ಮಂಗಳವಾರ, ಮಾರ್ಚ್ 21, 2023
23 °C
ಫೆ. 6ರಂದು ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ

ಜಿಲ್ಲೆಗೆ ಬರಲಿದೆ ಬಂಡವಾಳ: ಸಚಿವ ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆ ಉದ್ಯಮ ಕ್ಷೇತ್ರದಲ್ಲಿ ದಾಪುಗಾಲು ಹಾಕಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬಂಡವಾಳ ಹರಿದು ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಜಿಲ್ಲಾ ಆಡಳಿತ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಬಳಿ 615 ಎಕರೆ ಪ್ರದೇಶದಲ್ಲಿ ₹5 ಸಾವಿರ ಕೋಟಿ ವೆಚ್ಚದಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ನಿರ್ಮಾಣ ಮಾಡಿದ್ದು, ಸುಮಾರು 4 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಅಭಿವೃದ್ಧಿಗೆ ಈಗಾಗಲೇ ₹930 ಕೋಟಿ ವೆಚ್ಚ ಮಾಡಲಾಗಿದೆ. ಜಿಲ್ಲೆಯ 10 ಕಡೆಗಳಲ್ಲಿ ನಮ್ಮ ಕ್ಲಿನಿಕ್ ತೆರೆಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಂಚನೆ ಆರೋಪದ ಮೇಲೆ ಬಂಧಿತ ಸ್ಯಾಂಟ್ರೊ ರವಿ ಅಲಿಯಾಸ್ ಕೆ.ಎಸ್.ಮಂಜುನಾಥ್‌ನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿಲ್ಲ. ಮತ್ತೊಮ್ಮೆ ಪ್ರಯತ್ನ ನಡೆಸಲಾಗುವುದು’ ಎಂದರು.

ಸ್ಯಾಂಟ್ರೊ ರವಿಯನ್ನು ಪೊಲೀಸರು ವಿಚಾರಣೆ ನಡೆಸಿದರೆ ಬಿಜೆಪಿಯವರ ಅಕ್ರಮ ಬಯಲಾಗಲಿದೆ ಎಂದು ಹೆದರಿ ಪೊಲೀಸರು ವಶಕ್ಕೆ ಪಡೆಯುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿ, ‘ರವಿ 20 ವರ್ಷಗಳಿಂದ ಕಾರ್ಯಾಚರಣೆ ನಡೆಸಿದ್ದಾನೆ. ಸಿದ್ದರಾಮಯ್ಯ ಕಾಲದಲ್ಲೂ ಇದ್ದ. ಎಲ್ಲವೂ ತನಿಖೆಯಾಗಲಿದೆ’ ಎಂದು ಹೇಳಿದರು.

ಎಚ್‌ಎಎಲ್ ಘಟಕಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಫೆ. 6ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದರು.

ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಪರಿಷತ್ ಸದಸ್ಯರಾದ ಆರ್.ರಾಜೇಂದ್ರ, ಚಿದಾನಂದಗೌಡ, ಮಹಾನಗರ ಪಾಲಿಕೆ ಮೇಯರ್ ಎಂ.ಪ್ರಭಾವತಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿ.ಪಂ ಸಿಇಒ ಕೆ.ವಿದ್ಯಾಕುಮಾರಿ, ಎಸ್‌ಪಿ ಆರ್.ಕೆ.ಶಹಪೂರವಾಡ್ ಇತರರು ಇದ್ದರು.

ತಡವಾದ ಧ್ವಜಾರೋಹಣ

ಜಿಲ್ಲಾ ಆಡಳಿತ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸುವುದು ನಾಲ್ಕು ನಿಮಿಷ ತಡವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ತಡವಾಗಿ ಬಂದು ಧ್ವಜಾರೋಹಣ ಮಾಡಿದರು.

ಸಾಮಾನ್ಯವಾಗಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ಮಾಡುವುದು ನಡೆದುಕೊಂಡು ಬಂದಿದೆ. ಜೂನಿಯರ್ ಕಾಲೇಜು ಮೈದಾನಕ್ಕೆ ಸಚಿವರು ಬರುವುದು ತಡವಾಯಿತು. ಕೊನೆಗೆ ಗಡಿಬಿಡಿಯಲ್ಲಿ ವೇದಿಕೆ ಏರಿ ಧ್ವಜಾರೋಹಣ ನೆರವೇರಿಸಿದರು.

ಅಧಿಕಾರಿಗಳು ಬರೆದುಕೊಟ್ಟಿದ್ದ ಭಾಷಣವನ್ನು ತಪ್ಪು ತಪ್ಪಾಗಿ ತೊದಲುತ್ತಲೇ ಓದಿದರು. ಕೆಲ ಸಮಯ ಯಾವ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ನೆರೆದಿದ್ದವರಿಗೆ ತಿಳಿಯದಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು