ಶನಿವಾರ, ಜನವರಿ 18, 2020
18 °C
ವಿವಿಧ ಸಂಘಟನೆಗಳ ಹೋರಾಟ ಹಾಗೂ ನಾಗರಿಕರ ಆಗ್ರಹಕ್ಕೆ ಮಣಿದ ಸರ್ಕಾರ; ಶಾಸಕರಿಂದಲೂ ಎರಡು ಬಾರಿ ಮುಖ್ಯಮಂತ್ರಿಗೆ ಮನವಿ

ತುಮಕೂರು ಪಾಲಿಕೆಗೆ ಭೂಬಾಲನ್ ಮರು ನಿಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಐಎಎಸ್ ಅಧಿಕಾರಿ ಟಿ.ಭೂಬಾಲನ್ ಅವರನ್ನು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ರಾಜ್ಯ ಸರ್ಕಾರ ಮರು ನಿಯೋಜಿಸಿದೆ. ಬುಧವಾರ (ಡಿ.18) ಬೆಳಿಗ್ಗೆ 9.45ಕ್ಕೆ ಅವರು ಅಧಿಕಾರ ಸ್ವೀಕರಿಸುವರು.

ಬೆಳಗಾವಿಯ ಮಲಪ್ರಭಾ–ಘಟಪ್ರಭಾ ಯೋಜನೆಯ ವಿಶೇಷ ಜಿಲ್ಲಾಧಿಕಾರಿ (ಭೂಸ್ವಾಧೀನ) ಹುದ್ದೆಗೆ ಅವರನ್ನು ವರ್ಗಾಯಿಸಲಾಗಿತ್ತು.

‘ಜನಸ್ನೇಹಿ’ ಅಧಿಕಾರಿ ಎಂದು ಭೂಬಾಲನ್ ನಾಗರಿಕರ ಬಾಯಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಹೆಚ್ಚುವರಿ ಹೊಣೆವಹಿಸಿಕೊಂಡಿದ್ದರು. ನಗರದ ಅಭಿವೃದ್ಧಿಗೆ ಅವರು ಕೈಗೊಂಡ ಕ್ರಮಗಳು ಬಾರಿ ಪ್ರಶಂಸೆಗೆ ಪಾತ್ರವಾಗಿದ್ದವು. ಅವರ ವರ್ಗಾವಣೆ ರದ್ದುಗೊಳಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ಸಹ ನಡೆಸಿದ್ದವು.

‘ಭೂಬಾಲನ್‌ ವರ್ಗಾವಣೆಯಿಂದ ತುಮಕೂರು ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಆಡಚಣೆ ಉಂಟಾಗುತ್ತದೆ. ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯ ಹೊಂದಿರುವ ಆಯುಕ್ತರ ಸೇವೆ ನನ್ನ ಕ್ಷೇತ್ರಕ್ಕೆ ಅವಶ್ಯ’ ಎಂದು ಶಾಸಕ ಜ್ಯೋತಿ ಗಣೇಶ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡು ಬಾರಿ ಲಿಖಿತವಾಗಿ ಮನವಿ ಮಾಡಿದ್ದರು.

2019ರ ಜನವರಿಯಲ್ಲಿ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಭೂಬಾಲನ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಅಧಿಕಾರ ವಹಿಸಿಕೊಂಡಿದ್ದರು.

ಭೂಬಾಲನ್ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ನಂತರ ಕಾಮಗಾರಿಗಳಿಗೆ ವೇಗ ನೀಡಿದ್ದರು. ಎರಡೇ ತಿಂಗಳಲ್ಲಿ ₹ 712 ಕೋಟಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದರು. ಕಾಮಗಾರಿ ವಿಳಂಬ ಮತ್ತು ಸಾರ್ವಜನಿಕ ಹಿತದೃಷ್ಟಿಯಲ್ಲಿ ಅಗತ್ಯ ಸುರಕ್ಷಾ ಕ್ರಮಗಳನ್ನು ವಹಿಸದ ಗುತ್ತಿಗೆದಾರರಿಗೆ ₹ 65.9 ಲಕ್ಷ ದಂಡ ವಿಧಿಸಿದ್ದರು.

ಮಾಜಿ ಮೇಯರ್, ಉಪಮೇಯರ್‌ ಸೇರಿದಂತೆ ಪಾಲಿಕೆ ಸದಸ್ಯರು ಅನಧಿಕೃತವಾಗಿ ತಮ್ಮ ವಶಕ್ಕೆ ಪಡೆದಿದ್ದ 22 ನೀರಿನ ಘಟಕಗಳನ್ನು ಪಾಲಿಕೆ ಸುಪರ್ದಿಗೆ ಪಡೆದಿದ್ದರು. ಕಾಮಗಾರಿ ಲೋಪದ ಕಾರಣಕ್ಕೆ ವಿವಿಧ ಕಂಪನಿಗಳಿಗೆ ₹ 1 ಲಕ್ಷದಿಂದ ₹ 50 ಲಕ್ಷದ ವರೆಗೆ ದಂಡ ವಿಧಿಸಿದ್ದರು.

ಹೀಗೆ ಪಾಲಿಕೆ ಆಯುಕ್ತರಾಗಿ ಹಾಗೂ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಅವರು ಕೈಗೊಂಡ ಹಲವು ಕ್ರಮಗಳು ನಗರ ಹಾಗೂ ಜಿಲ್ಲೆಯಲ್ಲಿ ಅವರನ್ನು ಜನಪ್ರಿಯಗೊಳಿಸಿತ್ತು. ಜನರಿಗೆ ಹತ್ತಿರವಾಗಿಸಿತ್ತು.

ಸೆ.19ರಂದು ಅವರಿಗೆ ದೇಶದ 100 ಸ್ಮಾರ್ಟ್‌ಸಿಟಿಗಳಲ್ಲಿಯೇ ಅತ್ಯುತ್ತಮ ವ್ಯವಸ್ಥಾಪಕ ನಿರ್ದೇಶಕ ಎನ್ನುವ ಪ್ರಶಸ್ತಿ ನೀಡಲಾಗಿತ್ತು. ಈ ಪ್ರಶಸ್ತಿ ಬಂದ ಮರುದಿನವೇ ಆ ಹುದ್ದೆಯಿಂದ ಅವರನ್ನು ಬಿಡುಗಡೆಗೊಳಿಸಿ ಆದರ್ಶಕುಮಾರ್ ಅವರನ್ನು ರಾಜ್ಯ ಸರ್ಕಾರ ನೇಮಿಸಿತ್ತು.

ಇದಾದ ಸ್ವಲ್ಪ ದಿನಕ್ಕೆ ಪಾಲಿಕೆ ಆಯುಕ್ತ ಹುದ್ದೆಯಿಂದ ಅವರನ್ನು ಬೆಳಗಾವಿಯ ಮಲಪ್ರಭಾ–ಘಟಪ್ರಭಾ ಯೋಜನೆಯ ವಿಶೇಷ ಜಿಲ್ಲಾಧಿಕಾರಿ (ಭೂಸ್ವಾಧೀನ) ಹುದ್ದೆಗೆ ವರ್ಗಾಯಿಸಲಾಯಿತು. ಗೋಕಾಕ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಧಿಕಾರಿಯನ್ನಾಗಿಯೂ ನೇಮಿಸಲಾಯಿತು.

ಭೂಬಾಲನ್ ವರ್ಗಾವಣೆ ನಾಗರಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಹ ಸಲ್ಲಿಸಿದ್ದರು. ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಸಂಸದ ಜಿ.ಎಸ್.ಬಸವರಾಜು ಉಪಚುನಾವಣೆ ನಂತರ ಭೂಬಾಲನ್ ಅವರನ್ನು ಮರು ನಿಯೋಜಿಸುವುದಾಗಿ ಭರವಸೆ ಸಹ ನೀಡಿದ್ದರು.

ಅಲ್ಲಿಗೆ ಭೂಬಾಲನ್ ಪರವಾದ ಪ್ರತಿಭಟನೆಗಳು ನಿಂತಿದ್ದವು. ಉಪಚುನಾವಣೆ ನಂತರ ಭೂಬಾಲನ್ ಮರು ನಿಯೋಜಿಸುವಂತೆ ಮತ್ತೆ ವಿವಿಧ ಸಂಘಟನೆಗಳು ಪ್ರತಿಭಟನೆಯ ಹಾದಿ ಹಿಡಿದಿದ್ದವು. ಮಂಗಳವಾರ (ಡಿ.16) ಸಹ ಮುಖಂಡರು ಪ್ರತಿಭಟನೆ ನಡೆಸಿದ್ದರು.

***

ಸಮನ್ವಯದ ಕೆಲಸ; ಅಭಿವೃದ್ಧಿಗೆ ಮುನ್ನುಡಿ

ತುಮಕೂರು: ‘ಭೂಬಾಲನ್ ಮರುನಿಯೋಜಿಸುವಂತೆ ಎರಡು ಬಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆ. ಅವರು ಸ್ಪಂದಿಸಿದ್ದಾರೆ’ ಎಂದು ಶಾಸಕ ಬಿ.ಜಿ.ಜ್ಯೋತಿ ಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಕೆಲಸ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ. ಹೊಂದಾಣಿಕೆ ಮುಖ್ಯ. ಈಗ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಜಿಲ್ಲಾಧಿಕಾರಿ ಇದ್ದಾರೆ. ಭೂಬಾಲನ್ ಅವರಿಗೆ ಈ ಜವಾಬ್ದಾರಿ ಕೊಡಬಹುದು ಎಂದು ಹೇಳಿದರು.

ಮಹಾನಗರ ಪಾಲಿಕೆಗೆ ಹೇಳುವವರು ಕೇಳುವವರು ಇರಲಿಲ್ಲ. ಈಗ ಒಬ್ಬ ಜವಾಬ್ದಾರಿಯುತ ಅಧಿಕಾರಿ ಬಂದಂತೆ ಆಗುತ್ತದೆ. ಜನ ಸಾಮಾನ್ಯರ ಕೆಲಸಗಳು ಆಗುತ್ತವೆ. ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಾಗುವುದು. ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸರಣಿ ಸಭೆ ನಡೆಸಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು