ತುಮಕೂರು: ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಜನ ಸಮುದಾಯವನ್ನು ವಿಂಗಡಿಸುವ, ಕತ್ತರಿ ಹಾಕುವ ಕೆಲಸದಲ್ಲಿ ಬಿಜೆಪಿ ನಿರತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪಕ್ಷದ ಮುಂಚೂಣಿ ಘಟಕಗಳಾದ ಯುವ ಕಾಂಗ್ರೆಸ್, ಎಸ್ಸಿ, ಎಸ್ಟಿ, ಒಬಿಸಿ, ಮಹಿಳಾ, ಸೇವಾದಳ, ಕಾರ್ಮಿಕ ಘಟಕದ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಶ್ರೀರಾಮ ಸತ್ಯ, ಧರ್ಮ, ಸಮಾನತೆಯ ಪ್ರತೀಕ. ಆದರೆ ಬಿಜೆಪಿಯವರು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸಲು ಹೊರಟಿದ್ದಾರೆ. ಗಾಂಧಿಜೀ ಅವರ ಸತ್ಯಮೇವ ಜಯತೆ ಎಂಬುದು ಪಕ್ಷದ ಮೂಲ ಮಂತ್ರ. ಭಾರತೀಯರೆಲ್ಲರೂ ಸಮಾನರೆಂದು ಪರಿಗಣಿಸಿ ಸೂಜಿಯಿಂದ ಹೊಲೆಯುವ ಕೆಲಸವನ್ನು ನಾವು ಮಾಡುತ್ತಿದ್ದರೆ, ಬಿಜೆಪಿಯವರು ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇದ್ದು, ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದರು.
ಎಸ್.ಪಿ.ಮುದ್ದಹನುಮೇಗೌಡ ಸಜ್ಜನ ರಾಜಕಾರಣಿ. ಪಕ್ಷದ ಮಂಚೂಣಿ ಘಟಕಗಳು, ಅದರಲ್ಲಿಯೂ ಯುವ ಕಾಂಗ್ರೆಸ್, ಮಹಿಳಾ ಘಟಕಗಳು ಪ್ರತಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ತಿಳಿಸಬೇಕು. ಐದು ಗ್ಯಾರಂಟಿಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಪ್ರತಿ ಬೂತ್‌ನಲ್ಲೂ ಕಳೆದ ಬಾರಿಗಿಂತ ಕನಿಷ್ಠ 50ರಿಂದ 100 ಮತಗಳು ಹೆಚ್ಚುವರಿಯಾಗಿ ಬರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ಮಂದಿರ, ಮಸೀದಿ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ವಿದ್ಯಾವಂತ ಯುವಕರು ಬಿಜೆಪಿಯವರ ಜತೆ ಸೇರಿಕೊಂಡು ಪೊಲೀಸರು ದಾಖಲಿಸುವ ಪ್ರಕರಣಗಳಲ್ಲಿ ಸಿಲುಕಿಕೊಂಡು ಉದ್ಯೋಗ ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಸಿಲುಕುತ್ತಿದ್ದಾರೆ. ಮಂಗಳೂರು ಭಾಗದ ಯುವಕರು ಬಿಜೆಪಿ, ಸಂಘ ಪರಿಹಾರದ ಬಣ್ಣದ ಮಾತುಗಳಿಗೆ ಮರುಳಾಗಿ, ಕೆಲಸವಿಲ್ಲದೆ ಪರಿತಪಿಸುತಿದ್ದಾರೆ’ ಎಂದು ಎಚ್ಚರಿಸಿದರು.
ಶ್ರೀರಾಮನ ಜತೆ ಸೀತೆ, ಲಕ್ಷ್ಮಣ, ಹನುಮಂತ ಇದ್ದರೆ ಒಳಿತು. ಆದರೆ ಬಿಜೆಪಿಯವರಿಗೆ ಶ್ರೀರಾಮನನ್ನು ಬಿಟ್ಟು ಬೇರೆ ಯಾರೂ ಬೇಡವಾಗಿದ್ದಾರೆ ಎಂದರು.
ಕೆಪಿಸಿಸಿ ಒಬಿಸಿ ಘಟಕದ ಎಂ.ಸಿ.ವೇಣುಗೋಪಾಲ್, ‘ಮಂಚೂಣಿ ಘಟಕಗಳ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ, ಪಕ್ಷದ ಪರ ಪ್ರಚಾರ ನಡೆಸಿ, ಎಸ್.ಪಿ.ಮುದ್ದಹನುಮೇಗೌಡ ಗೆಲುವಿಗೆ ಸಹಕಾರಿಯಾಗಬೇಕು’ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ, ಮಾಜಿ ಶಾಸಕರಾದ ಗಂಗಹನುಮಯ್ಯ, ರಫೀಕ್ ಅಹಮದ್, ಮುಖಂಡರಾದ ಎನ್.ಗೋವಿಂದರಾಜು, ಶಶಿಹುಲಿಕುಂಟೆ ಮಠ್, ಪುಟ್ಟರಾಜು, ಕುಮಾರಸ್ವಾಮಿ, ಕಾರ್ಮಿಕ ಘಟಕದ ಸೈಯದ್ ದಾದಾಪೀರ್, ಸೇವಾ ದಳದ ಕಿರಣ್ ಕುಮಾರ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.