ಟು ಖಾರವಾಗಿದ್ದು, ಕೆ.ಜಿ ₹70–80ಕ್ಕೆ ತಲುಪಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ₹100ರ ವರೆಗೂ ಮಾರಾಟವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದಾಖಲೆಯ ಹೆಚ್ಚಳ ಎಂದು ಹೇಳಲಾಗುತ್ತಿದೆ. ಆಲೂಗಡ್ಡೆ, ಹಾಗಲಕಾಯಿ ದರವೂ ಏರಿಕೆಯಾಗಿದೆ. ಕ್ಯಾರೇಟ್, ಈರುಳ್ಳಿ, ಎಲೆಕೋಸು ಅಲ್ಪ ತಗ್ಗಿದೆ. ಈರುಳ್ಳಿ ರಫ್ತಿಗೆ ಅವಕಾಶ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ತುಟ್ಟಿಯಾಗಬಹುದು ಎಂದು ಹೇಳಲಾಗುತ್ತಿದೆ.

ಸೊಪ್ಪು ದುಬಾರಿ: ಕೆಲ ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಸೊಪ್ಪಿನ ಧಾರಣೆ ಈಗ ಒಮ್ಮೆಲೆ ದುಪ್ಪಟ್ಟಾಗಿದ್ದು, ಬಹುತೇಕ ಸೊಪ್ಪುಗಳ ದರ ಕೆ.ಜಿ ₹100 ದಾಟಿದೆ. ತಾಪಮಾನ ಇಳಿಕೆಯಾಗಿ, ಸೊಪ್ಪಿನ ಇಳುವರಿ ಸುಧಾರಿಸಿದರೆ ಬೆಲೆ ನಿಯಂತ್ರಣಕ್ಕೆ ಬರಬಹುದು. ಪ್ರಸ್ತುತ ಕೊತ್ತಂಬರಿ ಸೊಪ್ಪು ಕೆ.ಜಿ ₹80–100, ಸಬ್ಬಕ್ಕಿ ಕೆ.ಜಿ ₹80–100, ಮೆಂತ್ಯ ಸೊಪ್ಪು ಕೆ.ಜಿ ₹100–150, ಪಾಲಕ್ ಸೊಪ್ಪು (ಕಟ್ಟು) ₹40ಕ್ಕೆ ಏರಿಕೆಯಾಗಿದೆ.

ಹಣ್ಣು: ಏರಿಕೆ ಕಂಡಿದ್ದ ಸೀಬೆ ಹಣ್ಣು ಮತ್ತೆ ಕಡಿಮೆಯಾಗಿದ್ದು, ಏಲಕ್ಕಿ ಬಾಳೆಹಣ್ಣು ತುಸು ಹೆಚ್ಚಳವಾಗಿದೆ. ದ್ರಾಕ್ಷಿ ಹಣ್ಣು ಇಳಿಕೆಯಾಗಿದೆ. ಮಾವಿನ ಹಣ್ಣು ಮಾರುಕಟ್ಟೆಗೆ ಬರಲಾರಂಭಿಸಿದ್ದು, ತೋತಾಪುರಿ ಕೆ.ಜಿ ₹100, ಬೆನಿಷಾ ಕೆ.ಜಿ ₹80ಕ್ಕೆ ಮಾರಾಟವಾಗುತ್ತಿದೆ.

ಅಡುಗೆ ಎಣ್ಣೆ: ಅಡುಗೆ ಎಣ್ಣೆಯಲ್ಲಿ ಪಾಮಾಯಿಲ್ ದರ ಅಲ್ಪ ತಗ್ಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹108–110, ಪಾಮಾಯಿಲ್ ಕೆ.ಜಿ ₹88–90, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕಾಳು ಏರಿಕೆ: ಹೆಸರು ಕಾಳು ಧಾರಣೆ ಕೊಂಚ ಕಡಿಮೆಯಾಗಿದ್ದರೆ, ತೊಗರಿಬೇಳೆ, ಅಲಸಂದೆ, ಅವರೆಕಾಳು, ಹುರಿಗಡಲೆ ಅಲ್ಪ ಹೆಚ್ಚಳ ದಾಖಲಿಸಿದೆ. ಸಕ್ಕರೆ ಏರುಗತಿಯಲ್ಲೇ ಸಾಗಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ದರ ಮತ್ತೆ ಏರಿಕೆಯತ್ತ ಹೆಜ್ಜೆ ಹಾಕಿದೆ. ಧನ್ಯ, ಮೆಣಸಿನ ಕಾಯಿ, ಮೆಣಸು, ಗೋಡಂಬಿ ಅಲ್ಪ ಪ್ರಮಾ
ಣದಲ್ಲಿ ಹೆಚ್ಚಳವಾಗಿವೆ. ಚಕ್ಕೆ, ಸಾಸಿವೆ, ಮೆಂತ್ಯ, ಲವಂಗ ಕಡಿಮೆಯಾಗಿದೆ.

ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹250–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹230–240, ಹುಣಸೆಹಣ್ಣು ₹120–140, ಕಾಳುಮೆಣಸು ಕೆ.ಜಿ ₹630–650, ಜೀರಿಗೆ ಕೆ.ಜಿ ₹270–300, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹85–90, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹900–950, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಬಾದಾಮಿ ಕೆ.ಜಿ ₹620–650, ಗೋಡಂಬಿ ಕೆ.ಜಿ ₹650–700, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಮತ್ತೆ ಹೆಚ್ಚಳ: ಕೋಳಿ ಮಾಂಸದ ಬೆಲೆ ವಾರದಿಂದ ವಾರಕ್ಕೆ ಹೆಚ್ಚುತ್ತಲೇ ಸಾಗಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹150, ರೆಡಿ ಚಿಕನ್ ಕೆ.ಜಿ ₹260, ಸ್ಕಿನ್‌ಲೆಸ್ ಕೆ.ಜಿ ₹280, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಹೆಚ್ಚಳವಾಗಿದೆ.

ಮೀನು ದುಬಾರಿ: ಸಮುದ್ರ ಮೀನಿನ ಬೆಲೆ ಪ್ರತಿ ವಾರವೂ ಹೆಚ್ಚುತ್ತಲೇ ಸಾಗಿದೆ. ಬೇಸಿಗೆಯಲ್ಲಿ ಮೀನು ಬರುವುದು ಕಡಿಮೆಯಾಗಿದ್ದು, ಇನ್ನೂ ಕೆಲವು ವಾರ ಇದೇ ಸ್ಥಿತಿ ಮುಂದುವರಿಯಲಿದೆ. ಬಂಗುಡೆ ಕೆ.ಜಿ ₹280, ಬೂತಾಯಿ ಕೆ.ಜಿ ₹190, ಬೊಳಿಂಜರ್ ಕೆ.ಜಿ ₹210, ಅಂಜಲ್ ಕೆ.ಜಿ ₹1,440, ಬಿಳಿಮಾಂಜಿ ಕೆ.ಜಿ ₹1,630, ಕಪ್ಪುಮಾಂಜಿ ಕೆ.ಜಿ ₹1,000, ಇಂಡಿಯನ್ ಸಾಲ್ಮನ್ ಕೆ.ಜಿ ₹950, ಸೀಗಡಿ ಕೆ.ಜಿ ₹430–700, ಏಡಿ ಕೆ.ಜಿ 500ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT