ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಗೆಲುವು ತಡೆಯಲು ಸಾಧ್ಯವಿಲ್ಲ

ಶಿರಾದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ
Last Updated 31 ಅಕ್ಟೋಬರ್ 2020, 4:21 IST
ಅಕ್ಷರ ಗಾತ್ರ

ಶಿರಾ: ‘ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡಿ ಇಲ್ಲಿ ಬಿಜೆಪಿ ಜಯ ಗಳಿಸುವುದು ಖಚಿತ. ಬಿಜೆಪಿಯ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ಮದಲೂರು ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡನೇ ಸ್ಥಾನಕ್ಕೆ ಹೋರಾಟ ನಡೆಸಬೇಕಾಗಿದೆ ಎಂದರು.

ಬಿಜೆಪಿಯನ್ನು ಗೆಲ್ಲಿಸಿದರೆ ತಾಲ್ಲೂಕನ್ನು ಶಿಕಾರಿಪುರದ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಇದುವರೆಗೂ ಯಡಿಯೂರಪ್ಪ ನೀಡಿರುವ ಯಾವ ಭರವಸೆಗಳು ಹುಸಿಯಾಗಿಲ್ಲ ಎಂದರು.

ಮದಲೂರು ಕೆರೆಯನ್ನು 6 ತಿಂಗಳಲ್ಲಿ ತುಂಬಿಸಲಾಗುವುದು ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ 60 ಕೆರೆಗಳನ್ನು ತುಂಬಿಸಲಾಗುವುದು. ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ವಿತರಿಸಲಾಗುವುದು ಮನೆ ಬೇಕು ಎಂದವರಿಗೆ ₹5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಮದ್ದಾಕನಹಳ್ಳಿ ಕಲ್ಲುಗಣಿಗಾರಿಕೆ ಸಮಸ್ಯೆ ಸರಿ ಪಡಿಸಲಾಗುವುದು. ಈಗಾಗಲೇ ದೇವಾಲಯಗಳ ಅಭಿವೃದ್ಧಿಗೆ ಹಣ ನೀಡಿದ್ದು ಕಾಡುಗೊಲ್ಲರ ಜುಂಜಪ್ಪ ದೇವಸ್ಥಾನಕ್ಕೆ ಸಹ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಶ್ರೀ ಶಕ್ತಿ ಸಂಘಗಳನ್ನು ಬಲಪಡಿಸಲು ಮಹಿಳಾ ಸಬಲೀಕರಣಕ್ಕೆ ಎಲ್ಲ ರೀತಿಯ ಅನುಕೂಲ ನೀಡಲಾಗುವುದು. ಒಟ್ಟಿನಲ್ಲಿ ಗೌರವಯುತವಾದ ಬದುಕಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ‘ರೈತರ ಆದಾಯ ದ್ವಿಗುಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದರು ರೈತರಿಗೆ ಬಂದಿಲ್ಲ. ರೈತರಿಗೆ ತಾವು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡುವ ಹಕ್ಕು ಇಲ್ಲ. ಎಪಿಎಂಸಿ ಮತ್ತು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಬೇಕಿತ್ತು ಈಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಸ್ಪರ್ಧಾತ್ಮಕ ಮಾರುಕಟ್ಟೆ ನಿರ್ಮಾಣ ಮಾಡಿರುವುದರಿಂದ ರೈತರಿಗೆ ಹೆಚ್ಚಿನ ಲಾಭವಾಗುವುದು’ ಎಂದರು.

ಸಚಿವ ಶ್ರೀರಾಮುಲು ಮಾತನಾಡಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಶಿರಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಇಲ್ಲಿ ಬಿಜೆಪಿ ಗೆಲ್ಲಲಿದೆ. ಮುಖ್ಯಮಂತ್ರಿಯಾಗುವುದಾಗಿ ಅವರು ಹಗಲು ಕನಸು ಕಾಣುತ್ತಿದ್ದಾರೆ ಯಡಿಯೂರಪ್ಪ ಮುಖ್ಯಮಂತ್ರಿ ಕುರ್ಚಿಯ ಮೇಲೆ‌ ಬಲವಾಗಿ ಕುಳಿತಿದ್ದಾರೆ ಅವರನ್ನು ಕೆಳಗೆ ಇಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಅವರು ಮಾತನಾಡಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದರೆ ಯಾವುದೇ ಪ್ರಯೋಜನವಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಮತ ನೀಡಿದರೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ನಾರಾಯಣಗೌಡ, ವಿಧಾನ ಪರಿಷತ್‌ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಚಿದಾನಂದ ಎಂ.ಗೌಡ, ಜಿಲ್ಲಾಧ್ಯಕ್ಷ‌ ಸುರೇಶ್ ಗೌಡ, ಸಂಸದರಾದ ಪ್ರತಾಪಸಿಂಹ, ಎ.ನಾರಾಯಣಸ್ವಾಮಿ, ಪಿ.ಸಿ.ಮೋಹನ್, ಮುನಿಸ್ವಾಮಿ, ಶಾಸಕರಾದ ರೇಣುಕಾಚಾರ್ಯ, ಪೂರ್ಣಿಮಾ ಶ್ರೀನಿವಾಸ್, ಜ್ಯೋತಿಗಣೇಶ್, ನಾಗೇಶ್, ತಿಪ್ಪಾರೆಡ್ಡಿ, ಪ್ರೀತಂಗೌಡ, ಸತೀಶ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಭಾರತಿಶೆಟ್ಟಿ, ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ, ಡಾ.ಹುಲಿನಾಯ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT